ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಕುಡಿದು ಕೆಲಸ ಮಾಡಬೇಡವೆಂದಿದ್ದಕ್ಕೆ ಕೊಲೆ: ಭದ್ರತಾ ಸಿಬ್ಬಂದಿ ಬಂಧನ

‘ಸರಿಯಾಗಿ ಕೆಲಸ ಮಾಡು’ ಎಂದಿದ್ದಕ್ಕೆ ಕೃತ್ಯ
Last Updated 10 ನವೆಂಬರ್ 2021, 19:23 IST
ಅಕ್ಷರ ಗಾತ್ರ

ಬೆಂಗಳೂರು: ಎಸಿಎಸ್ ಬಡಾವಣೆಯ ಅಪಾರ್ಟ್‌ಮೆಂಟ್ ಸಮುಚ್ಚಯ ಒಕ್ಕೂಟದ ಕಾರ್ಯದರ್ಶಿ ಭಾಸ್ಕರ್ ರೆಡ್ಡಿ (65) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಭದ್ರತಾ ಸಿಬ್ಬಂದಿ ಬಸಂತ್ (32) ಎಂಬಾತನನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದಾರೆ.

‘ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಕೊಲೆಯಾಗಿರುವ ಭಾಸ್ಕರ್ ರೆಡ್ಡಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕೃತ್ಯದ ಬಳಿಕ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನೇಪಾಳದ ಬಸಂತ್, ‘ಪದ್ಮಾ ನಿಲಯ’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಕೆಲಸ ಮಾಡುತ್ತಿದ್ದ. ಸಾಫ್ಟ್‌ವೇರ್‌ ಎಂಜಿನಿಯರ್ ಆಗಿರುವ ಮಗನ ಜೊತೆಯಲ್ಲಿ ವಾಸವಿದ್ದ ಭಾಸ್ಕರ್ ರೆಡ್ಡಿ, ಅದೇ ಅಪಾರ್ಟ್‌ಮೆಂಟ್‌ ಸಮುಚ್ಚಯ ಒಕ್ಕೂಟದ ಕಾರ್ಯದರ್ಶಿಯೂ ಆಗಿದ್ದರು.’

‘ನಸುಕಿನಲ್ಲಿ ಮದ್ಯ ಕುಡಿಯುತ್ತಿದ್ದ ಆರೋಪಿ, ಅದರ ಅಮಲಿನಲ್ಲೇ ಕೆಲಸ ಮಾಡುತ್ತಿದ್ದ. ಇದನ್ನು ಗಮನಿಸಿದ್ದ ಭಾಸ್ಕರ್ ರೆಡ್ಡಿ, ‘ಮದ್ಯ ಕುಡಿದು ಕೆಲಸ ಮಾಡಬೇಡ. ಸರಿಯಾಗಿ ಕೆಲಸ ಮಾಡು. ಇಲ್ಲದಿದ್ದರೆ, ಕೆಲಸದಿಂದ ತೆಗೆಸುತ್ತೇನೆ’ ಎಂದಿದ್ದರು. ಅಷ್ಟಕ್ಕೆ ಕೋಪಗೊಂಡಿದ್ದ ಆರೋಪಿ, ಭಾಸ್ಕರ್ ಮೇಲೆಯೇ ಹರಿಹಾಯ್ದಿದ್ದ’ ಎಂದೂ ತಿಳಿಸಿವೆ.

ಪಾರ್ಕಿಂಗ್ ಜಾಗದಲ್ಲಿ ಕೊಲೆ: ‘ಭಾಸ್ಕರ್ ರೆಡ್ಡಿ ಅವರಿಗೆ ಒಂದು ಗತಿ ಕಾಣಿಸಬೇಕೆಂದು ಆರೋಪಿ ಸಂಚು ರೂಪಿಸಿದ್ದ. ಸಮಯಕ್ಕಾಗಿ ಕಾಯುತ್ತಿದ್ದ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಕಾರು ಪಾರ್ಕಿಂಗ್ ಜಾಗದಲ್ಲಿ ಭಾಸ್ಕರ್ ರೆಡ್ಡಿ ಓಡಾಡುತ್ತಿದ್ದರು. ಅದನ್ನು ನೋಡಿದ್ದ ಆರೋಪಿ, ಕಸಗುಡಿಸುವ ಸೋಗಿನಲ್ಲಿ ಸ್ಥಳಕ್ಕೆ ಹೋಗಿದ್ದ. ಭಾಸ್ಕರ್‌ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ.’

‘ತೀವ್ರ ರಕ್ತಸ್ರಾವದಿಂದ ಭಾಸ್ಕರ್ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಸ್ಥಳೀಯ ನಿವಾಸಿಗಳೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT