ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ಸ್ವೀಕಾರ ಸಾಲಿನಲ್ಲೇ ಹೆಚ್ಚು ವಾಹನ

ಫಾಸ್ಟ್ಯಾಗ್‌ ಕಡ್ಡಾಯ ಜ. 15ರವರೆಗೆ ಮುಂದೂಡಿಕೆ * ಆರು ಸಾಲುಗಳು ಮೀಸಲು
Last Updated 15 ಡಿಸೆಂಬರ್ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸುವ ಆದೇಶವನ್ನು ಜ. 15ರವರೆಗೆ ಮುಂದೂಡಲಾಗಿದ್ದು, ತುಮಕೂರು ರಸ್ತೆಯಲ್ಲಿರುವ ನವಯುಗ ಟೋಲ್‌ಗೇಟ್‌ನ ಆರು ಸಾಲುಗಳನ್ನು ಫಾಸ್ಟ್ಯಾಗ್‌ ವಾಹನಗಳ ಪ್ರವೇಶಕ್ಕೆ ಭಾನುವಾರದಿಂದ ಮೀಸಲಿಡಲಾಗಿದೆ.

ತ್ವರಿತವಾಗಿ ಟೋಲ್‌ಗೇಟ್‌ ದಾಡಿ ಹೋಗುವ ಉದ್ದೇಶದಿಂದಫಾಸ್ಟ್ಯಾಗ್‌ ವ್ಯವಸ್ಥೆ ಪರಿಚಯಿಸಲಾಗಿದೆ. ಇದನ್ನು ಡಿಸೆಂಬರ್ 15ರಿಂದ ಕಡ್ಡಾಯವಾಗಿ ಜಾರಿಗೆ ತರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿತ್ತು. ಆದರೆ, ಬಹುತೇಕ ವಾಹನಗಳ ಮಾಲೀಕರು ಇದುವರೆಗೂ ಫಾಸ್ಟ್ಯಾಗ್ ಸ್ಟಿಕರ್ ಪಡೆದಿಲ್ಲ. ಹೀಗಾಗಿ ವ್ಯವಸ್ಥೆ ಜಾರಿ ದಿನವನ್ನು ಮುಂದೂಡಲಾಗಿದೆ.

ವ್ಯವಸ್ಥೆ ಜಾರಿಗೆ ಡಿ. 1ರಿಂದಲೇ ನವಯುಗ ಟೋಲ್‌ಗೇಟ್‌ನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಟೋಲ್‌ಗೇಟ್‌ನ 21 ಸಾಲುಗಳ ಪೈಕಿ ಎರಡು ಸಾಲುಗಳಲ್ಲಿ ವಿಐಪಿ, ಆಂಬ್ಯುಲೆನ್ಸ್‌ಗಳು ಓಡಾಡುತ್ತವೆ. ಆರು ಸಾಲುಗಳನ್ನು ಫಾಸ್ಟ್ಯಾಗ್‌ ವಾಹನಗಳ ಪ್ರವೇಶಕ್ಕೆ ಈಗಾಗಲೇ ಮೀಸಲಿಡಲಾಗಿದೆ. ಉಳಿದ ಸಾಲುಗಳಲ್ಲಿ ಮಾತ್ರ ನಗದು ಭರಿಸಲು ಅವಕಾಶ ಕಲ್ಪಿಸಲಾಗಿದೆ.

‘ನಗರದಿಂದ ತುಮಕೂರಿಗೆ ಹೋಗುವ ಮಾರ್ಗದಲ್ಲಿ ಮೂರು ಸಾಲು ಹಾಗೂ ತುಮಕೂರಿನಿಂದ ನಗರಕ್ಕೆ ಬರುವ ಮಾರ್ಗದಲ್ಲಿ ಮೂರು ಸಾಲುಗಳನ್ನು ಫಾಸ್ಟ್ಯಾಗ್‌ ವಾಹನಗಳ ಸಂಚಾರಕ್ಕೆ ಮೀಸಲಿಟ್ಟಿದ್ದೇವೆ. ಆ ಬಗ್ಗೆ ಫಲಕಗಳನ್ನೂ ಅಳವಡಿಸಲಾಗಿದೆ. ಈ ಸಾಲಿನಲ್ಲಿ ಹೋಗುವವರ ಸಂಖ್ಯೆ ಮಾತ್ರ ಕಡಿಮೆ ಇದೆ’ ಎಂದು ಟೋಲ್‌ಗೇಟ್‌ ಸಿಬ್ಬಂದಿಯೊಬ್ಬರು ಹೇಳಿದರು.

‘ಕಳೆದ ತಿಂಗಳಿನಿಂದಲೇ ಫಾಸ್ಟ್ಯಾಗ್‌ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಅಷ್ಟಾದರೂ ಬಹುತೇಕರು ಫಾಸ್ಟ್ಯಾಗ್ ಸ್ಟಿಕರ್ ಪಡೆದುಕೊಂಡಿಲ್ಲ. ಅವರೆಲ್ಲ ನಗದು ಸ್ವೀಕಾರ ಸಾಲಿನಲ್ಲೇ ಹೋಗುತ್ತಿದ್ದಾರೆ. ಇಂಥ ಸಾಲುಗಳಲ್ಲೇ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಅವರೆಲ್ಲರಿಗೂ ಸ್ಟಿಕರ್ ಪಡೆಯುವಂತೆ ಕೋರುತ್ತಿದ್ದೇವೆ’ ಎಂದು ತಿಳಿಸಿದರು.

‘ಫಾಸ್ಟ್ಯಾಗ್ ಕಡ್ಡಾಯವನ್ನು ಸದ್ಯಕ್ಕೆ ಜ. 15ರವರೆಗೆ ವಿಸ್ತರಿಸಲಾಗಿದೆ. ಅದಾದ ನಂತರ 21 ಸಾಲುಗಳನ್ನೂ ಫಾಸ್ಟ್ಯಾಗ್‌ ವಾಹನಗಳಿಗೆ ಮೀಸಲಿಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಅಗತ್ಯವಿದ್ದರೆ ಮಾತ್ರ ನಗದು ಸಾಲುಗಳನ್ನು ಮುಂದುವರಿಸಲು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕೌಂಟರ್‌ ಎದುರೇ ಸರದಿ: ಫಾಸ್ಟ್ಯಾಗ್‌ ಸ್ಟಿಕರ್ ಪಡೆಯಲು ಟೋಲ್‌ಗೇಟ್‌ ಪಕ್ಕವೇ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಸ್ಟಿಕರ್ ನೀಡುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿರುವುದರಿಂದ ಕೌಂಟರ್‌ ಎದುರು ವಾಹನ ಮಾಲೀಕರ ಸರದಿಯೂ ದೊಡ್ಡದಾಗುತ್ತಿದೆ.

‘ಫಾಸ್ಟ್ಯಾಗ್ ಕಡ್ಡಾಯ ಮಾಡುವುದಾಗಿ ಹೇಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅಗತ್ಯಕ್ಕೆ ತಕ್ಕಷ್ಟು ಸ್ಟಿಕರ್ ವಿತರಿಸಲು ಮಾತ್ರ ಗಮನಹರಿಸುತ್ತಿಲ್ಲ. ನಮ್ಮ ಕೆಲಸಗಳನ್ನೆಲ್ಲ ಬಿಟ್ಟು ಸ್ಟಿಕರ್‌ಗಾಗಿ ಗಂಟೆಗಟ್ಟಲೇ ಕೌಂಟರ್‌ ಎದುರು ಕಾಯುವಂತಾಗಿದೆ’ ಎಂದು ಚಾಲಕ ವೇಣುಗೋಪಾಲ್‌ ದೂರಿದರು.

‘ಆಧಾರ್ ಹಾಗೂ ವಾಹನ ನೋಂದಣಿ ಪುಸ್ತಕ (ಆರ್‌.ಸಿ) ಸಮೇತ ಕೌಂಟರ್‌ಗೆ ಬಂದಿದ್ದೇವೆ. ಇಲ್ಲಿ ಒಂದೇ ಕೌಂಟರ್‌ ಇರುವುದರಿಂದ ಸ್ಟಿಕರ್ ವಿತರಣೆ ನಿಧಾನವಾಗುತ್ತಿದೆ. ಕೌಂಟರ್‌ಗಳನ್ನಾದರೂ ಹೆಚ್ಚಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT