ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಅಂಡರ್‌ಪಾಸ್‌ಗಳಲ್ಲಿ ಮೀಟರ್‌ ಗೇಜ್‌

Published 14 ಜೂನ್ 2023, 17:03 IST
Last Updated 14 ಜೂನ್ 2023, 17:03 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅಂಡರ್‌ಪಾಸ್‌ಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ, ದೀಪ ಹಾಗೂ ಮಳೆ ನೀರಿನ ಮೀಟರ್‌ ಗೇಜ್‌ ಅಳವಡಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ನಗರದಲ್ಲಿ ಮಳೆಗಾಲದ ಸಿದ್ದತೆ ಕುರಿತು ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 53 ಅಂಡರ್‌ಪಾಸ್‌ಗಳಿವೆ. ಇದರಲ್ಲಿ 41 ಅಂಡರ್‌ಪಾಸ್‌ಗಳಲ್ಲಿ ಈಗಾಗಲೇ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಉಳಿದ 12 ಅಂಡರ್‌ಪಾಸ್‌ಗಳಲ್ಲಿ ತುರ್ತು ಕಾಮಗಾರಿಗಳನ್ನು ಕೂಡಲೇ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ನಗರದಲ್ಲಿ 198 ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಿದ್ದು, ಅದರಲ್ಲಿ 122 ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ನೀಡಲಾಗಿದೆ. 76 ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳಲಾಗಿದೆ, ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತೊಮ್ಮೆ ಪರಿಶೀಲಿಸಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ ಎಂದು ಹೇಳಿದರು.

ವಲಯ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ನೀರು ನಿಲ್ಲುವಂತಹ ಪ್ರದೇಶದಲ್ಲಿ ಪಂಪ್‌ಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಅರಣ್ಯ ವಿಭಾಗದಿಂದ ಮರಗಳು ಬಿದ್ದಿರುವ ಸ್ಥಳಕ್ಕೆ ತ್ವರಿತವಾಗಿ ಹೋಗಲು ತಂಡಗಳು ಸದಾ ಸನ್ನದ್ಧವಾಗಿರಬೇಕು. ನಗರದಲ್ಲಿ ಮೆಟ್ರೊ, ಜಲಮಂಡಳಿ, ಬೆಸ್ಕಾಂ, ಕೆ.ಪಿ.ಟಿ.ಸಿ.ಎಲ್, ಗೇಲ್ ಸೇರಿದಂತೆ ಇನ್ನಿತರೆ ಇಲಾಖೆಗಳು ಕೈಗೆತ್ತಿಕೊಳ್ಳುವ ಕಾಮಗಾರಿಗಳಿಂದ ರಸ್ತೆ ಬದಿಯ ಚರಂಡಿಗಳು, ರಸ್ತೆ ಮೇಲ್ಮೈ ಹಾಳಾಗಿ ಮಳೆಗಾಲದಲ್ಲಿ ರಸ್ತೆಗಳ ಮೂಲಕ ನೀರು ನುಗ್ಗುವುದು, ನೀರು ನಿಲ್ಲುವ ಸಮಸ್ಯೆಯಾಗುತ್ತಿದೆ. ಶೀಘ್ರವಾಗಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಗಳ ಜೊತೆ ಸಮನ್ವಯ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುವುದು ಎಂದರು.

ವಲಯಗಳ ಹಿರಿಯ ಅಧಿಕಾರಿಗಳು ಮಳೆಗಾಲದಲ್ಲಿ ರಾಜಕಾಲುವೆ ಕಾಮಗಾರಿ, ಪ್ರವಾಹ ಪೀಡಿತ ಪ್ರದೇಶಗಳು, ಕೆಳಸೇತುವೆ ಹಾಗೂ ಮೇಲ್ಸೇತುವೆ‌ಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಸೂಚಿಸಲಾಗಿದೆ ಎಂದು ತುಷಾರ್ ಗಿರಿನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT