ಭಾನುವಾರ, ಸೆಪ್ಟೆಂಬರ್ 20, 2020
21 °C
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು, ಪೋಷಕರು

ಪಿ.ಯು ಕಾಲೇಜುಗಳಿಗೆ ಅರ್ಜಿಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಾಲೇಜು ಸೇರುವ ತವಕದಲ್ಲಿ ವಿದ್ಯಾರ್ಥಿಗಳಿದ್ದು, ಪದವಿಪೂರ್ವ ಕಾಲೇಜುಗಳಿಗೆ ಆನ್‌ಲೈನ್‌ನಲ್ಲಿ ರಾಶಿ ರಾಶಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.

ಬಹುತೇಕ ಖಾಸಗಿ ಕಾಲೇಜುಗಳು ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುತ್ತಿದ್ದು, ಸೋಮವಾರ ಮಧ್ಯಾಹ್ನದಿಂದಲೇ ಅರ್ಜಿ ಸಲ್ಲಿಸುವ ಕಾರ್ಯದಲ್ಲಿ ಪೋಷಕರು ಮುಳುಗಿದ್ದಾರೆ. 

ವಿಜ್ಞಾನ ವಿಭಾಗಕ್ಕೆ ಅದರಲ್ಲೂ ಪಿಸಿಎಂಬಿ ಕೋರ್ಸ್‌ಗೆ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ವಾಣಿಜ್ಯ ವಿಭಾಗಕ್ಕೂ ಹೆಚ್ಚಿನ ಬೇಡಿಕೆ ಇದೆ. ಆದರೆ, ಮಕ್ಕಳನ್ನು ಪಿಸಿಎಂಬಿ ಕೋರ್ಸ್‌ಗೆ ಸೇರಿಸಲೇಬೇಕು ಎಂದು ಪೋಷಕರು ನಾಮುಂದು ತಾಮುಂದು ಎಂದು ಅರ್ಜಿ ಸಲ್ಲಿಸುತ್ತಿದ್ದಾರೆ.

ಕೆಲ ಕಾಲೇಜುಗಳಿಗೆ ಸೋಮವಾರವೇ ಎರಡರಿಂದ ಮೂರು ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಮಂಗಳವಾರ ಈ ಸಂಖ್ಯೆ 10 ಸಾವಿರ ದಾಟಿದೆ. ಕಾಲೇಜಿಗೆ ಹೋಗಿಯೇ ಅರ್ಜಿ ಸ್ವೀಕರಿಸಬೇಕಾದ ಸ್ಥಿತಿ ಈ ವರ್ಷ ಇಲ್ಲದ ಕಾರಣ ಪೋಷಕರು ನಾಲ್ಕೈದು ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು ಕುಳಿತಲ್ಲೇ ಅರ್ಜಿ ಸಲ್ಲಿಸುತ್ತಿದ್ದಾರೆ.

‘ಎಲ್ಲಾ ಕಾಲೇಜುಗಳಿಗೂ ಆನ್‌ಲೈನ್‌ನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳೆಲ್ಲ ದಾಖಲಾಗುತ್ತಾರೆ ಎಂದು ಹೇಳಲು ಆಗುವುದಿಲ್ಲ. ತಮ್ಮ ನೆಚ್ಚಿನ ಕಾಲೇಜುಗಳಲ್ಲಿ ಅವಕಾಶ ಸಿಗದಿದ್ದವರು ಬೇರೆ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಣ್ಣ–ಪುಟ್ಟ ಕಾಲೇಜುಗಳಿಗೂ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ’ ಎಂದು ಕಾಲೇಜಿನ ಪ್ರಾಂಶುಪಾಲರೊಬ್ಬರು ತಿಳಿಸಿದರು.

‘ಕೋವಿಡ್ ಕಾರಣದಿಂದ ಆನ್‌ಲೈನ್‌ ಪಾಠ ನಡೆಯಲಿದ್ದು, ಎಲ್ಲಾ ಖಾಸಗಿ ಪಿಯು ಕಾಲೇಜುಗಳಿಗೂ ಸಮಾನ ಶುಲ್ಕ ನಿಗದಿ ಮಾಡಲು ಸರ್ಕಾರ ಮಾರ್ಗಸೂಚಿ ಹೊರಡಿಸುವುದು ಸೂಕ್ತ’ ಎಂದು ಅವರು ಹೇಳಿದರು.

ಆನ್‌ಲೈನ್ ವ್ಯವಸ್ಥೆ ಇಲ್ಲದ ಕೆಲ ಕಾಲೇಜುಗಳಲ್ಲಿ ಬುಕ್‌ಲೆಟ್ ಸಹಿತ ಅರ್ಜಿ ವಿತರಿಸಲಾಗುತ್ತಿದೆ. ಇನ್ನು ಕೆಲವು ಪೋಷಕರು ಕಾಲೇಜಿಗೆ ಬಂದು ಅರ್ಜಿ ಪಡೆಯುತ್ತಿದ್ದಾರೆ. ಆನ್‌ಲೈನ್ ವ್ಯವಸ್ಥೆ ಇದ್ದರೂ ಅದರ ಮಾಹಿತಿ ಇಲ್ಲದೆ ಕಾಲೇಜು ಬಳಿಗೆ ಬರುವ ಪೋಷಕರನ್ನು ಸಿಬ್ಬಂದಿ ತಡೆದು ವಾಪಸ್ ಕಳುಹಿಸಿ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸುವಂತೆ ತಿಳಿಸುತ್ತಿದ್ದಾರೆ.

ಮಾರ್ಗಸೂಚಿಗೆ ಕಾದಿರುವ ಸರ್ಕಾರಿ ಕಾಲೇಜು
ದಾಖಲಾತಿ ಪ್ರಕ್ರಿಯೆ ನಡೆಸಲು ಸರ್ಕಾರಿ ಕಾಲೇಜುಗಳು ಸರ್ಕಾರದ ಮಾರ್ಗಸೂಚಿಗಾಗಿ ಕಾದಿವೆ.

‘ಕೋವಿಡ್‌ ಕಾರಣದಿಂದ ವಿದ್ಯಾರ್ಥಿ ದಾಖಲಾತಿ ಪ್ರಕ್ರಿಯೆ, ಶುಲ್ಕ ನಿಗದಿಯನ್ನು ಒಳಗೊಂಡ ಮಾರ್ಗಸೂಚಿಯನ್ನು ಸರ್ಕಾರ ಇನ್ನೂ ಹೊರಡಿಸಿಲ್ಲ. ಸರ್ಕಾರ ಕೂಡಲೇ ಮಾರ್ಗಸೂಚಿ ಹೊರಡಿಸಬೇಕು’ ಎಂದು ‌ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು