ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಪ್ರಕರಣ: ಸಚಿವ ಬಿ. ಶ್ರೀರಾಮುಲು ಆಪ್ತ ಸಹಾಯಕ ಬಿಡುಗಡೆ

Last Updated 2 ಜುಲೈ 2021, 9:12 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೆಸರು ಬಳಸಿಕೊಂಡು ಜನರನ್ನು ವಂಚಿಸುತ್ತಿದ್ದ ಆರೋಪದಡಿ ಗುರುವಾರ ವಶಕ್ಕೆ ಪಡೆಯಲಾಗಿದ್ದ ರಾಜು ಅಲಿಯಾಸ್ ರಾಜಣ್ಣ (35) ಎಂಬಾತನನ್ನು ವಿಚಾರಣೆ ನಡೆಸಿ ಶುಕ್ರವಾರ ಬಿಡುಗಡೆ‌ ಮಾಡಲಾಗಿದೆ.

ಸೆವೆಲ್ ಮಿನಿಸ್ಟರ್ ಕ್ವಾರ್ಟರ್ಸ್‌ನಲ್ಲಿರುವ ಶ್ರೀರಾಮುಲು ಮನೆ ಆವರಣದಲ್ಲೇ ರಾಜಣ್ಣನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು
‘ಬಳ್ಳಾರಿ ನಿವಾಸಿ ರಾಜಣ್ಣ, ಸಚಿವ ಬಿ. ಶ್ರೀರಾಮುಲು ಆಪ್ತ ಸಹಾಯಕ. ವಿಜಯೇಂದ್ರ ನೀಡಿದ್ದ ದೂರು ಆಧರಿಸಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಬಿಡುಗಡೆ ಮಾಡಲಾಗಿದೆ. ವಿಚಾರಣೆ ಅಗತ್ಯವಿದ್ದರೆ ಮತ್ತೊಮ್ಮೆ ಬರುವಂತೆ ಸೂಚಿಸಲಾಗಿದೆ' ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ತನಗೆ ಆಪ್ತರೆಂದು ರಾಜಣ್ಣ ಹೇಳಿಕೊಳ್ಳುತ್ತಿದ್ದ. ವಿಜಯೇಂದ್ರ ಮೂಲಕವೇ ಸರ್ಕಾರದ ಕೆಲಸ ಕೊಡಿಸುವ ಆಮಿಷವೊಡ್ಡಿ ಉದ್ಯಮಿಯೊಬ್ಬರಿಂದ ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ ಎನ್ನಲಾಗಿದೆ. ಸರ್ಕಾರಿ ಕೆಲಸ ಕೊಡಿಸುವ ಹಾಗೂ ವರ್ಗಾವಣೆ ಮಾಡಿಸುವುದಾಗಿಯೂ ಆರೋಪಿ ಹಲವರಿಗೆ ಆಮಿಷವೊಡ್ಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ.’

‘ಉದ್ಯಮಿಯೊಬ್ಬರ ಜೊತೆ ಆರೋಪಿ ರಾಜಣ್ಣ ನಡೆಸಿದ್ದ ಮೊಬೈಲ್ ಸಂಭಾಷಣೆ ಇತ್ತೀಚೆಗೆ ಎಲ್ಲೆಡೆ ಹರಿದಾಡಿತ್ತು. ವಿಜಯೇಂದ್ರ ಹೆಸರು ಪ್ರಸ್ತಾಪಿಸಿದ್ದ ಆರೋಪಿ, ‘ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಅವರಿಗಿಂತ ಪುತ್ರನದ್ದೇ ಹೆಚ್ಚು ಮಾತು ನಡೆಯುತ್ತದೆ. ಹಣ ಕೊಟ್ಟರೆ, ವಿಜಯೇಂದ್ರ ಅವರ ಮೂಲಕವೇ ನಿಮ್ಮ ಕೆಲಸ ಮಾಡಿಸುತ್ತೇನೆ’ ಎಂಬುದಾಗಿ ತಿಳಿಸಿದ್ದ. ಅದನ್ನು ನಂಬಿ ಉದ್ಯಮಿ ಹಣವನ್ನೂ ಕೊಟ್ಟಿರುವ ಮಾಹಿತಿ ಇದೆ’ ಎಂದೂ ಸಿಸಿಬಿ ಮೂಲಗಳು ತಿಳಿಸಿವೆ.

‘ಸಂಭಾಷಣೆ ಆಡಿಯೊ ಗಮನಕ್ಕೆ ಬರುತ್ತಿದ್ದಂತೆ ವಿಜಯೇಂದ್ರ ಅವರೇ ನಗರದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡು ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT