ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: ಆಮೆಗತಿಯಲ್ಲಿ ಕಾಮಗಾರಿ

2ನೇ ಹಂತ: ಹಸ್ತಾಂತರವಾಗದ ಭೂಮಿ l ಕಾಮರಾಜ ರಸ್ತೆ ಮೆಟ್ರೊ ನಿಲ್ದಾಣ ಕಾಮಗಾರಿ ವಿಳಂಬ
Last Updated 10 ಫೆಬ್ರುವರಿ 2020, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕಾಮಗಾರಿಗಾಗಿ ಮರಗಳ ತೆರವು ಪ್ರಕ್ರಿಯೆ ವಿಳಂಬವಾಗಿರುವುದರಿಂದ, ಕಾಮರಾಜ ರಸ್ತೆ ಮೆಟ್ರೊ ನಿಲ್ದಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಈ ಕುರಿತ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಗುತ್ತಿಗೆ ಪಡೆದ ಕಂಪನಿಗೆ ಇನ್ನೂ ಭೂಮಿ ಹಸ್ತಾಂತರ ಮಾಡಿಲ್ಲ.

ಎರಡನೇ ಹಂತದಲ್ಲಿ ಒಟ್ಟು 265 ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಹೇಳಿದೆ. ಈ ಪೈಕಿ, ಉದ್ದೇಶಿತ ಕಾಮರಾಜ್‌ ಮೆಟ್ರೊ ನಿಲ್ದಾಣ ಜಾಗದ ಸುತ್ತ–ಮುತ್ತ 73 ಮರಗಳನ್ನು ಕಡಿಯಬೇಕಾಗಿದೆ ಮತ್ತು 9 ಮರಗಳನ್ನು ಸ್ಥಳಾಂತರಿಸಬೇಕಾಗಿದೆ.

ಕಾಮಗಾರಿಗಾಗಿ ಮರಗಳನ್ನು ಕಡಿಯುವುದು ತೀರಾ ಅಗತ್ಯವಿದೆಯೇ, ಸ್ಥಳೀಯವಾಗಿ ಆಕ್ಷೇಪ ಇದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಹೈಕೋರ್ಟ್‌ ತಜ್ಞರ ಸಮಿತಿ ರಚಿಸಿದೆ. ಉಪಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ. ಚೋಳರಾಜಪ್ಪ ನೇತೃತ್ವ ವಹಿಸಿದ್ದು, ಅಂತಿಮವಾಗಿ ಎಷ್ಟು ಮರಗಳನ್ನು ತೆರವುಗೊಳಿಸಬಹುದು ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.

ಹಸ್ತಾಂತರವಾಗದ ಭೂಮಿ: ಕಾಮರಾಜ ರಸ್ತೆ ನೆಲದಡಿ ನಿಲ್ದಾಣವಲ್ಲದೆ, ಗೊಟ್ಟಿಗೆರೆ-ನಾಗವಾರ ಸುರಂಗ ಮಾರ್ಗದ ಪೈಕಿ ವೆಲ್ಲಾರ ಜಂಕ್ಷನ್- ಶಿವಾಜಿನಗರ ಮತ್ತು ಶಿವಾಜಿನಗರ-ಪಾಟರಿ ಟೌನ್ ನಡುವೆ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಮಾರ್ಚ್‌ನಲ್ಲೇ ಎಲ್ ಆ್ಯಂಡ್‌ ಟಿ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ಈವರೆಗೆ ಸಂಪೂರ್ಣವಾಗಿ ಈ ಭೂಮಿಯನ್ನು ನಿಗಮವು ಕಂಪನಿಗೆ ಹಸ್ತಾಂತರ ಮಾಡಲು ಸಾಧ್ಯವಾಗಿಲ್ಲ. ಮರಗಳ ತೆರವು ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ಇದಕ್ಕೆ ಕಾರಣ.

ನಿಯಮದ ಪ್ರಕಾರ, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ 90 ದಿನಗಳಲ್ಲಿ ಭೂಮಿಯನ್ನು ಹಸ್ತಾಂತರಿಸಬೇಕಿತ್ತು. ಆದರೆ, 11 ತಿಂಗಳು ಕಳೆದರೂ ಈ ಕಾರ್ಯ ಪೂರ್ಣಗೊಂಡಿಲ್ಲ.

ವಿಳಂಬವಾದಷ್ಟೂ ನಷ್ಟ: ತಜ್ಞರ ಅಂದಾಜಿನ ಪ್ರಕಾರ, ಒಂದು ದಿನಕ್ಕೆ ಒಂದು ಚದರ ಮೀಟರ್‌ನಷ್ಟು ಜಾಗದಲ್ಲಿ ಕಾಮಗಾರಿ ನಡೆಸಲು ₹100 ವೆಚ್ಚವಾಗುತ್ತದೆ. ಒಂದೊಂದು ನಿಲ್ದಾಣದ ವಿಸ್ತೀರ್ಣ ಸಾವಿರಾರು ಚದರ ಮೀಟರ್‌ ಇರುವುದರಿಂದ, ಎಂಟು ತಿಂಗಳು ವಿಳಂಬ ಎಂದು ಲೆಕ್ಕ ಹಾಕಿದರೆ ಕೋಟ್ಯಂತರ ರೂಪಾಯಿ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ.

ಈ ಮಾರ್ಗದಲ್ಲಿ ಒಟ್ಟು 18 ಮೆಟ್ರೊ ನಿಲ್ದಾಣಗಳು ನಿರ್ಮಾಣಗೊಳ್ಳಬೇಕಿದ್ದು, ಮರಗಳ ತೆರವು ಕಾರ್ಯ ವಿಳಂಬದಿಂದ ಅವುಗಳ ಕಾಮಗಾರಿಯೂ ನಿಧಾನವಾಗಿ ಸಾಗಿದೆ.

***

ಮರಗಳ ತೆರವು ಪ್ರಕ್ರಿಯೆ ಕುರಿತ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಆದೇಶದ ನಂತರವೇ ನಾವು ಮುಂದುವರಿಯಬೇಕಿದೆ. ಹೀಗಾಗಿ, ಕಾಮಗಾರಿ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದೆ

-ಯಶವಂತ ಚೌಹಾಣ್‌,ಬಿಎಂಆರ್‌ಸಿಎಲ್‌ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ

ಆಕ್ಷೇಪಣೆಗಳ ಆಲಿಕೆ, ಪರಿಶೀಲನೆ ಮುಕ್ತಾಯವಾಗಿದ್ದು, ಸಮಿತಿಯ ಶಿಫಾರಸುಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗುತ್ತದೆ. ನ್ಯಾಯಾಲಯವು ಮಂಗಳವಾರ (ಫೆ.10) ವಿಚಾರಣೆ ನಡೆಸಲಿದೆ.

-ಎಂ.ಕೆ. ಚೋಳರಾಜಪ್ಪ, ತಜ್ಞರ ಸಮಿತಿ ಅಧ್ಯಕ್ಷ

ಅಂಕಿ ಅಂಶ

21.25 ಕಿ.ಮೀ. -ಗೊಟ್ಟಿಗೆರೆ–ನಾಗವಾರ ಮಾರ್ಗದ ಒಟ್ಟು ಉದ್ದ

13.79 ಕಿ.ಮೀ. -ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ ಸುರಂಗ ಮಾರ್ಗದ ಉದ್ದ

₹11,500 ಕೋಟಿ -ಗೊಟ್ಟಿಗೆರೆಯಿಂದ ನಾಗವಾರ ಮಾರ್ಗ ನಿರ್ಮಾಣ ವೆಚ್ಚ (ಎಲಿವೇಟೆಡ್‌ ಸಹಿತ)

12 -ನೆಲದಡಿ ನಿಲ್ದಾಣಗಳು

6 -ಎತ್ತರಿಸಿದ ನಿಲ್ದಾಣಗಳು

300 -ನೆಲದಡಿ ನಿಲ್ದಾಣಗಳ ನಿರ್ಮಾಣಕ್ಕಾಗಿ ಬಿಎಂಆರ್‌ಸಿಎಲ್‌ ಸ್ವಾಧೀನಪಡಿಸಿಕೊಂಡಿರುವ ಆಸ್ತಿ ಅಥವಾ ಕಟ್ಟಡಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT