ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಹತ್ಯೆ: ಕಾರು ಸಮೇತ ದುಷ್ಕರ್ಮಿಗಳು ಪರಾರಿ

Published 20 ಏಪ್ರಿಲ್ 2024, 16:55 IST
Last Updated 20 ಏಪ್ರಿಲ್ 2024, 16:55 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ಎಂ.ಶೋಭಾ (48) ಎಂಬುವವರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಲಾಗಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

‘ಸ್ಥಳೀಯ ಗಣೇಶನಗರದ ಶೋಭಾ, ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದರು. ಎರಡನೇ ಮಗಳ ಜೊತೆ ವಾಸವಿದ್ದರು. ಮಗಳು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಶೋಭಾ ಅವರ ಮಾಂಗಲ್ಯ ಸರ, ಚಿನ್ನದ ಸರ, ಮೊಬೈಲ್ ಅನ್ನು ದೋಚಿರುವ ದುಷ್ಕರ್ಮಿಗಳು, ಮನೆ ಎದುರು ಕಾರಿನ ಸಮೇತ ಪರಾರಿಯಾಗಿದ್ದಾರೆ. ಪರಿಚಯಸ್ಥರೇ ಕೃತ್ಯ ಎಸಗಿರುವ ಶಂಕೆ ಇದೆ. ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.

‘ಶೋಭಾ ಹಾಗೂ ಎರಡನೇ ಮಗಳು ಹರ್ಷಿತಾ ಮಾತ್ರ ಮನೆಯಲ್ಲಿ ವಾಸವಿದ್ದರು. ಶೋಭಾ ಅವರ ಪತಿ ಹಾಗೂ ಮೊದಲ ಮಗಳು ಪ್ರತ್ಯೇಕವಾಗಿ ನೆಲೆಸಿದ್ದಾರೆ. ಹರ್ಷಿತಾ ಅವರಿಗೆ ಏಪ್ರಿಲ್ 4ರಂದು ಮದುವೆಯಾಗಿತ್ತು.’

‘ಮದುವೆಯ ಸಂಪ್ರದಾಯಗಳು ನಡೆಯುತ್ತಿರುವುದರಿಂದ ಹರ್ಷಿತಾ ತಾಯಿಯ ಮನೆಯಲ್ಲಿದ್ದರು. ಏಪ್ರಿಲ್ 18ರಂದು ಜೆ.ಪಿ. ನಗರದಲ್ಲಿರುವ ಪತಿಯ ಮನೆಗೆ ಹೋಗಿದ್ದರು. ಮರುದಿನ ತಾಯಿ ಶೋಭಾಗೆ ಕರೆ ಮಾಡಿದ್ದರು. ಆದರೆ, ತಾಯಿ ಕರೆ ಸ್ವೀಕರಿಸಿರಲಿಲ್ಲ. ಗಾಬರಿಗೊಂಡು ಅಕ್ಕ ಹಾಗೂ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಕ್ಕ ಮನೆಗೆ ಹೋಗಿ ನೋಡಿದಾಗ, ಬೆಡ್ ಮೇಲೆ ಶೋಭಾ ಮೃತದೇಹ ಕಂಡಿತ್ತು’ ಎಂದು ಪೊಲೀಸರು ಹೇಳಿದರು.

‘ಶೋಭಾ ಮೈ ಮೇಲೆ ಚಿನ್ನಾಭರಣ ಹಾಗೂ ಮನೆ ಎದುರು ಕಾರು ಇರಲಿಲ್ಲ. ಶೋಭಾ ಅವರನ್ನು ಯಾರೋ ಕೊಲೆ ಮಾಡಿ ಚಿನ್ನಾಭರಣ–ಕಾರು ದೋಚಿರುವುದಾಗಿ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮನೆಯ ಅಕ್ಕ–ಪಕ್ಕದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT