ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಗೋಡಿಯಲ್ಲಿ ತಾಯಿ–ಮಗು ಸಾವಿನ ಪ್ರಕರಣ: ಬೆಸ್ಕಾಂ ನಿರ್ಲಕ್ಷ್ಯ ಅವಘಡಕ್ಕೆ ಕಾರಣ

Published 5 ಡಿಸೆಂಬರ್ 2023, 19:55 IST
Last Updated 5 ಡಿಸೆಂಬರ್ 2023, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದ್ಯುತ್‌ ಮಾರ್ಗಗಳ ನಿರ್ವಹಣೆ ಹಾಗೂ ಸುರಕ್ಷತಾ ಕ್ರಮಗಳ ವಿಚಾರದಲ್ಲಿ ಬೆಸ್ಕಾಂ ನಿರ್ಲಕ್ಷ್ಯ ತೋರಿರುವುದರಿಂದಲೇ ಕಾಡುಗೋಡಿ ಸಮೀಪ ವಿದ್ಯುತ್ ಅವಘಡದಿಂದ ತಾಯಿ–ಮಗು ಮೃತಪಟ್ಟಿದ್ದರು’ ಎಂದು ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು ವರದಿ ನೀಡಿದ್ದಾರೆ.

ಪ್ರಕರಣದ ಕುರಿತು ಬೆಂಗಳೂರು ಪೂರ್ವ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದಾರೆ.

ವರದಿಯ ಪ್ರತಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೂ (ಕೆಇಆರ್‌ಸಿ) ಸಲ್ಲಿಸಿದ್ದಾರೆ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಕರಣ ನಡೆದ ಸ್ಥಳ ಪರಿಶೀಲನೆ, ಸ್ಥಳದಲ್ಲಿ ದೊರೆತ ಸಾಕ್ಷ್ಯಾಧಾರಗಳು, ಸಿಬ್ಬಂದಿ ಹೇಳಿಕೆಗಳು ಮತ್ತು ಇಂಧನ ಇಲಾಖೆಯ ವಿವಿಧ ವಿಭಾಗಗಳು ನೀಡಿರುವ ಮಾಹಿತಿಗಳನ್ನು ಪರಿಶೀಲಿಸಿ ಈ ವರದಿಯನ್ನು ಸಿದ್ದಪಡಿಸಲಾಗಿದೆ.

‘ಮೈತ್ರಿ ಲೇಔಟ್‌ನ ಔದುಂಬರಾ ಅಪಾರ್ಟ್‌ಮೆಂಟ್‌ನ ವಿದ್ಯುತ್ ಸ್ಥಾವರದೊಳಗೆ (ಎಲ್‌ಬಿಎಸ್‌) ಇಲಿಯೊಂದು ನುಸುಳಿದ ಪರಿಣಾಮ ಶಾರ್ಟ್‌ ಸರ್ಕೀಟ್‌ ಆಗಿತ್ತು. ಇದರಿಂದ ವಿದ್ಯುತ್‌ ಪರಿವರ್ತಕಕ್ಕೆ (ಟ್ರಾನ್ಸ್‌ಫಾರ್ಮರ್‌) ಜೋಡಿಸಿದ್ದ 11 ಕೆವಿ ಸಾಮರ್ಥ್ಯದ ತಂತಿಯಲ್ಲಿ ಭಾರಿ ಪ್ರಮಾಣದಲ್ಲಿ ವಿದ್ಯುತ್ ಪ್ರವಹಿಸಿತ್ತು. ತುಂಬಾ ಹಳೆಯದಾಗಿದ್ದ ಹಾಗೂ ಹಿಂದೆ ಜೋಡಣೆ ಮಾಡಲಾಗಿದ್ದ ಈ ತಂತಿ ತುಂಡಾಗಿ ಕೆಳಗೆ ಬಿದ್ದಿದೆ. ತಂತಿ ಸಿಮೆಂಟ್‌ ಹಾಗೂ ಮರಳು ಇರುವ ಪಾದಚಾರಿ ಮಾರ್ಗದ ಮೇಲೆ ಬಿದ್ದಿದ್ದರಿಂದ ಅರ್ಥಿಂಗ್ ಆಗಿ ಸಂಪರ್ಕ ಕಡಿಯದೇ ವಿದ್ಯುತ್ ಪ್ರವಹಿಸುವುದು ಮುಂದುವರಿದಿತ್ತು. ಮಗು ಎತ್ತಿಕೊಂಡು ತೆರಳುತ್ತಿದ್ದ ಸೌಂದರ್ಯ ಅವರು ಈ ತಂತಿಯ ಮೇಲೆ ಕಾಲಿಟ್ಟಿದ್ದರಿಂದ ಅವಘಡ ಸಂಭವಿಸಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ತಂತಿ ತುಂಡಾಗಿ ಬಿದ್ದಾಗ ಫೀಡರ್‌ ಸ್ಟೇಷನ್‌ನಲ್ಲಿ ಟ್ರಿಪ್ ಆಗಿದೆ. ಸ್ಟೇಷನ್‌ನಲ್ಲಿದ್ದವರು ಅದನ್ನು ಟೆಸ್ಟ್‌ ಚಾರ್ಜ್ ಮಾಡಿದ್ದಾರೆ. ಮರಳು ಸಿಮೆಂಟ್‌ನ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದರಿಂದ ತಂತಿ ತುಂಡಾಗಿ ಬಿದ್ದಿರುವುದು ಗೊತ್ತಾಗಿಲ್ಲ. ಎರಡೂವರೆ ದಶಕದಷ್ಟು ಹಳೆಯದಾದ 11 ಕೆ.ವಿ ಸಾಮರ್ಥ್ಯದ ವಿದ್ಯುತ್ ಮಾರ್ಗದ ತಂತಿ(ವಾಹಕ)ಗಳನ್ನು ಪರಿಶೀಲಿಸಿ, ಸಮರ್ಪಕವಾಗಿ ನಿರ್ವಹಣೆ ಮಾಡಿದ್ದರೆ ಹಾಗೂ ಈ ಮಾರ್ಗದಲ್ಲಿ ಅರ್ಥ್‌ ಗಾರ್ಡ್‌ ಅಳವಡಿಕೆಯಂತಹ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದರೆ ಅವಘಡ ಸಂಭವಿಸುತ್ತಿರಲಿಲ್ಲ’ ಎಂದು ವರದಿ ತಿಳಿಸಿದೆ.

ಈ ಪ್ರಕರಣದಲ್ಲಿ ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ವಿವರ: ನವೆಂಬರ್‌ 19ರಂದು ಬೆಳಗಿನ ಜಾವ 3.50 ರ ಸಮಯದಲ್ಲಿ ಕಾಡುಗೋಡಿ ಸಮೀಪದ ಹೋಪ್‌ ಫಾರ್ಮ್‌ ಬಳಿ ಪಾದಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಸುಟ್ಟು ಭಸ್ಮವಾಗಿದ್ದರು. ಈ ಅವಘಡಕ್ಕೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ದೂರಿದ್ದರು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು, ಐವರು ಬೆಸ್ಕಾಂ ಸಿಬ್ಬಂದಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಇಂಧನ ಸಚಿವ ಜಾರ್ಜ್ ಅವರು ಬೆಸ್ಕಾಂ, ಪೊಲೀಸ್, ವಿದ್ಯುತ್ ಪರಿವೀಕ್ಷಕರು ಹಾಗೂ ಸ್ವತಂತ್ರ ಸಮಿತಿಗಳ ಮೂಲಕ  ನಾಲ್ಕು ಪ್ರತ್ಯೇಕ ತನಿಖೆ ನಡೆಸಲು ಆದೇಶಿಸಿದ್ದರು‌. ಈಗ ವಿದ್ಯುತ್ ಪರಿವೀಕ್ಷಕರು ತನಿಖಾ ವರದಿ ನೀಡಿದ್ದಾರೆ. ಕೆಪಿಟಿಸಿಎಲ್‌ ನಿವೃತ್ತ ನಿರ್ದೇಶಕ ಕೆ.ಸುಮಂತ್ ನೇತೃತ್ವದಲ್ಲಿ ರಚಿಸಿರುವ ಸ್ವತಂತ್ರ ಸಮಿತಿಯ ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT