ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದೂ ಧರ್ಮದ ನಿಜ ರಕ್ಷಕ ನಾರಾಯಣ ಗುರು’: ದಿನೇಶ್‌ ಅಮಿನ್‌ ಮಟ್ಟು

Last Updated 23 ಆಗಸ್ಟ್ 2021, 1:36 IST
ಅಕ್ಷರ ಗಾತ್ರ

ಬೆಂಗಳೂರು: ‘ನಾರಾಯಣ ಗುರುಗಳು ಹಿಂದೂ ಧರ್ಮದ ನಿಜವಾದ ರಕ್ಷಕರು. ಕ್ರಿಸ್ಚಿಯನ್‌ ಮಿಷನರಿಗಳು ಮೊದಲು ಕಾಲಿಟ್ಟಿದ್ದು ಕೇರಳಕ್ಕೆ. ಆ ಸಮಯದಲ್ಲೇ ಗುರುಗಳು ಕೇರಳ ಪ್ರವೇಶಿಸದೇ ಇದ್ದಿದ್ದರೆ ಕ್ರೈಸ್ತ, ಬೌದ್ಧ ಹಾಗೂ ಬ್ರಹ್ಮ ಸಮಾಜದೆಡೆಗೆ ಒಲವು ಹೊಂದಿದ್ದ ಜನ, ಆ ಧರ್ಮಗಳಿಗೆ ಮತಾಂತರಗೊಳ್ಳುವ ಸಾಧ್ಯತೆ ಇತ್ತು’ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ತಿಳಿಸಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘವು ನಾರಾಯಣ ಗುರುಗಳ 167ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ‘ಸಾಮಾಜಿಕ ಬದಲಾವಣೆಯಲ್ಲಿ ನಾರಾಯಣ ಗುರುಗಳ ಚಿಂತನೆಯ ಪಾತ್ರ’ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಭಾನುವಾರ ಮಾತನಾಡಿದರು.

‘1924ರಲ್ಲಿ ಗುರುಗಳು ಸರ್ವಧರ್ಮ ಸಮ್ಮೇಳನ ಆಯೋಜಿಸಿದ್ದರು. ನಾವಿಲ್ಲಿ ಸೇರಿರುವುದು ತರ್ಕ ಮಾಡುವುದಕ್ಕಲ್ಲ, ಗೆಲ್ಲುವುದಕ್ಕೂ ಅಲ್ಲ; ನಾವಿಲ್ಲಿ ಸೇರಿರುವುದು ತಿಳಿದುಕೊಳ್ಳುವುದಕ್ಕೆ ಮತ್ತು ತಿಳಿಸಿ ಹೇಳುವುದಕ್ಕೆ ಎಂಬ ಘೋಷ ವಾಕ್ಯ ಆ ಸಮ್ಮೇಳನದ್ದಾಗಿತ್ತು. ಧರ್ಮ ಬದಲಾಯಿಸುವುದರಿಂದ ಮನುಷ್ಯ ಬದಲಾಗುವುದಿಲ್ಲ ಎಂದೂ ಗುರುಗಳು ಆಗ ಮನವರಿಕೆ ಮಾಡಿಕೊಟ್ಟಿದ್ದರು’ ಎಂದು ತಿಳಿಸಿದರು.

‘ನಾರಾಯಣ ಗುರುಗಳು ಧರ್ಮವನ್ನು ಕೇಂದ್ರವಾಗಿಟ್ಟುಕೊಂಡು ಪ್ರಾರಂಭಿಸಿದ ಚಳವಳಿಯು ಸಾಂಸ್ಕೃತಿ, ಸಾಮಾಜಿಕ ಹಾಗೂ ರಾಜಕೀಯ ರೂಪವನ್ನೂ ಪಡೆದುಕೊಂಡಿತ್ತು. ಕೇರಳದ ಕಮ್ಯುನಿಸ್ಟ್‌ ಚಳವಳಿಯು ನಾರಾಯಣ ಗುರುಗಳ ಚಳವಳಿಯ ಮುಂದುವರಿದ ಭಾಗ. ಕೇರಳವು ಗುರುಗಳ ಆಶಯಗಳನ್ನು ತನ್ನ ಜೀವಾಳವಾಗಿಸಿಕೊಂಡು ದೇಶದಲ್ಲೇ ಮಾದರಿ ರಾಜ್ಯವಾಗಿ ರೂಪುಗೊಂಡಿದೆ’ ಎಂದರು.

‘ಆರ್ಯ ಈಡಿಗ ಸಂಘಟನೆಗೆ ಬಲ ಹಾಗೂ ನಮ್ಮ ಸಮುದಾಯಕ್ಕೆ ದನಿ ಬರಬೇಕಾದರೆ ನಾವೆಲ್ಲಾ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇವರ ಮನೆಯಲ್ಲಿ ಅವರ ಫೋಟೊ ಇಟ್ಟು ಪೂಜಿಸುವ ಜೊತೆಗೆ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರೆ ಕೇರಳವನ್ನೂ ಮೀರಿ ಬೆಳೆಯಬಹುದಿತ್ತು. ಗುರುಗಳ ಜಯಂತಿ ಅವರ ಭಾವಚಿತ್ರವನ್ನಿಟ್ಟು ಪೂಜೆ ಮಾಡುವುದು ಹಾಗೂ ಭಜನೆ ಮಾಡುವುದಕ್ಕೆ ಸೀಮಿತವಾಗಬಾರದು’ ಎಂದು ಕಿವಿಮಾತು ಹೇಳಿದರು.

ಕಾರ್ಮಿಕ ಮುಖಂಡ ಕೆ.ಪ್ರಕಾಶ್‌ ‘ಜ್ಞಾನ ಪಡೆಯುವ ಜೊತೆಗೆ ಬದುಕನ್ನೂ ರೂಪಿಸಿಕೊಳ್ಳುವುದೇ ಶಿಕ್ಷಣ ಎಂದು ನಾರಾಯಣ ಗುರುಗಳು ಪ್ರತಿಪಾದಿಸಿದ್ದರು. ಅವರು ವೈಭವದ ಮದುವೆಗಳನ್ನು ವಿರೋಧಿಸುತ್ತಿದ್ದರು. ಮಾನವತೆಯು ಅವರ ಚಿಂತನೆಯ ಕೇಂದ್ರಬಿಂದುವಾಗಿತ್ತು.ಬ್ರಾಹ್ಮಣರ ಆಧಿಪತ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಶಿವಲಿಂಗ ಪ್ರತಿಷ್ಠಾಪಿಸಿದ್ದರು’ ಎಂದು ತಿಳಿಸಿದರು.

ಆರ್ಯ ಈಡಿಗ ಮಹಾಸಂಸ್ಥಾನದ ನಿಯೋಜಿತ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ, ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT