ಶನಿವಾರ, ಸೆಪ್ಟೆಂಬರ್ 25, 2021
22 °C
ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌–ಕೆ.ಆರ್. ಪುರ ಮಾರ್ಗ

ರೀಚ್‌ 2ಎ: ಮಣ್ಣಿನ ಪರೀಕ್ಷೆ ಆರಂಭ; ಮೆಟ್ರೊ ಕಾಮಗಾರಿ ಆರಂಭಕ್ಕೆ ದಿನಗಣನೆ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿನ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌– ಕೆ.ಆರ್. ಪುರ ಮಾರ್ಗದಲ್ಲಿ (ರೀಚ್‌ 2ಎ) ಬೆಂಗಳೂರು ಮೆಟ್ರೊ ರೈಲು ನಿಗಮವು ಮಣ್ಣಿನ ಪರೀಕ್ಷೆ ಆರಂಭಿಸಿದ್ದು, ಒಂದೆರಡು ವಾರದಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಬಹುದಿನದ ನಿರೀಕ್ಷೆ ಈಡೇರುತ್ತಿರುವುದಕ್ಕೆ ಸ್ಥಳೀಯರೂ ಸಂತಸ ವ್ಯಕ್ತಪಡಿಸಿದ್ದಾರೆ.

‘ಈ ಮಾರ್ಗದಲ್ಲಿ ಕಾಮಗಾರಿ ಯಾವಾಗ ಪ್ರಾರಂಭವಾಗುತ್ತದೆಯೋ ಎಂದು ವರ್ಷಗಳಿಂದ ಕಾಯುತ್ತಿದ್ದೆವು. ಈಗ ಮಣ್ಣಿನ ಪರೀಕ್ಷೆ ಆರಂಭಿಸಿರುವುದು ಸಂತಸ ತಂದಿದೆ. ಮುಂದೆ ಸಂಚಾರ ದಟ್ಟಣೆ ಕಡಿಮೆಯಾಗುವುದಲ್ಲದೆ, ವಾಯುಮಾಲಿನ್ಯವೂ ಸಾಕಷ್ಟು ತಗ್ಗಲಿದೆ’ ಎಂದು ಇಬ್ಬಲೂರು ನಿವಾಸಿ ರಮೇಶ್‌ ಹೇಳಿದರು.

ಎರಡು ಪ್ಯಾಕೇಜ್‌ನಲ್ಲಿ ಈ 2ಎ ಮಾರ್ಗದ ನಿರ್ಮಾಣ ಕಾರ್ಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಕೈಗೆತ್ತಿಕೊಂಡಿದೆ. ಸಿಲ್ಕ್‌ ಬೋರ್ಡ್‌ನಿಂದ ಕಾಡುಬೀಸನಹಳ್ಳಿಯವರೆಗಿನ (10 ಕಿ.ಮೀ) ಮೊದಲ ಪ್ಯಾಕೇಜ್‌ನ ನಿರ್ಮಾಣ ಗುತ್ತಿಗೆಯನ್ನು ಆಫ್ಕಾನ್ಸ್‌ ಸಂಸ್ಥೆ ಪಡೆದಿದ್ದರೆ, ಕಾಡುಬೀಸನಹಳ್ಳಿಯಿಂದ ಬೈಯಪ್ಪನಹಳ್ಳಿಯವರೆಗಿನ (9.75 ಕಿ.ಮೀ) ಎರಡನೇ ಪ್ಯಾಕೇಜ್‌ನ ಗುತ್ತಿಗೆಯನ್ನು ಶಂಕರನಾರಾಯಣ ಕನ್‌ಸ್ಟ್ರಕ್ಷನ್‌ ಪಡೆದಿದೆ.

‘ಇಬ್ಬಲೂರು ಮತ್ತು ಮಹದೇವಪುರ ಮೇಲ್ಸೇತುವೆ ಬಳಿ ಶುಕ್ರವಾರದಿಂದ (ಜೂನ್‌ 25) ಮಣ್ಣಿನ ಪರೀಕ್ಷೆ ಆರಂಭಿಸಲಾಗಿದೆ. ಮಣ್ಣಿನ ಮಾದರಿ ಸಂಗ್ರಹಿಸಿ, ಗುತ್ತಿಗೆ ಪಡೆದಿರುವ ಕಂಪನಿಯ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್‌ನ ಸಹಾಯಕ ಎಂಜಿನಿಯರ್‌ ಆರ್. ಆದರ್ಶ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಇಳಿಜಾರು ಅಥವಾ ಪ್ರಮುಖ ಸ್ಥಳಗಳಲ್ಲಿ (ಪಿಯರ್‌ ಲೊಕೇಶನ್‌) ಮಣ್ಣಿನ ಪರೀಕ್ಷೆ ನಡೆಸಲಾಗುತ್ತಿದೆ. 20ರಿಂದ 30 ಮೀಟರ್‌ಗೆ ಒಂದೊಂದು ಪಿಯರ್‌ ಲೊಕೇಶನ್‌ ಗುರುತಿಸಲಾಗಿದೆ. ಈ ರೀಚ್‌ನಲ್ಲಿ ಸುಮಾರು 25ರಿಂದ 30 ಕಡೆಗಳಲ್ಲಿ ಇಂತಹ ಪಿಯರ್ ಲೊಕೇಶನ್‌ಗಳಿವೆ. ಯಾವ ಸ್ಥಳದಲ್ಲಿ ಗಟ್ಟಿ ಅಥವಾ ಹಗುರ ಮಣ್ಣಿದೆ, ಎಲ್ಲಿ ಬಂಡೆಗಳು ಇವೆ ಎಂಬುದು ಇದರಿಂದ ತಿಳಿಯುತ್ತದೆ. ಮಣ್ಣಿನ ಗುಣ, ಎಷ್ಟು ಆಳದವರೆಗೆ ಹೋಗಿ ಅಡಿಪಾಯ ಹಾಕಬೇಕು ಎಂಬುದೆಲ್ಲ ಇದರಿಂದ ತಿಳಿಯುತ್ತದೆ’ ಎಂದು ಅವರು ತಿಳಿಸಿದರು.

‘ಒಂದು ಸ್ಥಳದಲ್ಲಿ ಮಣ್ಣಿನ ಪರೀಕ್ಷೆ ಮಾಡಬೇಕು ಎಂದರೆ, ಸುಮಾರು 30 ಮೀಟರ್‌ ಅಥವಾ 100 ಅಡಿ ಆಳದವರೆಗೆ ಗುಂಡಿ ತೋಡಿ ಮಾದರಿ ಸಂಗ್ರಹಿಸಬೇಕಾಗುತ್ತದೆ. ಒಂದೆರಡು ವಾರದಲ್ಲಿ ವರದಿ ಬರುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.

₹ 14,788 ಕೋಟಿ ವೆಚ್ಚ: ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಕೆ.ಆರ್. ಪುರ 19.75 ಕಿ.ಮೀ. ಮತ್ತು ಕೆ.ಆರ್. ಪುರದಿಂದ ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣದವರೆಗಿನ 38.44 ಕಿ.ಮೀ. ಸೇರಿದಂತೆ ಒಟ್ಟಾರೆ 58.19 ಕಿ.ಮೀ. ಉದ್ದದ ಈ ಮಾರ್ಗವನ್ನು ₹ 14,788 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 50:50ರ ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರವು ಈ ಮೊತ್ತವನ್ನು ಭರಿಸಲಿವೆ.

ಹೊರವರ್ತುಲ ರಸ್ತೆ ಮಾರ್ಗದ ಭೂಸ್ವಾಧೀನ ಕಾರ್ಯ ಶೇ 100ರಷ್ಟು ಪೂರ್ಣಗೊಂಡಿದ್ದು, ವಿಮಾನ ನಿಲ್ದಾಣ ಮಾರ್ಗದ ಭೂಸ್ವಾಧೀನ ಕಾರ್ಯ ಶೇ 90ರಷ್ಟು ಆಗಿದೆ.

30 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿದ್ದು, ಯೋಜನೆ ಪೂರ್ಣಗೊಂಡ ನಂತರ ಅಂದರೆ 2025ಕ್ಕೆ ನಿತ್ಯ 4.33 ಲಕ್ಷ ಜನ ಪ್ರಯಾಣಿಸಲಿದ್ದು, 2041ರ ವೇಳೆಗೆ ಇಲ್ಲಿ ಪ್ರಯಾಣಿಕರ ಸಂಖ್ಯೆ 11.14 ಲಕ್ಷಕ್ಕೆ ಏರಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು