ಬೆಂಗಳೂರು: ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗೆದ್ದಲಹಳ್ಳಿ ರೈಲ್ವೆ ಕೆಳಸೇತುವೆ ಬಳಿ ಶುಕ್ರವಾರ ಬೆಳಿಗ್ಗೆ ಮಿನಿ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಹಾಗೂ ಚಾಲಕ ಗಾಯಗೊಂಡಿದ್ದಾರೆ.
‘ವಾಹನದ ಬ್ರೇಕ್ ವಿಫಲಗೊಂಡಿದ್ದು, ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಮಿನಿ ಬಸ್‌ನಲ್ಲಿ ಎಂಟಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿದ್ದರು. ಕಮ್ಮನಹಳ್ಳಿ–ಲಿಂಗರಾಜಪುರ ನಡುವೆ ಮಿನಿ ಬಸ್ ಸಂಚರಿಸುತ್ತಿತ್ತು. ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಸಂಬಂಧ ದೂರು ದಾಖಲಾಗಿಲ್ಲ.
ಒಂದೇ ಸ್ಥಳದಲ್ಲಿ ಎರಡು ಅಪಘಾತ:
ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಿಂಡ್ಸರ್ ಮ್ಯಾನರ್ ಸೇತುವೆ ಬಳಿ ಶನಿವಾರ ಮೂರು ಗಂಟೆಯ ಅಂತರದಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ಶನಿವಾರ ಮುಂಜಾನೆ 4 ಗಂಟೆ ಹಾಗೂ ಬೆಳಿಗ್ಗೆ 7 ಗಂಟೆ ಸುಮಾರಿಗೆ ಸೇತುವೆಗೆ ಎರಡು ಆಟೊಗಳು ಡಿಕ್ಕಿ ಹೊಡೆದಿವೆ. ಇದರಿಂದ ನಜೀರ್ ಎಂಬುವವರಿಗೆ ಗಾಯಗಳಾಗಿದ್ದು, ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಸ್ತೆ ಸರಿಯಿಲ್ಲದ ಕಾರಣಕ್ಕೆ ಅಪಘಾತಗಳು ನಡೆದಿವೆ. ಕೂಡಲೇ ರಸ್ತೆ ಸರಿಪಡಿಸಬೇಕು ಆಟೊ ಚಾಲಕರು ಆಗ್ರಹಿಸಿದ್ದಾರೆ.