ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಫಲಕ: ಪರಿಣತರ ಕೊರತೆ

ಸಮಯಕ್ಕೆ ಸರಿಯಾಗಿ ಪೂರೈಕೆ ಆಗದ ಫಲಕಗಳು* ವ್ಯಾಪಾರಿಗಳಿಗೆ ಪೀಕಲಾಟ
Published 2 ಮಾರ್ಚ್ 2024, 23:30 IST
Last Updated 2 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ನಾಮಫಲಕ ತಯಾರಕರು ತಮಗಿರುವ ಬೇಡಿಕೆಯನ್ನು ಪೂರೈಸಲು ಹಗಲು–ರಾತ್ರಿ ಶ್ರಮಪಡುತ್ತಿದ್ದಾರೆ.

ವಾಣಿಜ್ಯ ಮಳಿಗೆಗಳು ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಬಳಸಬೇಕು ಎಂದು ಬಿಬಿಎಂಪಿ ನೋಟಿಸ್‌ ನೀಡಿದ್ದು, ಸಮಯವನ್ನೂ ನಿಗದಿ ಮಾಡಿದೆ. ವಾಣಿಜ್ಯ ಸಂಸ್ಥೆಗಳು ಒಂದೇ ಬಾರಿ ನಾಮಫಲಕ ತಯಾರಕರಿಗೆ ತಮ್ಮ ಬೇಡಿಕೆಯನ್ನು ಇರಿಸಿರುವುದರಿಂದ, ಸಮಯಕ್ಕೆ ಸರಿಯಾಗಿ ಅವುಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

‘ನಾವು ಹೊಸ ಆರ್ಡರ್‌ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದೇವೆ. 1975ರಿಂದ ಈ ವೃತ್ತಿಯಲ್ಲಿದ್ದು, ನಾಮಫಲಕಗಳನ್ನು ಪೂರೈಸುತ್ತಿದ್ದೇವೆ. ನಗರದಲ್ಲಿ ಸುಮಾರು 45 ಸಾವಿರ ಗ್ರಾಹಕರಿದ್ದಾರೆ. ಅವರ ಬೇಡಿಕೆಯನ್ನು ಸಮಯಕ್ಕೆ ಸರಿಯಾಗಿ ಪೂರೈಸುವುದು ಕಷ್ಟವಾಗುತ್ತಿದೆ. ಹೀಗಾಗಿ ಹೊಸದಾಗಿ ಆರ್ಡರ್‌ ಪಡೆಯುತ್ತಿಲ್ಲ’ ಎಂದು ಮೋಹನ್‌ ಆರ್ಟ್ಸ್‌ನ ಮಾಲೀಕ ಮೋಹನ್‌ ಕುಮಾರ್‌ ತಿಳಿಸಿದರು.

ನಾಮಫಲಕ ವಿನ್ಯಾಸಕ್ಕೆ ಹೆಚ್ಚಿನ ಪರಿಣತಿ ಅಗತ್ಯವಿದ್ದು, ಇಂತಹ ಕೆಲವೇ ಮಂದಿ ಪರಿಣತರು ಇದ್ದಾರೆ. ಹೀಗಾಗಿ, ನಾಮಫಲಕಗಳ ತಯಾರಿಕೆಯನ್ನು ಚಕಚಕನೆ ಮಾಡಿಕೊಡುವುದು ಸಾಧ್ಯವಾಗುತ್ತಿಲ್ಲ.

‘ನಾವು ಹೆಚ್ಚಿನ ವ್ಯಕ್ತಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಹುದು. ಆದರೆ, ಈ ಬೇಡಿಕೆ ಮುಗಿದ ಮೇಲೆ ಅವರಿಗೆ ವರ್ಷಪೂರ್ತಿ ಕೆಲಸ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇರುವಷ್ಟೇ ಕೆಲಸಗಾರರನ್ನಿಟ್ಟುಕೊಂಡು ನಾಮಫಲಕ ಸಿದ್ದಪಡಿಸುತ್ತಿದ್ದೇವೆ ’ ಎಂದು ಅವೆನ್ಯೂ ರಸ್ತೆಯಲ್ಲಿರುವ ಸೂರಜ್‌ ಆರ್ಟ್ಸ್‌ನ ನಿಯಾಜ್‌ ಹೇಳಿದರು.

ಪರಿಣತ ಕಲಾವಿದರ ಕೊರತೆ ಇರುವುದರಿಂದ ವ್ಯಾಪಾರಿಗಳು ತಮ್ಮ ನಾಮಫಲಕಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗಿಲ್ಲ. ಕನ್ನಡೇತರ ವ್ಯಾಪಾರಿಗಳಲ್ಲೇ ನಾಮಫಲಕವನ್ನು ಬದಲಾಯಿಸಿಕೊಳ್ಳುವ ಆಸಕ್ತಿ, ಆತುರ ಹೆಚ್ಚಾಗಿದೆ.

‘60:40 ಅನುಪಾತದಲ್ಲಿ ಕನ್ನಡದ ಅಕ್ಷರಗಳು ದೊಡ್ಡದಾಗಿ ಇರಬೇಕು ಎಂಬುದರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಎರಡೂ ಭಾಷೆಗಳಲ್ಲಿ ಸಬ್‌–ಹೆಡ್‌ಲೈನ್‌ ಆಗಿ ಬಳಸಬಹುದಾದ ಅಕ್ಷರಗಳೂ 60:40 ಪ್ರಮಾಣದಲ್ಲಿ ಇರಬೇಕೇ ಎಂಬುದರ ಬಗ್ಗೆ ಅರಿವಿಲ್ಲ’ ಎಂದು ಕೆ.ಆರ್. ಮಾರುಕಟ್ಟೆಯಲ್ಲಿರುವ ಪುಸ್ತಕ ಮಳಿಗೆ ವ್ಯಾಪಾರಿಯೊಬ್ಬರು ಹೇಳಿದರು.

ಅವೆನ್ಯೂ ರಸ್ತೆಯಲ್ಲಿರುವ ವ್ಯಾಪಾರಿಯೊಬ್ಬರ ಪ್ರಕಾರ, ‘ಅಧಿಕಾರಿಗಳು ಪ್ರಾರಂಭದಲ್ಲಿ ಕನ್ನಡವನ್ನು ನಾಮಫಲಕದ ಮೇಲ್ಭಾಗದಲ್ಲಿ ಬರೆಸುವಂತೆ ಹೇಳಿದರು.  ಇದೀಗ ಅವರು 60:40ರ ನಿಯಮವನ್ನು ಹೇಳುತ್ತಿದ್ದಾರೆ. ಇದರಿಂದ ನಮಗೆ ಅನನುಕೂಲವಾಗುತ್ತಿದೆ’.

ನಗರದಲ್ಲಿ 45 ಸಾವಿರ ಗ್ರಾಹಕರು ಆರ್ಡರ್ ತೆಗೆದುಕೊಳ್ಳುವುದೂ ಕಷ್ಟ ಅಕ್ಷರಗಳ ಗಾತ್ರ: ಅರಿವಿನ ಕೊರತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT