ಗುರುವಾರ , ಜೂನ್ 24, 2021
25 °C

ಕಾಂಗ್ರೆಸ್‌ಗೆ ವೋಟ್‌ ಬ್ಯಾಂಕ್‌ ಮುಖ್ಯ: ನಳಿನ್ ಕುಮಾರ್‌ ಕಟೀಲ್‌ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರ ವೋಟ್‌ ಬ್ಯಾಂಕ್‌ ಭದ್ರಪಡಿಸಿಕೊಳ್ಳಲು ತಮ್ಮದೇ ಪಕ್ಷದ ದಲಿತ ಶಾಸಕರ ಪರ ನಿಲ್ಲದೇ, ಗಲಭೆ ನಡೆಸಿದ ಗೂಂಡಾಗಳ ಪರ ನಿಂತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹರಿಹಾಯ್ದಿದ್ದಾರೆ.

ಗಲಭೆ ಪೀಡಿತ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರದೇಶ ಮತ್ತು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಸೋಮವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಕಾಂಗ್ರೆಸ್‌ನವರಿಗೆ ಸಾಮಾಜಿಕ ನ್ಯಾಯಕ್ಕಿಂತಲೂ ಅಲ್ಪಸಂಖ್ಯಾತರ ಓಲೈಕೆಯೇ ಮುಖ್ಯವಾಗಿದೆ ಎಂದು ಹೇಳಿದರು.

ವ್ಯವಸ್ಥಿತವಾಗಿ ಗಲಭೆ ನಡೆಸಲಾಗಿದೆ. ಸಾರ್ವಜನಿಕ ಆಸ್ತಿ–ಪಾಸ್ತಿ ನಾಶ ಮಾಡಿದ್ದು, ಇದರ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆ ಇರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಅವರು ತಿಳಿಸಿದರು.

‘ಈ ಹಿಂದೆ ಪಾದರಾಯನಪುರದಲ್ಲಿ ಕೊರೊನಾ ಸೇನಾನಿಗಳ ಮೇಲೆ ಹಲ್ಲೆ ನಡೆಸಿದವರು ಜೈಲಿನಿಂದ ಬಿಡುಗಡೆ ಆಗಿ ಬಂದಾಗ, ಹಾರ ಹಾಕಿ ಅವರನ್ನು ಸ್ವಾಗತಿಸಲಾಯಿತು. ಇದರಿಂದ ನೀವು ಹಲ್ಲೆ ಮಾಡಿ, ನಾವು ನಿಮ್ಮ ಜತೆಗೆ ಇದ್ದೇವೆ ಎಂದು ಪ್ರೇರಣೆ ನೀಡಿದಂತಾಗಿದೆ’ ಎಂದರು.

ಒಳಜಗಳವೇ ಕಾರಣ: ‘ಕಾಂಗ್ರೆಸ್‌ನ ಒಳಜಗಳ ಬೀದಿಗೆ ಬಂದು ಗಲಭೆಗೆ ಕಾರಣವಾಗಿದೆ. ಇದರಿಂದ ಬೆಂಗಳೂರಿಗೆ ಕಳಂಕ ತಟ್ಟಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ದೂರಿದ್ದಾರೆ.

‘ಎಸ್‌ಡಿಪಿಐ, ಪಿಎಫ್‌ಐ ಸಂಘಟನೆ ಮೇಲೆ ನಿಷೇಧ ಹೇರುವಂತೆ ನಾವು ಮೊದಲಿನಿಂದಲೇ ಒತ್ತಾಯಿಸುತ್ತಾ ಬಂದಿದ್ದೇವೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಈ ಮಾತು ಏಕೆ ಹೇಳುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ಸಿಎಂ ಭೇಟಿ ಮಾಡಿದ ಅಖಂಡ
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ ಮಾಡಿ, ‘ನನಗೂ ನನ್ನ ಕುಟುಂಬಕ್ಕೂ ರಕ್ಷಣೆ ನೀಡಬೇಕು. ಸರ್ಕಾರ ನನ್ನ ನೆರವಿಗೆ ಬಂದಿದೆ. ಅದೇ ರೀತಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನನ್ನ ನೆರವಿಗೆ ನಿಲ್ಲಬೇಕು’ ಎಂದು ಹೇಳಿದ್ದಾರೆ.

ತಮ್ಮ ಮನೆಯ ಸುತ್ತಮುತ್ತ ಹಲವು ಬಡಜನರ ಆಸ್ತಿಪಾಸ್ತಿಯನ್ನು ಗಲಭೆಕೋರರು ನಾಶ ಮಾಡಿದ್ದಾರೆ. ಸ್ವತ್ತು ಕಳೆದುಕೊಂಡಿರುವ ಬಡವರಿಗೆ ಪರಿಹಾರ ನೀಡುವಂತೆಯೂ ಮುಖ್ಯಮಂತ್ರಿಯವರಿಗೆ ಮನವಿ ಮಾಡಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು