ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ನ ಉಪಚುನಾವಣೆ: ‘ಕೈ’ ಗೆಲುವು- ಮೈತ್ರಿ ಅಭ್ಯರ್ಥಿಗೆ ಸೋಲು

Published 20 ಫೆಬ್ರುವರಿ 2024, 20:34 IST
Last Updated 20 ಫೆಬ್ರುವರಿ 2024, 20:34 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ, ಜೆಡಿಎಸ್‌ ಮೈತ್ರಿ ಮಾಡಿಕೊಂಡ ಬಳಿಕ ನಡೆದ ವಿಧಾನ ಪರಿಷತ್‌ನ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ.

ವಿಧಾನಸಭೆ ಚುನಾವಣೆ ನಂತರ ಬಿಜೆಪಿಯತ್ತ ಒಲಿದಿದ್ದ ಜೆಡಿಎಸ್ ನಾಯಕರು, ಎನ್‌ಡಿಎ ಮೈತ್ರಿಕೂಟದ ಜತೆ ಸೇರುವ ತೀರ್ಮಾನಕ್ಕೆ ಬಂದಿದ್ದರು. ಮುಂದೆ ನಡೆಯಬಹುದಾದ ಚುನಾವಣೆಗಳು ಹಾಗೂ ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜಂಟಿ ಹೋರಾಟ ನಡೆಸುವ ತೀರ್ಮಾನವನ್ನೂ ಕೈಗೊಂಡಿದ್ದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಹಿಂದೆ ಬಿಜೆಪಿಯಿಂದ ಗೆದ್ದಿದ್ದ ಪುಟ್ಟಣ್ಣ ಅವರು ವಿಧಾನಸಭೆ ಚುನಾವಣೆ ಹೊತ್ತಿಗೆ, ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಕಾರಣದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಮೂರು ಬಾರಿ ಜೆಡಿಎಸ್‌, ಒಂದು ಬಾರಿ ಬಿಜೆಪಿಯಿಂದ ಗೆದ್ದಿದ್ದ ಪುಟ್ಟಣ್ಣ, ಉಪಚುನಾವಣೆಯಲ್ಲಿ ‘ಹಸ್ತ’ ಹಿಡಿದಿದ್ದರು.

ಮೈತ್ರಿ ಅಭ್ಯರ್ಥಿ ತೀರ್ಮಾನವಾಗುವ ಮೊದಲೇ, ಸಭೆ ನಡೆಸಿದ್ದ ಜೆಡಿಎಸ್‌ ನಾಯಕರು ವಕೀಲರೂ ಆದ ಎ.ಪಿ. ರಂಗನಾಥ್ ಅವರು ಕಣಕ್ಕೆ ಇಳಿಯಲಿದ್ದಾರೆ ಎಂದು ಘೋಷಿಸಿದ್ದರು. ಇದಕ್ಕೆ, ಕೆಲ ಬಿಜೆಪಿ ನಾಯಕರು ಅ‍ಪಸ್ವರ ಎತ್ತಿದ್ದರು. ನಂತರ ನಡೆದ ಮಾತುಕತೆಯ ಬಳಿಕ, ರಂಗನಾಥ್ ಅವರೇ ಮೈತ್ರಿಕೂಟದ ಅಭ್ಯರ್ಥಿ ಎಂದು ಘೋಷಿಸಿದ್ದರು.

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಶಿಕ್ಷಕರಷ್ಟೇ ಮತದಾರರಾಗಿರುವ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಪುಟ್ಟಣ್ಣ ಅವರ ಜನಪ್ರಿಯತೆ ಮತ್ತು ‘ಕಾರ್ಯತಂತ್ರ’ಗಳೇ ನಿರ್ಣಾಯಕವಾಗಿರುವುದು ರಹಸ್ಯವೇನಲ್ಲ. 2002ರಿಂದ ನಡೆದ ಚುನಾವಣೆಗಳಲ್ಲಿ ಅವರೇ ಗೆಲ್ಲುತ್ತಾ ಬಂದಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅವರಿಗೆ ಪೈಪೋಟಿ ನೀಡಿತ್ತು. ಈ ಚುನಾವಣೆಯಲ್ಲಿ ಪಕ್ಷಗಳ ಸೋಲು–ಗೆಲುವಿಗಿಂತ ಪುಟ್ಟಣ್ಣ ‘ಪ್ರಾಬಲ್ಯ’ವೇ ಹೆಚ್ಚೆಂಬುದನ್ನು ಅಲ್ಲಗಳೆಯಲಾಗದು.

‌ಆದರೂ, ಜೆಡಿಎಸ್‌ ಹಾಗೂ ಬಿಜೆಪಿಗೆ ನೆಲೆ ಇರುವ ಈ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಕಣಕ್ಕೆ ಇಳಿಸಿರುವುದು ಕುತೂಹಲಕ್ಕೆ ಕಾರಣವಾಗಿತ್ತು. ಈ ಫಲಿತಾಂಶವು ಕಾಂಗ್ರೆಸ್ ನಾಯಕರಿಗೆ ತಮ್ಮ ಎದುರಾಳಿಗಳನ್ನು ತಿವಿಯುವ ಅವಕಾಶವನ್ನಂತೂ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT