ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಲೋಕ ಅದಾಲತ್‌: 29 ಲಕ್ಷ ಪ್ರಕರಣ ಇತ್ಯರ್ಥ, ₹ 2,541 ಕೋಟಿ ಪರಿಹಾರ

Published 19 ಮಾರ್ಚ್ 2024, 18:29 IST
Last Updated 19 ಮಾರ್ಚ್ 2024, 18:29 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ವತಿಯಿಂದ ಇದೇ 16ರಂದು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 29 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ₹ 2,541 ಕೋಟಿ ಮೊತ್ತದ ಪರಿಹಾರ ಕೊಡಿಸಲಾಗಿದೆ’ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಕೆ.ಸೋಮಶೇಖರ್‌ ತಿಳಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ‘ಬೆಂಗಳೂರಿನ ಹೈಕೋರ್ಟ್‌ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳೂ ಸೇರಿದಂತೆ ರಾಜ್ಯದಾದ್ಯಂತ ಒಟ್ಟು 1,041 ನ್ಯಾಯಪೀಠಗಳು ಅದಾಲತ್‌ನಲ್ಲಿ ಕಾರ್ಯನಿರ್ವಹಿಸಿದ್ದವು. ಈ ಬಾರಿಯ ಅದಾಲತ್‌ಗೆ 3,76,577 ಪ್ರಕರಣ ಶಿಫಾರಸು ಆಗಿದ್ದವು. ಅವುಗಳ ಪೈಕಿ ನ್ಯಾಯಾಲಯದಲ್ಲಿ ಬಾಕಿಯಿದ್ದ 2,52,277 ಮತ್ತು ವ್ಯಾಜ್ಯ ಪೂರ್ವ 26,48,035 ಸೇರಿದಂತೆ ಒಟ್ಟು 29,00,312 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದರು.

‘967 ಮೋಟರು ಅಪಘಾತ ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹62 ಕೋಟಿ ಪರಿಹಾರ ನೀಡಲಾಗಿದೆ. ಇತರೆ 4,435 ಅಮಲ್ಜಾರಿ ಪ್ರಕರಣಗಳನ್ನು ವಿಲೇವಾರಿ ಮಾಡಿ ₹181 ಕೋಟಿ, 49 ರೇರಾ ಕೇಸುಗಳನ್ನು ವಿಲೇವಾರಿ ಮಾಡಿ ₹ 1.32 ಕೋಟಿ ಮತ್ತು 113 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳನ್ನು ಇತ್ಯರ್ಥಪಡಿಸಿ, ₹ 3.23 ಕೋಟಿ ಪರಿಹಾರ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

‘ಧಾರವಾಡದ ಪ್ರಧಾನ ಹಿರಿಯ ನ್ಯಾಯಾಧೀಶರ ನ್ಯಾಯಾಲಯದಲ್ಲಿದ್ದ ಅಸಲು ದಾವೆ ಪ್ರಕರಣವನ್ನು ₹ 6 ಕೋಟಿ ಮೊತ್ತಕ್ಕೆ ಇತ್ಯರ್ಥಪಡಿಸಲಾಗಿದೆ. ಮಂಗಳೂರಿನ ಅಪರ ಜಿಲ್ಲಾ ನ್ಯಾಯಾಲಯವು ವಾಣಿಜ್ಯ ಪ್ರಕರಣವೊಂದನ್ನು ₹ 2.14 ಕೋಟಿಗೆ, ಧಾರವಾಡ ಪ್ರಧಾನ ಹಿರಿಯ ಸಿವಿಲ್‌ ಮತ್ತು ಸಿಜೆಎಂ ನ್ಯಾಯಾಲಯವು ₹ 2 ಕೋಟಿಯ ಮೊತ್ತಕ್ಕೆ ಎಂವಿಸಿ ಪ್ರಕರಣವೊಂದನ್ನು ಇತ್ಯರ್ಥಪಡಿಸಿದೆ. ಮಂಡ್ಯ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯವು ಶ್ರೀರಂಗಪಟ್ಟಣದ ಎಂವಿಸಿ ಪ್ರಕರಣವೊಂದನ್ನು ₹ 50 ಲಕ್ಷ ಮೊತ್ತಕ್ಕೆ ಇತ್ಯರ್ಥಪಡಿಸಿದೆ’ ಎಂದು ವಿವರಿಸಿದರು.

ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 771 ವೈವಾಹಿಕ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು 281 ದಂಪತಿಗಳನ್ನು ಜೊತೆಗೂಡಿಸಲಾಗಿದೆ.
ನ್ಯಾಯಮೂರ್ತಿ ಕೆ.ಸೋಮಶೇಖರ್, ಕಾರ್ಯನಿರ್ವಾಹಕ ಅಧ್ಯಕ್ಷರು ಕೆಎಸ್‌ಎಲ್‌ಎಸ್‌ಎ

20 ಲಕ್ಷಕ್ಕೂ ಹೆಚ್ಚು ಪ್ರಕರಣ ವಿಲೇವಾರಿಗೆ ಬಾಕಿ

‘ರಾಜ್ಯದ ಎಲ್ಲಾ ಕೋರ್ಟ್‌ಗಳಲ್ಲಿ 2024ರ ಮಾರ್ಚ್‌ 1ರ ವೇಳೆಗೆ ಒಟ್ಟು 2043999 ಪ್ರಕರಣ ವಿಲೇವಾರಿಗೆ ಬಾಕಿಯಿವೆ. ಅವುಗಳ ಪೈಕಿ ಹೈಕೋರ್ಟ್‌ನಲ್ಲಿ 282870 ಇತ್ಯರ್ಥಕ್ಕೆ ಬಾಕಿ ಇವೆ. ಬೆಂಗಳೂರು ಪೀಠದಲ್ಲಿ 17541 ಧಾರವಾಡ ಪೀಠದಲ್ಲಿ 61630 ಮತ್ತು ಕಲಬುರಗಿ ಪೀಠದಲ್ಲಿ 26199 ಪ್ರಕರಣಗಳು ವಿಲೇವಾರಿಗೆ ಬಾಕಿಯಿವೆ’ ಎಂದು ನ್ಯಾಯಮೂರ್ತಿ ಕೆ.ಸೋಮಶೇಖರ್ ತಿಳಿಸಿದರು.

200 ಕಾರ್ಮಿಕರು ಪುನಃ ಸೇವೆಗೆ

‘ಧಾರವಾಡದ ಔದ್ಯೋಗಿಕ ನ್ಯಾಯಾಲಯವು ಹುಬ್ಬಳ್ಳಿಯ ಟಾಟಾ ಮಾರ್ಕೋ ಪೋಲೊ ಕಂಪನಿಯ 200 ಕಾರ್ಮಿಕರನ್ನು ಪುನಃ ಸೇವೆಗೆ ತೆಗೆದುಕೊಳ್ಳಲು ಆದೇಶಿಸಲಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆಯ ಹಿರಿಯ ಸಿವಿಲ್‌ ಮತ್ತು ಜೆಎಫ್‌ಎಂಸಿ ಕೋರ್ಟ್‌ನಲ್ಲಿದ್ದ 20 ವರ್ಷಗಳಷ್ಟು ಹಳೆಯದಾದ ಪ್ರಕರಣವನ್ನು ಮಂಡ್ಯ ಪ್ರಧಾನ ಸಿವಿಲ್‌ ನ್ಯಾಯಾಲಯ ಶ್ರೀರಂಗಪಟ್ಟಣದ ಹತ್ತು ವರ್ಷ ಹಳೆಯದಾದ ಅಮಲ್ಜಾರಿ ಹಾಗೂ ಸಿಜೆ-ಜೆಎಂಎಫ್‌ಸಿ ನ್ಯಾಯಾಲಯವು ಪಾಂಡವಪುರದ ಹತ್ತು ವರ್ಷದ ಹಳೆಯ ವಿಭಾಗ ಪ್ರಕರಣವನ್ನು ಈ ಬಾರಿಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ’ ಎಂದು ನ್ಯಾಯಮೂರ್ತಿ ಸೋಮಶೇಖರ್‌ ವಿವರಿಸಿದರು.

ವರ್ಷಕ್ಕೆ ನಾಲ್ಕು ಬಾರಿ ಲೋಕ ಅದಾಲತ್‌ ನಡೆಯುತ್ತದೆ. ರಾಜಿ ಸಂಧಾನದ ಮೂಲಕ ಸಿವಿಲ್‌ ಹಾಗೂ ಕ್ರಿಮಿನಲ್‌ ಪ್ರಕರಣಗಳನ್ನು ತ್ವರಿತವಾಗಿ ಖರ್ಚಿಲ್ಲದೆ ಮತ್ತು ಸಕಾಲಕ್ಕೆ ಇತ್ಯರ್ಥಪಡಿಸಿಕೊಂಡು ನ್ಯಾಯ ಪಡೆಯಲು ಇದು ಉತ್ತಮ ವೇದಿಕೆಯಾಗಿದೆ. ವ್ಯಾಜ್ಯದಾರರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು.
ನ್ಯಾಯಮೂರ್ತಿ ಕೆ.ಸೋಮಶೇಖರ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT