ಬೆಂಗಳೂರು: ಬಟ್ಟೆ ಅಂಗಡಿ ಮಾಲೀಕರೊಬ್ಬರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪದ ಅಡಿ ಪ್ರೇಮಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುದ್ದಗುಂಟೆಪಾಳ್ಯದ ನಿವಾಸಿ ಹಿತೇಂದ್ರ ಕುಮಾರ್(58) ಚಾಕು ಇರಿತಕ್ಕೆ ಒಳಗಾದವರು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು.
‘ಕೃತ್ಯ ಎಸಗಿದ ಆರೋಪದಡಿ ಬೆಳಗಾವಿಯ ಸಿದ್ದು(28) ಮತ್ತು ಅವರ ಪ್ರೇಯಸಿ ಕಿರಣ ನಿಕ್ಕಂ (24) ಅವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು. ಬಿಟಿಎಂ ಲೇಔಟ್‌ನ 1ನೇ ಹಂತದ ಕೆಇಬಿ ಉದ್ಯಾನದಲ್ಲಿ ಕೊಲೆಗೆ ಯತ್ನಿಸಲಾಗಿತ್ತು.
‘ಸಿದ್ದು ಮತ್ತು ಕಿರಣ ಅವರು ಬೆಳಗಾವಿ ಜಿಲ್ಲೆ, ಅಥಣಿ ತಾಲ್ಲೂಕಿನವರು. ಇಬ್ಬರೂ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಜೂನ್‌ನಲ್ಲಿ ಬೆಂಗಳೂರಿಗೆ ಬಂದಿದ್ದು, ಸುದ್ದಗುಂಟೆಪಾಳ್ಯ ಸಮೀಪದ ತಾವರೆಕೆರೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸಹಜೀವನ ನಡೆಸುತ್ತಿದ್ದರು. ಕಿರಣ ಅವರು ಜಯನಗರದ 9ನೇ ಬ್ಲಾಕ್‌ನಲ್ಲಿ ಇರುವ ಹಿತೇಂದ್ರ ಕುಮಾರ್ ಅವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಸಿದ್ದು ಬೇರೆಡೆ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಹಿತೇಂದ್ರ ಕುಮಾರ್, ಕಿರಣಗೆ ತನ್ನನ್ನು ಮದುವೆ ಆಗುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡಿದ್ದ ಕಿರಣ ಅವರು ಕೆಲಸ ತೊರೆದಿದ್ದರು. ಅದಾದ ಮೇಲೆ ಆರ್ಥಿಕ ಸಹಾಯ ಮಾಡುವುದಾಗಿ ಕಿರಣ ಅವರಿಗೆ ಹಿತೇಂದ್ರ ಆಮಿಷವೊಡ್ಡಿದ್ದರು’ ಎಂದು ಪೊಲೀಸರು ಹೇಳಿದರು.
‘ಹಿತೇಂದ್ರ ಕುಮಾರ್ ಆಕೆಗೆ ಪ್ರೀತಿಯ ಸಂದೇಶಗಳು ಮತ್ತು ವಿಡಿಯೊಗಳನ್ನು ಕಳುಹಿಸುತ್ತಿದ್ದರು’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
‘ಸೆ.14ರಂದು ಹಿತೇಂದ್ರ ಕುಮಾರ್ ಅವರು ಕಿರಣಗೆ ಕರೆ ಮಾಡಿ, ಭೇಟಿ ಮಾಡುವಂತೆ ಕೇಳಿದ್ದರು. ಅದಕ್ಕೆ ಆಕೆಯೂ ಕೂಡ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಅಂದು ರಾತ್ರಿ ಕೆಇಬಿ ಉದ್ಯಾನದಲ್ಲಿ ಭೇಟಿ ಆಗಿದ್ದರು. ಆಗ ಹಿತೇಂದ್ರ ಅವರು ಮತ್ತೊಮ್ಮೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಉದ್ಯಾನದಲ್ಲೇ ಸಮಯ ಕಳೆದು ಮನೆಗೆ ಹೋಗಿದ್ದರು’ ಎಂದು ಮೂಲಗಳು ತಿಳಿಸಿವೆ.
‘ತಡರಾತ್ರಿ ಮನೆಗೆ ಹೋದಾಗ ಕಿರಣ ಅವರನ್ನು ಸಿದ್ದು ಪ್ರಶ್ನಿಸಿದ್ದರು. ಹಿತೇಂದ್ರ ಕುಮಾರ್ ಪ್ರೀತಿಸುವಂತೆ ಪೀಡಿಸುತ್ತಿರುವ ವಿಷಯ ಹೇಳಿಕೊಂಡಿದ್ದರು. ಆಗ ಕೋಪಗೊಂಡಿದ್ದ ಸಿದ್ದು ಕೊಲೆಗೆ ಸಂಚು ರೂಪಿಸಿದ್ದರು. ತನ್ನ ಪ್ರೇಯಸಿಯಿಂದಲೇ ಹಿತೇಂದ್ರ ಕುಮಾರ್‌ಗೆ ಕರೆ ಮಾಡಿಸಿ, ಉದ್ಯಾನಕ್ಕೆ ಬರುವಂತೆ ಹೇಳಿದ್ದರು. ಅಲ್ಲಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.