ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ ಎಂ.ಡಿ ಹೆಸರಿನಲ್ಲಿ ₹ 3 ಲಕ್ಷ ವಂಚನೆ!

Last Updated 7 ಮಾರ್ಚ್ 2022, 19:51 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಜುಂ ಪರ್ವೇಜ್ ಹೆಸರಿನಲ್ಲಿ ಅಮೆಜಾನ್ ವೋಚರ್ ಖರೀದಿಸುವ ಸೋಗಿನಲ್ಲಿ ₹ 3 ಲಕ್ಷ ವಂಚಿಸಲಾಗಿದ್ದು, ಈ ಬಗ್ಗೆ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಬಿಎಂಆರ್‌ಸಿಎಲ್ ಪ್ರಧಾನ ವ್ಯವಸ್ಥಾಪಕ‌ ಎನ್.ಆರ್. ವ್ಯಾಸರಾಜ್ ಅವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅದರನ್ವಯ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಜುಂ ಪರ್ವೇಜ್ ಹೆಸರಿನಲ್ಲಿ ವ್ಯಾಸರಾಜ್ ಅವರಿಗೆ ಮಾ. 3ರಂದು ಇ–ಮೇಲ್ ಬಂದಿತ್ತು. ‘ಹೆಸರು ಹಾಗೂ ವಾಟ್ಸ್‌ಆ್ಯಪ್ ನಂಬರ್ ಕಳುಹಿಸಿ’ ಎಂದು ಬರೆಯಲಾಗಿತ್ತು. ಅದನ್ನು ನಂಬಿದ್ದ ವ್ಯಾಸರಾಜ್, ವಾಟ್ಸ್‌ಆ್ಯಪ್ ನಂಬರ್ ಕೊಟ್ಟಿದ್ದರು.'

'ವಾಟ್ಸ್‌ಆ್ಯಪ್‌ ನಂಬರ್‌ಗೂ ಅಜುಂ ಪರ್ವೇಜ್ ಹೆಸರಿನಲ್ಲಿ ಸಂದೇಶ ಬಂದಿತ್ತು. ‘ಅಮೆಜಾನ್ ಉಡುಗೊರೆ ಕೂಪನ್ (ವೋಚರ್) ಖರೀದಿಸಿ’ ಎಂಬುದಾಗಿ ಸಂದೇಶದಲ್ಲಿ ಬರೆದು, ಲಿಂಕ್‌ ಉಲ್ಲೇಖಿಸಲಾಗಿತ್ತು. ಅದು ನಿಜವೆಂದು ತಿಳಿದಿದ್ದ ವ್ಯಾಸರಾಜ್, ಲಿಂಕ್ ತೆರೆದು ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಹಂತ ಹಂತವಾಗಿ ₹ 3 ಲಕ್ಷ ಪಾವತಿ ಮಾಡಿದ್ದರು. ಹಣ ಪಡೆದ ಆರೋಪಿಗಳು, ನಕಲಿ ವೋಚರ್ ಕಳುಹಿಸಿ ವಂಚಿಸಿದ್ದಾರೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಅಮೆಜಾನ್ ವೋಚರ್‌ ಬಗ್ಗೆ ಅಜುಂ ಪರ್ವೇಜ್ ಅವರನ್ನು ವ್ಯಾಸರಾಜ್ ಕೇಳಿದ್ದರು. ಆದರೆ, ತಾವು ಯಾವುದೇ ಸಂದೇಶ ಕಳುಹಿಸಿಲ್ಲವೆಂದು ಪರ್ವೇಜ್ ಹೇಳಿದ್ದರು. ನಂತರ ವ್ಯಾಸರಾಜ್ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT