ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕುವಿನಿಂದ ಚುಚ್ಚಿ ವೃದ್ಧ ದಂಪತಿ ಕೊಲೆ: 24 ಗಂಟೆಯಲ್ಲಿ ಆರೋಪಿ ಬಂಧನ

Last Updated 11 ಮೇ 2020, 8:33 IST
ಅಕ್ಷರ ಗಾತ್ರ

ಬೆಂಗಳೂರು: ಜೆಪಿನಗರ 7ನೇ ಹಂತದ ಆರ್‌ಬಿಐ ಲೇಔಟ್‌ನಲ್ಲಿ ವೃದ್ಧ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿ.ಜಿ. ಗೋವಿಂದಯ್ಯ (65) ಮತ್ತು ಶಾಂತಮ್ಮ (58) ಅವರನ್ನು ಭಾನುವಾರ ರಾತ್ರಿ ಕೊಲೆ ಮಾಡಲಾಗಿತ್ತು. ಆವಲಹಳ್ಳಿಯ ಡಿ. ರಾಕೇಶ್‌ ಆಲಿಯಾಸ್‌ ರಾಕ್ಸ್ (25) ಬಂಧಿತ ಆರೋಪಿ.

ವೃದ್ಧ ದಂಪತಿಯ ಪುತ್ರ ನವೀನ್ ಕೊಲೆ ಮಾಡಿರಬಹುದೆಂಬ ಅನುಮಾನ ಮೊದಲು ವ್ಯಕ್ತವಾಗಿತ್ತು. ಆದರೆ, ನವೀನ್‌ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು, ಆತನ ಪತ್ನಿಯ ತಮ್ಮ ರಾಕೇಶ್ ಆರೋಪಿ ಎನ್ನುವುದನ್ನು ಖಚಿತಪಡಿಸಿದ್ದು, ಬಳಿಕ ಬಂಧಿಸಿದ್ದಾರೆ.

ನವೀನ್‌ ನೀಡಿದ ದೂರಿನಲ್ಲಿ ಏನಿದೆ

ಕೊಲೆಯಾದ ದಂಪತಿಯ ಪುತ್ರ ನವೀನ್‌ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ.

‘ನಾನು 2008ರಲ್ಲಿ ಪವಿತ್ರಾ ಎಂಬಾಕೆಯನ್ನು ಮದುವೆಯಾಗಿದ್ದೆ. ಆದರೆ, ಸಂಸಾರದಲ್ಲಿ ಹೊಂದಾಣಿಕೆ ಆಗದ ಕಾರಣ ಆಕೆ ನನ್ನನ್ನು ಬಿಟ್ಟು ದೂರವಾಗಿದ್ದಳು. ಕೌಟುಂಬಿಕ ನ್ಯಾಯಾಲಯದಲ್ಲಿ ಆಪ್ತ ಸಮಾಲೋಚನೆ ಬಳಿಕ ಮತ್ತೆ ಮನೆಗೆ ಬಂದಿದ್ದಳು. ಆದರೆ, ಅಂದಿನಿಂದ ಪತ್ನಿಯ ತಮ್ಮ ರಾಕೇಶ್ ನನ್ನ ಮತ್ತು ನನ್ನ ಕುಟುಂಬದ ಮೇಲೆ ದ್ವೇಷ ಹೊಂದಿದ್ದ’ ಎಂದು ದೂರಿನಲ್ಲಿ ನವೀನ್ ಆರೋಪಿಸಿದ್ದ.

‘ಭಾನುವಾರ (ಮೇ 10) ಸಂಜೆ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದು ಬಿಡುವಂತೆ ರಾಕೇಶ್‌ಗೆ ಕರೆ ಮಾಡಿದ್ದೆ. ಆ ವೇಳೆ ನಮ್ಮಿಬ್ಬರ ಮಧ್ಯೆ ಮಾತಿನ ವಾಗ್ವಾದ ನಡೆದಿದೆ. ಈ ವೇಳೇ ರಾಕೇಶ್, ‘ನಾನು ಈಗ ನಿಮ್ಮ ಮನೆಗೆ ಬಂದು ಏನು ಮಾಡುತ್ತೇನೆಂದು ನೋಡಿ‘ ಎಂದು ನನಗೆ ಮತ್ತು ತಂದೆ ಗೋವಿಂದಯ್ಯ ಅವರನ್ನು ಬೆದರಿಸಿದ್ದ. ನಾನು ಸಂಜೆ 7.30ರ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದೆ. ರಾತ್ರಿ 7.30ರಿಂದ 8.45ರ ಮಧ್ಯೆ ಮನೆಗೆ ಬಂದಿದ್ದ ರಾಕೇಶ್, ತಂದೆ ಮತ್ತು ತಾಯಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ’ ಎಂದೂ ದೂರಿನಲ್ಲಿ ನವೀನ್‌ ತಿಳಿಸಿದ್ದ.

ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್‌ ಸಫೆಟ್‌, ಅವರು ಎಸಿಪಿ ಮಂಜುನಾಥ ಬಾಬು ನೇತೃತ್ವದಲ್ಲಿ ಕೋಣನಕುಂಟೆ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಟಿ.ಎಂ. ಧರ್ಮೇಂದ್ರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಆರೋಪಿಯನ್ನು ಬಂಧಿಸಿದೆ.

ಮಗನೇ ಮೇಲೆ ವ್ಯಕ್ತವಾದ ಶಂಕೆ

ಮದ್ಯದ ಅಮಲಿನಲ್ಲಿ ಮಗ ನವೀನ್​ ಹರಿತವಾದ ಆಯುಧದಿಂದ ಹೊಡೆದು ತಂದೆ– ತಾಯಿಯನ್ನು ಕೊಲೆ ಮಾಡಿರಬೇಕು ಎಂಬ ಶಂಕೆ ಮೊದಲು ವ್ಯಕ್ತವಾಗಿತ್ತು. ಸಾಪ್ಟ್​ವೇರ್​​​ ಎಂಜಿನಿಯರ್‌ ಆಗಿರುವ ನವೀನ್‌, ಘಟನೆ ವೇಳೆ ಮನೆಯಲ್ಲಿ ಇರಲಿಲ್ಲ. ಸಂಜೆಯಷ್ಟೆ ಮನೆಯಿಂದ ಹೊರ ಹೋಗಿದ್ದ. ಮದ್ಯಪಾನ ಮಾಡಿ ರಾತ್ರಿ ಮನೆಗೆ ಹಿಂದಿರುಗಿದಾಗ ಘಟನೆ ನಡೆದಿರುವುದು ಅವನಿಗೆ ಗೊತ್ತಾಗಿದೆ. ಅಲ್ಲದೆ, ಮನೆಯಲ್ಲಿ ಹಲವು ವಿಚಾರಗಳಿಗೆ ಅಂತರಿಕ ಕಲಹ ಆಗಾಗ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT