ಶನಿವಾರ, ಏಪ್ರಿಲ್ 1, 2023
23 °C

ಬೆಂಗಳೂರಿನಲ್ಲಿ ಏಕಕಾಲಕ್ಕೆ 108 ಕಡೆ ಕ್ಲಿನಿಕ್‌ಗಳು ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಡ, ಮಧ್ಯಮ ಮತ್ತು ಕೊಳೆಗೇರಿ ವಾಸಿಗಳಿಗೆ ಒಂದೇ ಸೂರಿನಡಿ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನು ನೀಡುವ ‘ನಮ್ಮ ಕ್ಲಿನಿಕ್‌’ ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಉದ್ಘಾಟಿಸಿದರು.

ಮಹಾಲಕ್ಷ್ಮೀ ಲೇಔಟ್‌ನ ರಾಣಿ ಅಬ್ಬಕ್ಕದೇವಿ ಆಟದ ಮೈದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯ ಒಟ್ಟು 108 ‘ನಮ್ಮ ಕ್ಲಿನಿಕ್‌’ಗಳಿಗೆ ಏಕಕಾಲಕ್ಕೆ ಚಾಲನೆ ನೀಡಿದ ಅವರು, ‘ನಮ್ಮ ಕ್ಲಿನಿಕ್‌ ಒಂದು ಕ್ರಾಂತಿಕಾರಿ ಹೆಜ್ಜೆ’ ಎಂದು
ವ್ಯಾಖ್ಯಾನಿಸಿದರು.

‘ನೆಗಡಿ, ಕೆಮ್ಮು, ರಕ್ತದೊತ್ತಡ, ಮಧುಮೇಹ ಸೇರಿ ಹಲವು ರೀತಿಯ ಕಾಯಿಲೆಗಳ ತಪಾಸಣೆ ಮಾಡುವುದರ ಜತೆಗೆ ಔಷಧಿಗಳನ್ನೂ ವಿತರಿಸಲಾಗುವುದು. ಇಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಟೆಲಿ ಮೆಡಿಸಿನ್‌ ಸೌಲಭ್ಯವನ್ನು ಒದಗಿಸಲಾಗುವುದು. ಪರಿಣಿತರ ಜತೆಗೆ ಟೆಲಿ ಸಂವಾದ ನಡೆಸಿ ಉಪಚಾರ ನೀಡಲಾಗುವುದು. ಇದರಿಂದ ಸಾಮಾನ್ಯ ಜನರ ಆರೋಗ್ಯ ಸೇವೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಕಳೆದ ಬಜೆಟ್‌ನಲ್ಲಿ
ನೀಡಿದ ಭರವಸೆ ಈಡೇರಿದೆ’ ಎಂದು ಹೇಳಿದರು.

‘ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮದು ಸೂಕ್ಷ್ಮತೆ ಹೊಂದಿರುವ ಸರ್ಕಾರ. ಡಯಾಲಿಸಿಸ್‌ ಪ್ರಮಾಣ ದಿನವೊಂದಕ್ಕೆ 30 ಸಾವಿರ ಇದ್ದುದ್ದನ್ನು 60 ಸಾವಿರಕ್ಕೆ ಏರಿಸಲಾಗಿದೆ. ಕೀಮೋಥೆರಪಿ ಚಿಕಿತ್ಸೆಗಳನ್ನು 30 ಸಾವಿರದಿಂದ 60 ಸಾವಿರಕ್ಕೆ ಏರಿಸಿ 12 ಹೊಸ ಕೇಂದ್ರಗಳನ್ನು ತೆರೆಯಲಾಗಿದೆ. ಶ್ರವಣ ದೋಷ ಇರುವವರಿಗೆ
₹ 500 ಕೋಟಿ ವೆಚ್ಚದಲ್ಲಿ ಕಾಕ್ಲಿಯರ್‌ ಇಂಪ್ಲಾಂಟ್‌ ಅಳವಡಿಸಲಾಗುತ್ತಿದೆ’ ಎಂದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ‘ನಮ್ಮ ಕ್ಲಿನಿಕ್‌’ಗಳು ಕಾರ್ಯಾರಂಭ ಮಾಡಲಿದ್ದು, ಸದ್ಯ 108 ಕ್ಲಿನಿಕ್‌ಗಳು ಉದ್ಘಾಟನೆಯಾಗಿದೆ. ಇನ್ನು ಎರಡು ವಾರಗಳಲ್ಲಿ ಬಾಕಿವುಳಿದ ‘ನಮ್ಮ ಕ್ಲಿನಿಕ್‌’ಗಳಿಗೆ ಚಾಲನೆ ನೀಡಲಾಗುವುದು ಎಂದು ಆರೋಗ್ಯ  ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು. 

‘ಈ ಹಿಂದೆ ನಗರ ಪ್ರದೇಶದ 50 ಸಾವಿರದಿಂದ 60 ಸಾವಿರ ಜನರಿಗೆ ಒಂದು ಚಿಕಿತ್ಸಾ ಕೇಂದ್ರವಿತ್ತು. ನಾವು 15 ಸಾವಿರದಿಂದ 20 ಸಾವಿರ ಜನಸಂಖ್ಯೆಗೆ ಒಂದು ‘ನಮ್ಮ ಕ್ಲಿನಿಕ್‌’ ಆರಂಭಿಸುತ್ತಿದ್ದೇವೆ. ಕೆಲವೇ ದಿನಗಳಲ್ಲಿ ಮಹಿಳೆಯರಿಗಾಗಿ ‘ಆಯುಷ್ಮತಿ ಕ್ಲಿನಿಕ್‌’ ಕೂಡ ಕಾರ್ಯಾರಂಭ ಆಗಲಿದೆ’ ಎಂದರು.

ಅಬಕಾರಿ ಸಚಿವ ಕೆ. ಗೋಪಾಲಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು