ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಮಹಿಳೆ ಸಾವು

Published 27 ಮೇ 2024, 14:30 IST
Last Updated 27 ಮೇ 2024, 14:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್​. ಯಡಿಯೂರಪ್ಪ ಅವರು ಹದಿನೇಳು ವರ್ಷ ವಯಸ್ಸಿನ ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದ ಮಹಿಳೆ ನಗರದ ಆಸ್ಪತ್ರೆಯೊಂದರಲ್ಲಿ ಭಾನುವಾರ ರಾತ್ರಿ ಅಸುನೀಗಿದ್ದಾರೆ.

‘ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ 53 ವರ್ಷದ ಮಹಿಳೆಯ ಆರೋಗ್ಯದಲ್ಲಿ ಭಾನುವಾರ ಏರುಪೇರು ಕಂಡುಬಂದಿತ್ತು. ಮಕ್ಕಳು ಹಾಗೂ ಸಂಬಂಧಿಕರು, ಮಹಿಳೆಯನ್ನು ಮನೆ ಬಳಿಯ ನ್ಯಾನೊ ಆಸ್ಪತ್ರೆಗೆ ರಾತ್ರಿ 8.30ರ ಸುಮಾರಿಗೆ ಸೇರಿಸಿದ್ದರು. ರಾತ್ರಿ 9.30ಗಂಟೆ ಸುಮಾರಿಗೆ ಅವರು ತೀರಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಹಿಳೆ ನೀಡಿದ್ದ ದೂರು ಆಧರಿಸಿ ಬಿಎಸ್‌ವೈ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ನಂತರ ತಮಗೆ ಜೀವ ಬೆದರಿಕೆ ಇರುವುದಾಗಿ ದೂರುದಾರ ಮಹಿಳೆ ಆರೋಪಿಸಿದ್ದರು. ಹೀಗಾಗಿ, ಅವರ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ದಿನದ 24 ಗಂಟೆಯೂ ಮನೆ ಬಳಿ ಪಾಳಿ ಪ್ರಕಾರ ಇಬ್ಬರು ಸಿಬ್ಬಂದಿ ಕಾವಲು ಕಾಯುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ಒಂದೂವರೆ ವರ್ಷದಿಂದ ಚಿಕಿತ್ಸೆ: ‘ಮಹಿಳೆಯು ಒಂದೂವರೆ ವರ್ಷದಿಂದ ಆರೋಗ್ಯ ಸಮಸ್ಯೆಯೊಂದರಿಂದ ಬಳಲುತ್ತಿದ್ದರು. ಇದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಈ ಬಗ್ಗೆ ಅವರ ಮಗ, ಮಗಳು ಹಾಗೂ ಚಿಕ್ಕಪ್ಪ ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಭಾನುವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡು ಮಹಿಳೆಯ ಆರೋಗ್ಯ ತೀವ್ರ ಹದಗೆಟ್ಟಿತ್ತು. ಚಿಕಿತ್ಸೆಗೆಂದು ನ್ಯಾನೊ ಆಸ್ಪತ್ರೆಗೆ ಕರೆದೊಯ್ದಾಗ ಅವರು ಮೃತಪಟ್ಟಿದ್ದಾರೆ. ಇವರ ಸಾವಿನ ಬಗ್ಗೆ ಮಾಹಿತಿ ಮಾತ್ರ ಸಂಗ್ರಹಿಸಲಾಗಿದೆ. ಮಕ್ಕಳಾಗಲಿ ಹಾಗೂ ಸಂಬಂಧಿಕರಾಗಲಿ, ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿ ಯಾವುದೇ ದೂರು ನೀಡಿಲ್ಲ’ ಎಂದು ಮೂಲಗಳು ತಿಳಿಸಿವೆ. ಮಹಿಳೆ ಸಾವಿನ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಕ್ಕಳು ಹಾಗೂ ಸಂಬಂಧಿಕರು ಲಭ್ಯರಾಗಲಿಲ್ಲ.

ಮಹಿಳೆಗೆ ಕಿರುಕುಳ ಆರೋಪ: ಬಿಎಸ್‌ವೈ ವಿರುದ್ಧ ದೂರು ನೀಡಿದ ನಂತರ, ಮಹಿಳೆಗೆ ಹಲವರು ಕಿರುಕುಳ ನೀಡುತ್ತಿದ್ದರೆಂಬ ಆರೋಪವಿದೆ. ಬಿಎಸ್‌ವೈ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ಎದುರು ಮಹಿಳೆ ಹಲವು ಮಾಹಿತಿ ಹಂಚಿಕೊಂಡಿದ್ದರು. ಇದೇ ಕಾರಣಕ್ಕೆ ಅವರ ಮನೆಗೆ ಭದ್ರತೆ ಒದಗಿಸಲಾಗಿತ್ತು ಎಂಬುದಾಗಿ ಸಿಐಡಿ ಮೂಲಗಳು ಹೇಳಿವೆ.

‘ದೂರುದಾರ ಮಹಿಳೆ ಸಾವಿನ ಬಗ್ಗೆ ವಿಷಯ ಗೊತ್ತಾಗಿದೆ. ಸಂಬಂಧಪಟ್ಟ ಠಾಣೆ ಅಧಿಕಾರಿಗಳು ಹಾಗೂ ಕುಟುಂಬದವರಿಂದ ಮಾಹಿತಿ ಪಡೆಯಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT