ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆ ನುಗ್ಗಿ ವೃದ್ಧೆ ಹತ್ಯೆ: ನಗದು, ಚಿನ್ನಾಭರಣ ದೋಚಿ ಪರಾರಿ

ನಿವೃತ್ತ ಪೊಲೀಸ್ ಅಧಿಕಾರಿ ಪತ್ನಿ * ಭದ್ರತಾ ಸಿಬ್ಬಂದಿ ಮೇಲೆ ಅನುಮಾನ
Last Updated 13 ಆಗಸ್ಟ್ 2022, 23:30 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಜಯಶ್ರೀ (80) ಎಂಬುವರನ್ನು ಹತ್ಯೆ ಮಾಡಲಾಗಿದ್ದು, ನಗದು ಹಾಗೂ ಚಿನ್ನಾಭರಣ ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ.

‘13ನೇ ಅಡ್ಡರಸ್ತೆಯ ನಿವಾಸಿ ಜಯಶ್ರೀ, ಒಂಟಿಯಾಗಿ ವಾಸವಿದ್ದರು. ಶುಕ್ರವಾರ ರಾತ್ರಿ ಮನೆಗೆ ನುಗ್ಗಿದ ಆರೋಪಿಗಳು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡ ರಚಿಸಲಾಗಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ತಿಳಿಸಿದರು.

‘ಜಯಶ್ರೀ, ನಿವೃತ್ತ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಅವರ ಪತ್ನಿ. ಕೆಲ ವರ್ಷಗಳ ಹಿಂದೆಯಷ್ಟೇ ಶ್ರೀನಿವಾಸ್ ತೀರಿಕೊಂಡಿದ್ದರು. ಅವರ ಮಗ, ಕಮ್ಮನಹಳ್ಳಿಯಲ್ಲಿ ಪ್ರತ್ಯೇಕವಾಗಿ ವಾಸವಿದ್ದಾರೆ. ಮಗಳು, ಕೆನಡಾದಲ್ಲಿದ್ದಾರೆ. ಜಯಶ್ರೀ ಅವರಿಗೆ ನಾಲ್ಕು ಮನೆಗಳಿದ್ದು, ಮೂರು ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಕೆಳ ಮಹಡಿಯ ಮನೆಯಲ್ಲಿ ಒಂಟಿಯಾಗಿ ಅವರು ವಾಸವಿದ್ದರು.’

‘ರಾತ್ರಿ 10 ಗಂಟೆಯಂದ 12 ಗಂಟೆ ಅವಧಿಯಲ್ಲಿ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು, ಕೊಲೆ ಮಾಡಿರುವುದು ಗೊತ್ತಾಗಿದೆ. ಮಹಡಿಯಲ್ಲಿ ವಾಸವಿದ್ದ ನಿವಾಸಿಯೊಬ್ಬರು, ಮೆಟ್ಟಿಲು ಮೂಲಕ ತಮ್ಮ ಮನೆಗೆ ಹೊರಟಿದ್ದರು. ಜಯಶ್ರೀ ಮನೆ ಬಾಗಿಲು ತೆರೆದಿದ್ದನ್ನು ಗಮನಿಸಿ, ಇಣುಕಿ ನೋಡಿದ್ದರು. ಇದೇ ವೇಳೆಯೇ ಅವರಿಗೆ ಮೃತದೇಹ ಕಂಡಿತ್ತು. ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು’ ಎಂದು ಹೇಳಿದರು.

ಪರಿಚಯಸ್ಥರಿಂದಲೇ ಕೃತ್ಯ: ‘ನಗದು, ಚಿನ್ನಾಭರಣ ದೋಚುವ ಉದ್ದೇಶದಿಂದಲೇ ಜಯಶ್ರೀ ಅವರನ್ನು ಪರಿಚಯಸ್ಥರೇ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಜಯಶ್ರೀ ಅವರ ಬಳಿ ಕೆಲಸಕ್ಕಿದ್ದ ನೇಪಾಳದ ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದು, ಆತನ ಮೇಲೆಯೇ ಸಂಶಯವಿದೆ’ ಎಂದು ಪೊಲೀಸರು ತಿಳಿಸಿದರು.

‘ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಸಾಗಿಸಲಾಗಿದೆ. ಮನೆ ಕೆಲಸಗಾರರು ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT