ಶನಿವಾರ, ಡಿಸೆಂಬರ್ 3, 2022
21 °C

ಬೆಂಗಳೂರು: ಹಣ ಬದಲಾವಣೆ ದಂಧೆ– ಜೆರಾಕ್ಸ್‌ ನೋಟು, ₹ 80 ಲಕ್ಷ ಹಳೇ ನೋಟು ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಸರ್ಕಾರ ರದ್ದು ಮಾಡಿರುವ ಹಳೇ ನೋಟುಗಳನ್ನು ಬದಲಾವಣೆ ಮಾಡಿಸಿ ಹೊಸ ನೋಟು ನೀಡುವುದಾಗಿ ಹೇಳಿ ವಂಚಿಸುವ ಜಾಲಗಳು ನಗರದಲ್ಲಿ ಅವ್ಯಾಹತವಾಗಿದ್ದು, ಇಂಥ ಜಾಲವೊಂದನ್ನು ಗೋವಿಂದಪುರ ಪೊಲೀಸರು ಭೇದಿಸಿದ್ದಾರೆ.

‘ಎಚ್‌ಬಿಆರ್ ಬಡಾವಣೆ ಬಳಿಯ ಪೆಟ್ರೋಲ್ ಬಂಕ್ ಬಳಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ₹ 80 ಲಕ್ಷ ಮೊತ್ತದ ಹಳೇ ನೋಟುಗಳು ಹಾಗೂ ₹ 5 ಕೋಟಿ ಮೊತ್ತದ ಕಲರ್ ಜೆರಾಕ್ಸ್ ನೋಟುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ಹೇಳಿದರು.

‘ಕೆ.ಆರ್.ಪುರದ ಸುರೇಶ್‌ಕುಮಾರ್, ರಾಜಾಜಿನಗರದ ರಾಮಕೃಷ್ಣ, ಆನೇಕಲ್‌ನ ಮಂಜುನಾಥ್, ಹೊಂಗಸಂದ್ರದ ವೆಂಕಟೇಶ್, ದೇವಾನಂದ ಬಂಧಿತರು' ಎಂದೂ ತಿಳಿಸಿದರು. ‘₹ 500 ಹಾಗೂ ₹ 1,000 ಮುಖಬೆಲೆಯ ಹಳೇ ನೋಟುಗಳನ್ನು ಕಲರ್‌ ಜೆರಾಕ್ಸ್ ಮಾಡಿಸುತ್ತಿದ್ದ ಆರೋಪಿಗಳು, ಕಂತೆಗಳನ್ನಾಗಿ ಮಾಡುತ್ತಿದ್ದರು. ಕಂತೆಯ ಮೇಲೆ ಹಾಗೂ ಕೊನೆಯಲ್ಲಿ ಮಾತ್ರ ಅಸಲಿ ನೋಟುಗಳನ್ನು ಇರಿಸುತ್ತಿದ್ದರು. ಇಂಥ ಕಂತೆಗಳನ್ನೇ ಕೇರಳದ ಬೇನೂರು– ಕುಂದಡುಕ್ಕಂ ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಇರಿಸಿದ್ದರು.

ಹಳೇ ನೋಟು ವರ್ಗಾವಣೆ ದಂಧೆ ಮಾಡುತ್ತಿರುವುದಾಗಿ ಹೇಳಿ ಕೆಲ ಉದ್ಯಮಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಅವರನ್ನು ಫಾರ್ಮ್‌ ಹೌಸ್‌ಗೆ ಕರೆತಂದು ಕಂತೆಗಳನ್ನು ತೋರಿಸುತ್ತಿದ್ದರು.’ ‘ಹಳೇ ನೋಟುಗಳನ್ನು ತೋರಿಸಿ ಕಮಿಷನ್‌ ಹೆಸರಿನಲ್ಲಿ ಹೊಸ ನೋಟುಗಳನ್ನು ಪಡೆದುಕೊಂಡು ವಂಚಿಸುವುದು ಆರೋಪಿಗಳ ಉದ್ದೇಶವಾಗಿತ್ತು’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು