ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಯ ‘ಹೇಸಿಗೆ’ ಅವ್ಯವಹಾರ ಬೆಳಕಿಗೆ: ಹಣ ಕೊಟ್ಟರೆ ಸಿಗುತ್ತೆ ಹಾಸಿಗೆ!

ಕೋವಿಡ್‌ ಸೊಂಕಿತರಿಗೆ ಚಿಕಿತ್ಸೆಗೆ ಹಾಸಿಗೆ ಕಾಯ್ದಿರಿಸುವಿಕೆಯಲ್ಲಿ ಅಕ್ರಮ– ಜನಪ್ರತಿನಿಧಿಗಳ ಆರೋಪ
Last Updated 4 ಮೇ 2021, 13:13 IST
ಅಕ್ಷರ ಗಾತ್ರ

ಬೆಂಗಳೂರು: ಬಿ.ಯು.ನಂಬರ್‌ ಪಡೆದು ಬಿಬಿಎಂಪಿ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹಾಸಿಗೆಗಳೇ ಸಿಗುತ್ತಿಲ್ಲ. ಆದರೆ ಹಣ ಕೊಟ್ಟವರಿಗೆ ಬಿಬಿಎಂಪಿ ಹೆಸರಿನಲ್ಲೇ ಹಾಸಿಗೆ ಕಾಯ್ದಿರಿಸಲಾಗುತ್ತದೆ.

ಈ ಅವ್ಯವಹಾರವನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ ರೆಡ್ಡಿ, ರವಿ ಸುಬ್ರಹ್ಮಣ್ಯ ಹಾಗೂ ಉದಯ್‌ ಗರುಡಾಚಾರ್‌ ಅವರು ಬಯಲಿಗೆಳೆದಿದ್ದಾರೆ.

ಬಿಬಿಎಂಪಿ ದಕ್ಷಿಣ ವಲಯದ ವಾರ್‌ ರೂಂಗೆ ಭೇಟಿ ನೀಡಿ ಅವರು ಅಧಿಕಾರಿಗಳನ್ನ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಹಾಸಿಗೆ ಕಾಯ್ದಿರಿಸುವಿಕೆ ಹೆಸರಿನಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ದಾಖಲೆಗಳನ್ನು ಮಂಗಳವಾರ ಬಿಡುಗಡೆ ಮಾಡಿದರು. ಸರ್ಕಾರಿ ವ್ಯವಸ್ಥೆಯಲ್ಲಿ ಏನೆಲ್ಲ ಅಕ್ರಮ ನಡೆಯುತ್ತಿವೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ‘ಒಂದು ತಿಂಗಳ ಅವಧಿಯಲ್ಲಿ 10 ಸಾವಿರಕ್ಕೂ ಅಧಿಕ ಕೋವಿಡ್‌ ಸೋಂಕಿತರಿಗೆ ಹಾಸಿಗೆ ಹಂಚಿಕೆ ಮಾಡಿರುವುದನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಹಾಸಿಗೆ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಈ ವೇಳೆ ಕಂಡುಬಂದಿದೆ. ಮನೆಯಲ್ಲೇ ಆರೈಕೆಗೆ ಒಳಗಾಗುತ್ತಿರುವ ಕೋವಿಡ್‌ ಸೊಂಕಿತರ ಹೆಸರಿನಲ್ಲೂ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಒಬ್ಬನೇ ವ್ಯಕ್ತಿಯ ಹೆಸರಿನಲ್ಲಿ 12 ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸಲಾಗಿದೆ. ಇನ್ನು ಕೆಲವರ ಹೆಸರಿನಲ್ಲಿ ಮೂರು– ನಾಲ್ಕು ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದರಿಸಲಾಗಿದೆ. ಜನ ಅಲ್ಲಿ ಚಿಕಿತ್ಸೆಗೆ ಹಾಸಿಗೆ ಸಿಗದೇ ಸಾಯುತ್ತಿದ್ದಾರೆ. ಇಂತಹ ಇಂಥಹ ದಾರುಣ ಸಂದರ್ಭದಲ್ಲೂ ಈ ರೀತಿ ಭ್ರಷ್ಟಾಚಾರ ನಡೆಸಿರುವುದು ಅಕ್ಷಮ್ಯ’ ಎಂದು ಕಿಡಿ ಕಾರಿದರು.

‘ಬಡವರು ದಿನವಿಡೀ ಕಾದರೂ ಹಾಸಿಗೆ ಸಿಗುವುದಿಲ್ಲ. ಆದರೆ ರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಕೆಲ ಹಾಸಿಗೆಗಳು ದಿಢೀರ್‌ ಬ್ಲಾಕ್‌ ಆಗುತ್ತವೆ. ಆರೋಗ್ಯ ಮಿತ್ರ ಸಿಬ್ಬಂದಿ, ಬಿಬಿಎಂಪಿ ಸಹಾಯವಾಣಿಯ ಸಿಬ್ಬಂದಿ, ಹಾಸಿಗೆ ಹಂಚಿಕೆಯ ಕೇಂದ್ರೀಕೃತ ವ್ಯವಸ್ಥೆಯ ನಿರ್ವಹಣೆಗೆ ನಿಯುಕ್ತರಾಗಿರುವ ಸಿಬ್ಬಂದಿ ಹಾಗೂ ಕೆಲವು ಖಾಸಗಿ ಆಸ್ಪತ್ರೆ ಸಿಬ್ಬಂದಿ ಸೇರಿ ನಗರದಲ್ಲಿ ಹಾಸಿಗೆಗಳ ಕೃತಕ ಅಭಾವ ಸೃಷ್ಟಿಸಿ ಜನರ ಜೀವದ ಜೊತೆ ಚೆಲ್ಲಾಟ ಆಡಿದ್ದಾರೆ’ ಎಂದು ಅವರು ಅರೋಪಿಸಿದರು.

‘ಕೊರೋನಾ ಸೊಂಕಿತರ ಬಂಧುಗಳು ಹಾಸಿಗೆ ಒದಗಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ದಂಧೆಯಲ್ಲಿ ತೊಡಗಿರುವವರು ಈ ಮಾಹಿತಿಯಲ್ಲಿ ಮೊಬೈಲ್‌ ನಂಬರ್‌ ಪಡೆದು ಸೋಂಕಿತರ ಬಂಧುಗಳನ್ನು ಸಂಪರ್ಕಿಸಿ ಬಿಬಿಎಂಪಿಗಾಗಿ ಕಾಯ್ದಿರಿಸಿರುವ ಹಾಸಿಗೆಗಳನ್ನು ಮಾರಾಟ ಮಾಡಿದ್ದಾರೆ’ ಎಂದು ವಿವರಿಸಿದರು.

ಅಕ್ರಮದ ಮಾಹಿತಿ ನೀಡಿ:

‘ಬಿಬಿಎಂಪಿಗೆ ಕಾಯ್ದಿರಿಸಿರುವ ಹಾಸಿಗೆಗಳನ್ನುದುಡ್ಡು ಕೊಟ್ಟು ಬುಕ್‌ ಮಾಡಿಸಿದವರು ನೇರವಾಗಿ ನಮ್ಮನ್ನು ಸಂಪರ್ಕಿಸಿ ಮಾಹಿತಿ ನೀಡಿ. ಅಂಥಹ ಭ್ರಷ್ಟ ಅಧಿಕಾರಿಗಳ ಬೆಂಡೆತ್ತಿ ಒಳಗಡೆ ಹಾಕಿಸುತ್ತೇವೆ. ನಮಗೆ ಮಾಹಿತಿ ನೀಡಿದವರಿಗೆ ರಕ್ಷಣೆಯನ್ನೂ ಒದಗಿಸುತ್ತೇವೆ. ಇವತ್ತಿನಿಂದ ಈ ಭ್ರಷ್ಟಾಚಾರ ಮುಂದುವರಿದರೆ ನಾನು ಸಂಸದನಾಗಿ ಮುಂದುವರಿಯುವುದಕ್ಕೆ ಯೋಗ್ಯತೆ ಇಲ್ಲ ಎಂದೇ ಅರ್ಥ. ಅದಕ್ಕಿಂತ ನಾನು ರಾಜೀನಾಮೆ ನೀಡುವುದು ಒಳ್ಳೆಯದು’ ಎಂದು ಸವಾಲು ಹಾಕಿದರು.

ನಮ್ಮದೇ ಸರ್ಕಾರವಿದ್ದರೂ ಹೋರಾಟ ಅನಿವಾರ್ಯ:

ಶಾಸಕ ಸತೀಶ ರೆಡ್ಡಿ, ‘ಶಾಸಕನಾಗಿ ನಾನು ಶಿಫಾರಸು ಮಾಡಿದರೂ ತುರ್ತು ಅಗತ್ಯ ಇರುವವರಿಗೆ ಬಿಬಿಎಂಪಿ ಅಧಿಕಾರಿಗಳು ಹಾಸಿಗೆ ಕೊಡಿಸುವುದಿಲ್ಲ. ಹಾಸಿಗೆಗಳನ್ನು ಅಕ್ರಮವಗಿ ಬ್ಲಾಕ್‌ ಮಾಡುವ ದಂಧೆಯಲ್ಲಿ ತೊಡಗಿದವರನ್ನು ಜೈಲಿಗೆ ಅಟ್ಟಬೇಕು. ಅಲ್ಲಿಯವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ. ನಮ್ಮದೇ ಸರ್ಕಾರ ಇದ್ದರೂ ನಾವು ಹಿಂಜರಿಯುವುದಿಲ್ಲ. ನಾವು ವಿರೋಧ ಪಕ್ಷದಲ್ಲಿದ್ದರೂ ಇದೇ ರೀತಿ ಹೋರಾಟ ಮಾಡುತ್ತಿದ್ದೆವು’ ಎಂದರು.

‘ಕೇಂದ್ರ ಸರ್ಕಾರ 780 ವೆಂಟಿಲೇಟರ್‌ಗಳನ್ನು ಕಳುಹಿಸಿಕೊಟ್ಟಿದ್ದರೂ ಅದನ್ನು ಅಳವಡಿಸಿಲ್ಲ. ಅಪೋಲೊ, ಫೋರ್ಟಿಸ್‌ನಂತಹ ಆಸ್ಪತ್ರೆಗಳು ವೆಂಟಿಲೇಟ್‌ ಕೊಟ್ಟರೆ ನಾವು ಐಸಿಯು ಹಾಸಿಗೆಗಳ ಸಂಖ್ಯೆ ಹೆಚ್ಚಿಸಿ ಬಿಬಿಎಂಪಿಗೆ ಒದಗಿಸುತ್ತೇವೆ ಎಂದು ಹೇಳಿವೆ. ಆದರೂ ಅಧಿಕಾರಿಗಳು ಅವುಗಳಿಗೆ ವೆಂಟಿಲೇಟರ್‌ ನೀಡಿಲ್ಲ. ಇನ್ನಷ್ಟು ವೆಂಟಿಲೇಟರ್‌ಗಳು ಬರಲಿದ್ದು, ನಂತರ ಹಂಚಿಕೆ ಮಾಡುತ್ತೇವೆ ಎನ್ನುತ್ತಾರೆ. ನಮ್ಮ ಬೊಮ್ಮನಹಳ್ಳಿ ವಲಯದ ಕಡೆಗಂತೂ ಯಾವುದೇ ಐಎಎಸ್‌ ಅಧಿಕಾರಿ ನಾಲ್ಕು ದಿನಗಳಿಂದ ತಲೆ ಹಾಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ರವಿ ಸುಬ್ರಹ್ಮಣ್ಯ, ‘ಹಾಸಿಗೆ ಕೊಡಿಸಿ ಎಂದು ನಾವು ಅಂಗಲಾಚಿದರೂ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ನಮ್ಮ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಅಧಿಕಾರಿಗಳು ಷಡ್ಯಂತ್ರದಿಂದಾಗಿಯೇ ರೆಮ್‌ಡಿಸಿವಿರ್‌ ಔಷಧ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ’ ಎಂದು ಆರೋಪಿಸಿದರು.

ಶಾಸಕ ಉದಯ್‌ ಗರುಡಾಚಾರ್‌, ‘ದಾಖಲೆಗಳ ಪ್ರಕಾರ 11,314 ಹಾಸಿಗೆಗಳು ಬಿಬಿಎಂಪಿ ವತಿಯಿಂದ ಚಿಕಿತ್ಸೆ ಪಡೆಯುವವರಿಗಾಗಿ ಲಭ್ಯ ಇವೆ. ಅವುಗಳಲ್ಲಿ 9,690 ಹಾಸಿಗೆಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ. ನಾವು ಕೇಳಿದರೆ ಹಾಸಿಗೆ ಸಿಗುತ್ತಿಲ್ಲ ಎನ್ನುತ್ತಾರೆ. ಹಾಗಾದರೆ 1,624 ಹಾಸಿಗೆಗಳು ಎಲ್ಲಿ ಹೋದವು’ ಎಂದು ಪ್ರಶ್ನಿಸಿದರು.

****

ಯಾವ ರೀತಿ ಅಕ್ರಮ?

* ಕೋವಿಡ್‌ ಸೊಂಕಿನ ಲಕ್ಷಣ ಇಲ್ಲದ ವ್ಯಕ್ತಿ ಹೆಸರಿನಲ್ಲಿ ಹಾಸಿಗೆ ಹಂಚಿಕೆ ಮಾಡಿ ಅದನ್ನು ಇನ್ನೊಬ್ಬ ವ್ಯಕ್ತಿಯ ಬಳಕೆಗೆ ನೀಡಲಾಗಿದೆ

* ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿರುವ ಸೊಂಕಿತೆಯ ಹೆಸರಿನಲ್ಲಿ ಐಸಿಯು ಹಾಸಿಗೆ ಬ್ಲಾಕ್‌ ಮಾಡಲಾಗಿದೆ. ಆ ವಿಚಾರ ಆ ಮಹಿಳೆಗೇ ಗೊತ್ತಿಲ್ಲ

* ಒಬ್ಬ ಮಹಿಳೆಯ ಹೆಸರಿಲ್ಲಿ ಮೂರು ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದರಿಸಲಾಗಿದೆ. ಆಕೆಗೆ ಹಾಸಿಗೆಯ ಅಗತ್ಯವೂ ಇರಲಿಲ್ಲ, ಈ ವಿಷಯವೂ ಆ ರೋಗಿಯ ಕಡೆಯವರಿಗೆ ತಿಳಿದಿರಲಿಲ್ಲ.

* ಹಾಸಿಗೆ ಅಗತ್ಯವೇ ಇಲ್ಲದ ಇನ್ನೊಬ್ಬ ಮಹಿಳೆ ಹೆಸರಿನಲ್ಲಿ ಐಸಿಯು ಹಾಸಿಗೆ ಕಾಯ್ದಿರಿಸಲಾಗಿದೆ.

* ಒಬ್ಬ ಮಹಿಳೆಗೆ ಒಂದೇ ಆಸ್ಪತ್ರೆಯಲ್ಲಿ ಎರಡು ಬಾರಿ ಎಚ್‌ಡಿಯು ಹಾಸಿಗೆ ಕಾಯ್ದರಿಸಲಾಗಿದೆ. ಆದರೆ ಆ ಮಹಿಳೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ. ಬಿಬಿಎಂಪಿ ಹಾಸಿಗೆ ಕಾಯ್ದಿರಿಸಿರುವ ವಿಚಾರವೇ ಮಹಿಳೆಗಯ ಕಡೆಯವರಿಗೆ ತಿಳಿದಿಲ್ಲ.

* ಕೆಲವು ರೋಗಿಗಳು ಹಾಸಿಗೆ ಕಾಯ್ದಿರಿಸಿದ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಆಸ್ಪತ್ರೆ ಹಾಗೂ ಆರೋಗ್ಯ ಮಿತ್ರ ಸಿಬ್ಬಂದಿಯ ಅಕ್ರಮ ನಂಟಿಗೆ ಉದಾಹರಣೆ

****

4,065 ಹಾಸಿಗೆ ಕಾಯ್ದಿರಿಸುವಿಕೆ ರದ್ದು’

‘ಬಿಬಿಎಂಪಿಯ ಹಾಸಿಗೆ ಕಾಯ್ದಿರಿಸುವ ಕೆಂದ್ರೀಕೃತ ವ್ಯವಸ್ಥೆ ಮೂಲಕ ಒಮ್ಮೆ ಹಾಸಿಗೆ ಕಾಯ್ದರಿಸಿದ 12 ಗಂಟೆ ಒಳಗೆ ರೋಗಿಯನ್ನು ಆ ಆಸ್ಪತ್ರೆ ದಾಖಲಿಸಲಿದ್ದರೆ, ಆ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲಾಗುತ್ತದೆ. ದಕ್ಷಿಣ ವಲಯದ ವಾರ್‌ರೂಂನಲ್ಲಿ ಏ. 20ರಿಂದ ಮೇ 1ರವರೆಗೆ ಕಾಯ್ದಿರಿಸಿದ ಹಾಸಿಗೆಗಳನ್ನು ರೋಗಿಗಳು ಬಳಸಿಕೊಂಡ ಸ‌ಂಖ್ಯೆ 5,488. ಆದರೆ, ಇದೇ ಅವಧಿಯಲ್ಲಿ 4065 ಹಾಸಿಗೆಗಳ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲಾಗಿದೆ. ಇದರ ಹಿಂದೆ ಅವ್ಯವಹಾರ ನಡೆದಿರುವ ಶಂಕೆ ಇದೆ’ ಎಂದು ತೇಜಸ್ವಿ ಸೂರ್ಯ ಹೇಳಿದರು.

–0–

ಸಂಸದ, ಶಾಸಕ ಅಥವಾ ಐಎಎಸ್‌ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ ಎಂಬ ಕಾರಣಕ್ಕೆ ಹಾಸಿಗೆ ಒದಗಿಸುವ ಸ್ಥಿತಿ ಇರಬಾರದು. ಸಹಾಯವಾಣಿ ಮೂಲಕ ಸಂಪರ್ಕಿಸಿದವರಿಗೆ ಮಾತ್ರ ಹಾಸಿಗೆ ಸಿಗಬೇಕು
–ತೇಜಸ್ವಿ ಸೂರ್ಯ, ಸಂಸದ, ಬೆಂಗಳೂರು ದಕ್ಷಿಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT