ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಬಾವಿ: ಬಿಡಿಎ ಜಾಗದ ಒತ್ತುವರಿ ತೆರವು

ಒತ್ತುವರಿ ತೆರವುಗೊಂಡ 2 ಎಕರೆ 2 ಗುಂಟೆ ಜಾಗದಲ್ಲಿ ನಿರ್ಮಾಣವಾಗಲಿದೆ ಉದ್ಯಾನ
Last Updated 3 ಮಾರ್ಚ್ 2021, 16:02 IST
ಅಕ್ಷರ ಗಾತ್ರ

ಬೆಂಗಳೂರು: ನಾಗರಭಾವಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಮೂರು ಕಾಂಕ್ರೀಟ್‌ ಕಟ್ಟಡಗಳು, ತಾತ್ಕಾಲಿಕ ಶೆಡ್‌ಗಳು, ಗ್ಯಾರೇಜ್‌ಗಳು ಮತ್ತು ಆವರಣ ಗೋಡೆಗಳನ್ನು ಪ್ರಾಧಿಕಾರದ ಅಧಿಕಾರಿಗಳು ಹಾಗೂ ನಗರ ಜಿಲ್ಲಾಡಳಿತದ ಅಧಿಕಾರಿಗಳು ಪೊಲೀಸ್‌ ಭದ್ರತೆಯೊಂದಿಗೆ ಬುಧವಾರ ತೆರವುಗೊಳಿಸಿದರು.

ನಾಗರಬಾವಿಯಲ್ಲಿ ವರ್ತುಲ ರಸ್ತೆಯ ಸಮೀಪದಲ್ಲಿ ಸರ್ವೆ ನಂಬರ್ 30ರಲ್ಲಿ ಪ್ರಾಧಿಕಾರವು 3 ಎಕರೆ 5 ಗುಂಟೆ ಜಮೀನನ್ನು ಹೊಂದಿದೆ. ಅದರಲ್ಲಿ 1 ಎಕರೆ 3 ಗುಂಟೆ ಜಾಗವನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗಿದೆ. ಇನ್ನುಳಿದ 2 ಎಕರೆ 2 ಗುಂಟೆ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇತ್ತು. ಸುಪ್ರೀಂ ಕೋರ್ಟ್‌ ಬಿಡಿಎ ಪರವಾಗಿ ಇತ್ತೀಚೆಗೆ ತೀರ್ಪು ನೀಡಿತ್ತು. ತೆರವುಗೊಂಡ ಜಾಗದ ಮೌಲ್ಯ ₹ 80 ಕೋಟಿ ಎಂದು ಅಂದಾಜಿಸಲಾಗಿದೆ.

‘ನಾಗರಬಾವಿಯಲ್ಲಿ ಒತ್ತುವರಿಯಾದ ಜಾಗವನ್ನು ತೆರವುಗೊಳಿಸಿ ಅಲ್ಲಿ ಉದ್ಯಾನ ನಿರ್ಮಾಣ ಮಾಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ತೆರವಿಗೆ ಮುನ್ನ ವಿಚಾರಣೆ ನಡೆಸಿ ಒತ್ತುವರಿದಾರರ ಮನವಿಯನ್ನೂ ಆಲಿಸುವಂತೆಯೂ ಹೇಳಿತ್ತು. ಆ ಪ್ರಕಾರ ವಿಚಾರಣೆ ನಡೆಸಿ, ಒತ್ತುವರಿದಾರರ ಕೋರಿಕೆಯನ್ನು ತಿರಸ್ಕರಿಸಿದ್ದೇವೆ’ ಎಂದು ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒತ್ತುವರಿ ತೆರವುಗೊಳಿಸುವ ಮುನ್ನವೇ ಆ ಜಾಗದಲ್ಲಿ ಉದ್ಯಾನ ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದ್ದೆವು. ಅದಕ್ಕೆ ಟೆಂಡರ್‌ ಕೂಡಾ ಕರೆದಿದ್ದೆವು. ಅಲ್ಲಿ ಉದ್ಯಾನ ನಿರ್ಮಿಸುವ ಕಾರ್ಯ ಇನ್ನು ಒಂದು ತಿಂಗಳಲ್ಲಿ ಆರಂಭವಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ‘ಇದು ಕೇವಲ ಆರಂಭವಷ್ಟೇ. ಜಯನಗರ, ಕೋರಮಂಗಲ, ಪೀಣ್ಯ, ವಿಜಯನಗರ, ಚಂದ್ರಾ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬಿಡಿಎಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳು ಒತ್ತುವರಿಯಾಗಿವೆ. ಇವುಗಳನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಒತ್ತುವರಿ ಜಾಗಗಳನ್ನು ಗುರುತಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಒತ್ತುವರಿಯಾದ ಜಾಗಗಳೆಲ್ಲವನ್ನೂ ಕಾನೂನು ಪ್ರಕಾರ ವಶಕ್ಕೆ ಪಡೆಯಲಿದ್ದೇವೆ’ ಎಂದು ತಿಳಿಸಿದರು.

***

ಬಿಡಿಎ ಅಭಿವೃದ್ಧಿಪಡಿಸಿದ ವಿವಿಧ ಬಡಾವಣೆಗಳಲ್ಲಿ ಅನೇಕ ಕಡೆ ಜಾಗ ಒತ್ತುವರಿಯಾಗಿರುವುದನ್ನು ಗುರುತಿಸಿದ್ದೇವೆ. ಹಂತ ಹಂತವಾಗಿ ಅವುಗಳನ್ನು ತೆರವುಗೊಳಿಸುತ್ತೇವೆ

-ಎಚ್‌.ಆರ್‌.ಮಹದೇವ್‌, ಬಿಡಿಎ ಆಯುಕ್ತ

***

ಬಿಡಿಎ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರಿಯೇ. ಪ್ರಾಧಿಕಾರದ ಜಾಗಗಳನ್ನು ವಶಪಡಿಸಿಕೊಂಡು ಜನಪರ ಯೋಜನೆಗಳಿಗಾಗಿ ಬಳಸುತ್ತೇವೆ

-ಎಸ್‌.ಆರ್‌.ವಿಶ್ವನಾಥ್, ಬಿಡಿಎ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT