ಭಾನುವಾರ, ಫೆಬ್ರವರಿ 28, 2021
31 °C
ಕಲಾಗ್ರಾಮ: ಸಾಹಿತಿಗಳು ಸೇರಿ ನೂರಾರು ಮಂದಿಯಿಂದ ಶ್ರಮದಾನ

ಸಾಹಿತಿಗಳ ಕಟ್ಟೆಗೆ ನಾಮಫಲಕ ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯು.ಆರ್. ಅನಂತಮೂರ್ತಿ ಮತ್ತು ಜಿ.ಎಸ್. ಶಿವರುದ್ರಪ್ಪ ಅವರ ಅಂತ್ಯಸಂಸ್ಕಾರ ನಡೆದಿದ್ದ ಸ್ಥಳದಲ್ಲಿನ ಕಟ್ಟೆಗೆ ಸಾಹಿತಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ನಾಮಫಲಕ ಹಾಗೂ ಭಾವಚಿತ್ರವನ್ನು ಭಾನುವಾರ ಅಳವಡಿಸಿದರು.

ಇಬ್ಬರು ಸಾಹಿತಿಗಳ ಅಂತ್ಯಕ್ರಿಯೆಯನ್ನು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಅಂದಿನ ಸರ್ಕಾರ ನಡೆಸಿ, ಗುರುತಿಗೆ ಕಟ್ಟೆಗಳನ್ನು ನಿರ್ಮಿಸಿತ್ತು. ಆ ಸ್ಥಳವು ಈಗ ರಾಷ್ಟ್ರೀಯ ನಾಟಕ ಶಾಲೆಗೆ (ಎನ್‌ಎಸ್‌ಡಿ) ಸೇರಿದೆ. ಕಳೆದ ಬುಧವಾರ ಸಾಹಿತಿಗಳು ಸೇರಿದಂತೆ ನೂರಾರು ಮಂದಿ ಸ್ವಯಂಪ್ರೇರಿತರಾಗಿ ಅಲ್ಲಿಗೆ ತೆರಳಿ, ಶ್ರಮದಾನ ಮಾಡಿದ್ದರು. ಅನಂತಮೂರ್ತಿ ಮತ್ತು ಶಿವರುದ್ರಪ್ಪ ಅವರ ಕಟ್ಟೆಯ ಮೇಲೆ ಹಾಗೂ ಸುತ್ತಮುತ್ತಲಿನ ಸ್ಥಳದಲ್ಲಿದ್ದ ಕಸವನ್ನು ತೆರವುಗೊಳಿಸಿದ್ದರು.

ಸಮಾನ ಮನಸ್ಕರು ಡಾ.ಜಿ.ಎಸ್. ಶಿವರುದ್ರಪ್ಪ ಮತ್ತು ಡಾ.ಯು.ಆರ್. ಅನಂತಮೂರ್ತಿಯವರ ಪುಣ್ಯಸ್ಥಳ ಗೌರವ ಕ್ರಿಯಾ ಸಮಿತಿ ರಚಿಸಿಕೊಂಡಿದ್ದು, ವಡ್ಡಗೆರೆ ನಾಗರಾಜಯ್ಯ, ಪುಸ್ತಕಮನೆ ಹರಿಹರಪ್ರಿಯ, ಯೋಗೇಶ್ ಮಾಸ್ಟರ್, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಕೆ. ಷರೀಫಾ, ಕೆ.ಎನ್. ಯೋಗೇಶ್, ಕೆ.ಎಚ್. ಕುಮಾರ್ ಸೇರಿದಂತೆ ಹಲವರು ನಾಮಫಲಕ ಮತ್ತು ಭಾವಚಿತ್ರ ಅಳವಡಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಅಲ್ಲಿಯೇ ಕವಿಗೋಷ್ಠಿ ನಡೆಸಿದರು. 

‘ಇಬ್ಬರು ಸಾಹಿತಿಗಳ ಅಂತ್ಯಸಂಸ್ಕಾರದ ನಡೆದ ಸ್ಥಳದಲ್ಲಿ ಈ ಹಿಂದೆ ನಿರ್ಮಿಸಲಾಗಿದ್ದ ಕಟ್ಟೆಗೆ ನಾಮಫಲಕ ಮತ್ತು ಭಾವಚಿತ್ರ ಅಳವಡಿಸಿದ್ದೇವೆ. ಅವರ ಅಂತ್ಯಕ್ರಿಯೆಗೆ ಅಂದಿನ ಸರ್ಕಾರವು ಕಲಾಗ್ರಾಮ ಗುರುತಿಸಿ, ಕಟ್ಟೆಗಳನ್ನು ನಿರ್ಮಿಸಿತು. ಈ ಕಟ್ಟೆಗಳು ಸಾಂಸ್ಕೃತಿಕ ಗುರುತುಗಳಾಗಿದ್ದು, ಅದನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶಿವರುದ್ರಪ್ಪ ಅವರ ಜನ್ಮದಿನವಾದ ಫೆ.7ರಂದು ಕಟ್ಟೆಯ ಬಳಿ ವಿಶೇಷ ಗಾಯನ ಮತ್ತು ಕವಿಗೋಷ್ಠಿ ನಡೆಸಲು ನಿರ್ಧರಿಸಿದ್ದೇವೆ’ ಎಂದು ಸಮಿತಿಯ ವಡ್ಡಗೆರೆ ನಾಗರಾಜಯ್ಯ ತಿಳಿಸಿದರು. 

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಟ್ಟೆಗಳಿರುವ ಜಾಗವನ್ನು ರಾಷ್ಟ್ರೀಯ ನಾಟಕ ಶಾಲೆಗೆ (ಎನ್‌ಎಸ್‌ಡಿ) ನೀಡು
ವಾಗ ವಿಚಾರ ಮಾಡಬೇಕಿತ್ತು. ಸಾಹಿತಿ
ಗಳ ಕುರುಹು ಅಳಿಸಿಹಾಕಲು ಬರುವು
ದಿಲ್ಲ. ಕಟ್ಟೆಗಳಿರುವ ಜಾಗದಲ್ಲಿ ಉದ್ಯಾನ, ಗ್ರಂಥಾಲಯ ಅಥವಾ ಸಭಾಂಗಣ ನಿರ್ಮಿಸುವ ಮೂಲಕ ಶಾಶ್ವತವಾಗಿ ಅವರ ಹೆಸರು ಉಳಿಯುವಂತೆ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.