ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಫೀಸಾ ಫಜಲ್ ಬದುಕೇ ಹೋರಾಟ: ಎಸ್‌.ಎಂ.ಕೃಷ್ಣ

Last Updated 4 ನವೆಂಬರ್ 2022, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಶೋಷಣೆ ಮತ್ತು ಅನ್ಯಾಯದ ವಿರುದ್ಧದ ನಫೀಸ್ ಫಜಲ್ ಅವರ ಹೋರಾಟವೇ ಅವರನ್ನು ರಾಜಕಾರಣಿಯನ್ನಾಗಿ ಮಾಡಿತು’ ಎಂದು ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣಅಭಿಪ್ರಾಯಪಟ್ಟರು.

ಲೇಖಕಿ ಸಂಧ್ಯಾ ಮೆಂಡೋನ್ಸಾ ಅವರು ಬರೆದಿರುವ ನಫೀಸಾ ಫಜಲ್ ಅವರ ಆತ್ಮಕತೆ ‘ಬ್ರೇಕಿಂಗ್‌ ಬ್ಯಾರಿಯರ್ಸ್‌’ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘1985ರಿಂದ ನಾನು ನಫೀಸ್ ಫಜಲ್ ಅವರನ್ನು ನೋಡಿದ್ದೇನೆ. ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಬರುವುದು ಸಾಧ್ಯವಿಲ್ಲದ ಕಾಲಘಟ್ಟದಲ್ಲಿ ನಿರಂತರ ಪರಿಶ್ರಮ ಮತ್ತು ದೃಢ ನಿಲುವಿನಿಂದ ಮುನ್ನಡೆದು ರಾಜಕೀಯ ಜೀವನದಲ್ಲಿ ಯಶಸ್ವಿಯಾದವರು. ಸಮುದಾಯ, ಸಂಪ್ರದಾಯದ ಅಡೆತಡೆ ಮೀರಿ, ಬದಲಾವಣೆಗಾಗಿ ಹೋರಾಟ ನಡೆಸಿದ ದಿಟ್ಟ ಮಹಿಳೆ ಅವರು. ಅನ್ಯಾಯದ ವಿರುದ್ಧ ಹೋರಾಟಕ್ಕೆ ಹಿಂಜರಿಯದ ಸ್ವಭಾವ ಅವರದ್ದು. ಆ ಸ್ವಭಾವವೇ ಅವರನ್ನು ರಾಜಕಾರಣಿಯನ್ನಾಗಿ ಮಾಡಿತು’ ಎಂದರು.

‘ಅವರ ಸ್ವಭಾವದ ಕಾರಣಕ್ಕೇ ನಫೀಸ್‌ ಅವರಿಗೆ ಸಚಿವರಾಗಿ
ಕೆಲಸ ಮಾಡಲು ಅವಕಾಶ ನೀಡಲಾಯಿತು. ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಸಮರ್ಪಕ ಚಿಕಿತ್ಸೆ ಕೊಡಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರು’ ಎಂದು ಶ್ಲಾಘಿಸಿದರು.

‘ಸದಾ ಒಂದಿಲ್ಲೊಂದು ವಿವಾದ ಅವರನ್ನು ಸುತ್ತಿಕೊಳ್ಳುತ್ತಿತ್ತು. ಅದ್ಯಾವುದನ್ನೂ ಲೆಕ್ಕಿಸದೆ ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಿದ್ದರು. ಹೋಟೆಲ್‌ ಒಂದರಲ್ಲಿ ಅವರು ನೃತ್ಯ ಮಾಡಿದ್ದು ವಿವಾದವಾಗಿ ಮಾರ್ಪಟ್ಟಿತ್ತು. ನೃತ್ಯ ಮಾಡುವುದು ತಪ್ಪು ಎಂದು ಹೇಳಲಾಗುವುದಿಲ್ಲ. ಆದರೂ ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನದಿಂದ ಅವರನ್ನು ಕೈಬಿಡಬೇಕಾಯಿತು. ಬಳಿಕ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ನೀಡಲಾಯಿತು. ಅದನ್ನೂ ಅವರ ಯಶಸ್ವಿಯಾಗಿ ನಿರ್ವಹಿಸಿದರು. ಅಬ್ದುಲ್ ಕಲಾಂ ಅವರನ್ನು ವಿಧಾನಸೌಧಕ್ಕೆ ಕರೆತಂದು, ನಾನು ಅಚ್ಚರಿಪಡುವಂತೆ ಮಾಡಿದ್ದರು’ ಎಂದು ಕೃಷ್ಣ ನೆನಪಿಸಿಕೊಂಡರು.

ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ಮಾತನಾಡಿ, ‘ನಫೀಸ್ ಫಜಲ್ ಅವರು ಅತ್ಯಂತ ಧೈರ್ಯಶಾಲಿ ಮಹಿಳೆ. ಸಂಪ್ರದಾಯದ ಸಂಕೋಲೆಗಳನ್ನು ದಾಟಿ ರಾಜಕಾರಣಕ್ಕೆ ಬಂದವರು. ಅಂದುಕೊಂಡಿದ್ದನ್ನು ಮಾಡಿಯೇ ತೀರಲು ಹಿಂದೇಟು ಹಾಕಿದವರಲ್ಲ. ಕೊಂಕು ಮಾತುಗಳಿಗೆ ಕುಗ್ಗದೆ ನೇರವಾಗಿ ರಾಜಕಾರಣ ಮಾಡಿದರು. ಅವರ ಕುರಿತ ಪುಸ್ತಕ ಬಿಡುಗಡೆಯಾಗಿರುವುದು ಸಂತಸದ ವಿಷಯ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT