ಭಾನುವಾರ, ಮಾರ್ಚ್ 7, 2021
29 °C
ಲಾಕ್‌ಡೌನ್‌ ನಿಯಮಗಳು ಸಡಿಲವಾಗುತ್ತಿದ್ದಂತೆ ತವರಿಗೆ ಹೊರಟ ಕಾರ್ಮಿಕರು l

ರೈಲು ರದ್ದುಪಡಿಸಿದ್ದಕ್ಕೆ ಆಕ್ರೋಶ | ಊರಿಗೆ ಹೋಗಲು ಬಿಡಿ– ಬಾಕಿ ಕೂಲಿ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೆಲಸವೂ ಬೇಡ, ಏನೂ ಬೇಡ. ನಮ್ಮ ಬಾಕಿ ಕೂಲಿಯನ್ನು ನೀಡಿ. ನಮ್ಮನ್ನು ಊರಿಗೆ ಹೋಗಲು ಬಿಡಿ...’

ಕೆಲಸ ಅರಸಿಕೊಂಡು ನಗರಕ್ಕೆ ಬಂದಿರುವ ವಲಸೆ ಕಾರ್ಮಿಕರ ಒಕ್ಕೊರಲ ಒತ್ತಾಯವಿದು. ಲಾಕ್‌ಡೌನ್‌ ಬಳಿಕ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ಸರ್ಕಾರವು ಊರಿಗೆ ಮರಳಲು ವಿಶೇಷ ರೈಲಿನ ವ್ಯವಸ್ಥೆ ಮಾಡಿದಾಗ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈಗ ಏಕಾಏಕಿ ವಿಶೇಷ ರೈಲುಗಳನ್ನು ರದ್ದುಪಡಿಸಿದ್ದಕ್ಕೆ ವಲಸೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾವು ದಿನಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಊರಿಗೆ ಮರಳುವುದಕ್ಕೆ ಸೇವಾಸಿಂಧು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿದ್ದೆವು. ಕೊನೆ ಕ್ಷಣದಲ್ಲಿ ರೈಲು ರದ್ದುಪಡಿಸಿದ್ದು ಎಷ್ಟು ಸರಿ’ ಎಂದು ಕಾರ್ಮಿಕರು ಪ್ರಶ್ನಿಸುತ್ತಿದ್ದಾರೆ.

ಮಹದೇವಪುರ ಬಳಿ ಬಾಗ್ಮನೆ ಟೆಕ್‌ಪಾರ್ಕ್‌ ಬಳಿ ಶೆಡ್‌ಗಳಲ್ಲಿ ವಿವಿಧ ರಾಜ್ಯಗಳ ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು ನೆಲೆಸಿದ್ದಾರೆ. ಗರುಡಾಚಾರ್‌ ಪಾಳ್ಯದ ಬಳಿ 800ಕ್ಕೂ ಹೆಚ್ಚು ಕಾರ್ಮಿಕರು ಇದ್ದಾರೆ. ತಮ್ಮನ್ನು ಊರಿಗೆ ಕಳುಹಿಸಿ ಕೊಡಿ ಎಂದು ಅವರು ಬುಧವಾರ ಪ್ರತಿಭಟನೆ ನಡೆಸಿದರು.

‘ನಾವು ಊರಿಗೆ ಹೋಗಲು ಸೇವಾಸಿಂಧು ಪೋರ್ಟಲ್‌ನಲ್ಲಿ ವಿವರಗಳನ್ನು ಭರ್ತಿ ಮಾಡಿದ್ದೆವು. ಬುಧವಾರ ಪೊಲೀಸ್‌ ಠಾಣೆಗೆ ಬರುವಂತೆ ಹೇಳಿದ್ದರು. ಅಲ್ಲಿಗೆ ಹೋದರೆ ನಮ್ಮನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಜನ ಜಮಾಯಿಸುತ್ತಿದ್ದಂತೆಯೇ ಲಾಠಿ ತೋರಿಸಿ ನಮ್ಮನ್ನು ಅಟ್ಟಿದರು’ ಎಂದು ಜಾರ್ಖಂಡ್‌ನ ವಲಸೆ ಕಾರ್ಮಿಕ ಸಂಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು 12 ವರ್ಷಗಳಿಂದ ಈ ನಗರದಲ್ಲಿ ನೆಲೆಸಿದ್ದೇನೆ. ಟೈಲ್ಸ್‌ ಅಳವಡಿಸುವ ಕೆಲಸ ಮಾಡುತ್ತೇನೆ. ದುಡಿದು ಮನೆಯವರಿಗೆ ಹಣ ಕಳುಹಿಸುವ ಸಲುವಾಗಿ ನಾವು ಇಲ್ಲಿಗೆ ಬಂದಿದ್ದೆವು. ಕೆಲಸವಿಲ್ಲದೇ ಈಗ ಮನೆಯವರಿಂದಲೇ ಹಣ ಕೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಲಾಕ್‌ಡೌನ್‌ ವೇಳೆ ಒಂದೂವರೆ ತಿಂಗಳು ಕೆಲಸವೂ ಇಲ್ಲದೇ, ಊಟಕ್ಕೂ ಗತಿಯಿಲ್ಲದೇ ಅಕ್ಷರಶಃ ನರಕ ಅನುಭವಿಸಿದ್ದೇವೆ. ಈಗ ಕೊರೊನಾ ಸೋಂಕು ಹರಡುವ ಭೀತಿಯೂ ಕಾಡುತ್ತಿದೆ. ಒಮ್ಮೆ ಊರು ಸೇರಲು ಬಿಡಿ. ನಾವು ಹೇಗಾದರೂ ಬದುಕುತ್ತೇವೆ’ ಎಂದು ಅವರು ಅಂಗಲಾಚಿದರು.

ಮಾರತಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ, ಮೈಸೂರು ರಸ್ತೆ, ಅತ್ತಿಬೆಲೆ ಸೇರಿದಂತೆ ನಗರದ ಹೊರವಲಯಗಳಲ್ಲಿ ವಲಸೆ ಕಾರ್ಮಿಕರು ಶೆಡ್‌ಗಳಲ್ಲಿ ಉಳಿದುಕೊಂಡಿದ್ದಾರೆ. ಅನೇಕರಿಗೆ ಮಾಲೀಕರು ಸಂಬಳ ಬಾಕಿ ಇರಿಸಿಕೊಂಡಿದ್ದಾರೆ. ಸರ್ಕಾರ ವಿಶೇಷ ರೈಲಿನ ವ್ಯವಸ್ಥೆ ಮಾಡಿದಾಗ ಅನೇಕ ಕಡೆ ಮಾಲೀಕರೇ ಕಾರ್ಮಿಕರನ್ನು ಕಳುಹಿಸಿದ್ದಾರೆ. ಈಗ ರೈಲು ರದ್ದಾಗಿರುವುದರಿಂದ ದಿಕ್ಕು ತೋಚದೆ ಅವರು ಕಂಗಾಲಾಗಿದ್ದಾರೆ.

ವಲಸೆ ಕಾರ್ಮಿಕರನ್ನು ಬಲವಂತದಿಂದ ಉಳಿಸಿಕೊಳ್ಳುವ ನಿರ್ಧಾರ ನಗರದ ಅಭಿವೃದ್ಧಿಗೂ ತಿರುಗುಬಾಣವಾಗಲಿದೆ ಎಂದು ಎಚ್ಚರಿಸುತ್ತಾರೆ ‘ನಾವು ಭಾರತೀಯರು’ ಸಂಘಟನೆಯ ಕಾರ್ಮಿಕ ಮುಖಂಡ ವಿನಯ ಶ್ರೀನಿವಾಸ್‌.

‘ರೈಲಿಲ್ಲದಿದ್ದರೆ ನಡೆದೇ ಊರು ಸೇರುವೆ’
‘ನನ್ನ ಪತ್ನಿ ತುಂಬು ಗರ್ಭಿಣಿ. ಇನ್ನು 10 ದಿನಗಳಲ್ಲಿ ಆಕೆಗೆ ಹೆರಿಗೆ ಆಗಲಿದೆ. ನನ್ನ ಚಿಂತೆಯಿಂದ ಆಕೆ ಕಂಗಾಲಾಗಿದ್ದಾಳೆ. ಇಂತಹ ಸಂದರ್ಭದಲ್ಲಿ ನಾನು ಅವಳ ಜೊತೆ ಇರದಿದ್ದರೇ ಹೇಗೆ’ ಎಂದು ಪ್ರಶ್ನಿಸುತ್ತಾರೆ ಜಾರ್ಖಂಡ್‌ನ ಬಗೋದರ ಗ್ರಾಮದ ಮಹೇಂದರ್‌.

‘ಕೆಲಸ ಇದ್ದಷ್ಟು ದಿನ ಮಾಲೀಕರು ನಮಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಿದರು. ಈಗ ತಿಂಗಳಿಂದ ಕೆಲಸ ಇಲ್ಲ. ಕೆಲವು ದಿನ ಸರ್ಕಾರ ನೀಡಿದ ಊಟ ಸಿಕ್ಕಿತು. ಕೆಲವು ದಿನ ಅದೂ ಇಲ್ಲ. ಊರಿಗೆ ಮರಳದಿದ್ದರೆ ಉಳಿಗಾಲವಿಲ್ಲ. ಸರ್ಕಾರ ರೈಲಿನ ವ್ಯವಸ್ಥೆ ಮಾಡದಿದ್ದರೆ ನಡೆದುಕೊಂಡಾದರೂ ಊರು ಸೇರುವೆ’ ಎಂದು ಅವರು ತಿಳಿಸಿದರು.

ಮೈಸೂರು ರಸ್ತೆ ಬಳಿ ರಸ್ತೆ ಕಾಮಗಾರಿಗಾಗಿ ಅವರು ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಅವರ ಜೊತೆ 20 ಕಾರ್ಮಿಕರಿದ್ದು, ಅವರೂ ಊರಿಗೆ ಮರಳಲು ಹಾತೊರೆಯುತ್ತಿದ್ದಾರೆ.

 ‘ಇಲ್ಲೇ ಉಳಿದ ಕಾರ್ಮಿಕರಿಗೆ ಸಕಲ ವ್ಯವಸ್ಥೆ’
ರಾಜ್ಯದಿಂದ 1 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಬಸ್ಸುಗಳು ಮತ್ತು ರೈಲುಗಳ ಮೂಲಕ ತಮ್ಮ ಊರುಗಳಿಗೆ ತೆರಳಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಇಲ್ಲೇ ಉಳಿದಿರುವ ನಿರ್ಮಾಣ ಕಾಮಗಾರಿಗಳ ಕಾರ್ಮಿಕರಿಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ. ರಾಜ್ಯದಲ್ಲಿ ಎಲ್ಲ ರೀತಿಯ ಉದ್ಯಮಗಳು ಆರಂಭವಾಗಬೇಕು. ಕಾರ್ಮಿಕರು ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವಂತಾಗಬೇಕು ಎಂದು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು