ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಹಸ್ಯ ಸಭೆ: ಬೆಂಗಳೂರಿನಲ್ಲಿ ಅಡಗಿದ್ದ ನಕ್ಸಲ್‌ ಬಂಧನ

ನಗರದಲ್ಲಿ ಅಡಗಿದ್ದ ಮಾವೋವಾದಿ ಸಂಘಟನೆಯ ಸದಸ್ಯ
Published : 6 ಸೆಪ್ಟೆಂಬರ್ 2024, 16:28 IST
Last Updated : 6 ಸೆಪ್ಟೆಂಬರ್ 2024, 16:28 IST
ಫಾಲೋ ಮಾಡಿ
Comments

ಬೆಂಗಳೂರು: ನಗರದಲ್ಲಿ ಅಡಗಿದ್ದ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಸಕ್ರಿಯ ಸದಸ್ಯನೊಬ್ಬನನ್ನು ಸಿಸಿಬಿ ಪೊಲೀಸರು ಹಾಗೂ ಭಯೋತ್ಪಾದಕ ನಿಗ್ರಹದಳದ (ಎಟಿಎಸ್‌) ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ರಾತ್ರಿ ಬಂಧಿಸಿದ್ದಾರೆ.

ತಮಿಳುನಾಡಿನ ಚೆನ್ನೈ ಮೂಲದ ಅನಿರುದ್ಧ್‌ ರಾಜನ್‌ ಬಂಧಿತ ನಕ್ಸಲ್‌.‌

‘ಆರೋಪಿಯಿಂದ ಎರಡು ಬ್ಯಾಗ್, ಪೆನ್​ಡ್ರೈವ್, ಟ್ಯಾಬ್ ಹಾಗೂ ಕೆಲವು ನಕಲಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಚೆನ್ನೈನಿಂದ ರೈಲಿನ ಮೂಲಕ ನಗರಕ್ಕೆ ಬಂದಿದ್ದ ಆರೋಪಿ, ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಅಡಗಿದ್ದ. ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ, ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು ಹಾಗೂ ಎಟಿಎಸ್‌ ಅಧಿಕಾರಿಗಳು, ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆದುಕೊಂಡು, ಬಂಧಿಸಿದರು’ ಎಂದು ಮೂಲಗಳು ಹೇಳಿವೆ.

‘ಮಾವೋವಾದಿ ಸಂಘಟನೆಯ ಧ್ಯೇಯೋದ್ದೇಶಗಳನ್ನು ಈಡೇರಿಸಲು ಎಡಪಂಥೀಯ ಉಗ್ರ ಚಟುವಟಿಕೆಗಳ ಬಗ್ಗೆ ಸಹಾನೂಭೂತಿಯುಳ್ಳ ವ್ಯಕ್ತಿಗಳ ಜೊತೆಯಲ್ಲಿ ಅನಿರುದ್ಧ್‌ ಸಂಪರ್ಕ ಬೆಳೆಸಿಕೊಂಡಿದ್ದ. ಅಲ್ಲದೇ ಸಂಘಟಕನಾಗಿ ಕೆಲಸ ಮಾಡುತ್ತಿದ್ದ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ನಾಲ್ಕು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿ, ಅಜ್ಞಾತ ಸ್ಥಳದಲ್ಲಿ ಅಡಗಿ ಕುಳಿತು ತನ್ನ ಸಂಘಟನೆಗೆ ಸದಸ್ಯರನ್ನು ಸೆಳೆಯಲು ಪ್ರಯತ್ನಿಸಿದ್ದ. ಕೇಂದ್ರದ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದ ತಕ್ಷಣವೇ ಆತ ಅಡಗಿದ್ದ ಸ್ಥಳವನ್ನು ಪತ್ತೆಹಚ್ಚಿ ಚಲನವಲನದ ಮೇಲೆ ನಿಗಾ ಇಡಲಾಗಿತ್ತು. ಹಣ ಸಂಗ್ರಹ ಹಾಗೂ ರಹಸ್ಯ ಸಭೆ ನಡೆಸಿರುವುದು ಗೊತ್ತಾಗಿದೆ. ಅಲ್ಲದೇ ಆರೋಪಿ, ನಿಷೇಧಿತ ಸಂಘಟನೆಯ ಚಟುವಟಿಕೆಗಳನ್ನು ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ವಿಸ್ತರಿಸಿಕೊಂಡು ಸಂವಹನಕಾರನಾಗಿ ಕಾರ್ಯನಿರ್ವಹಿಸುತ್ತಿದ್ದ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಬಂಧಿತ ನಕ್ಸಲೀಯನ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ 14 ದಿನ ಸಿಸಿಬಿ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ’ ಎಂದು ಮೂಲಗಳು ಖಚಿತಪಡಿಸಿವೆ.

ನಕಲಿ ಆಧಾರ್‌: ‘ಆರೋಪಿ ಬಳಿ ಹಲವು ನಕಲಿ ದಾಖಲೆಗಳು ಸಿಕ್ಕಿವೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ. ‘ವಿಕಾಸ್ ಘಾಡ್ಗೆ’ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಹೊಂದಿದ್ದ. ನಗರದ ಯಾವ ಸ್ಥಳದಲ್ಲಿ ಸಭೆ ನಡೆಸಿದ್ದ? ಯಾರನ್ನು ಭೇಟಿ ಮಾಡಿದ್ದ ಎಂಬುದು ಇನ್ನೂ ಖಚಿತವಾಗಿಲ್ಲ. ಆತ ಸಂಚರಿಸಿದ್ದ ಮಾರ್ಗಗಳಲ್ಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ. ರಾಜ್ಯದಲ್ಲಿ ಯಾರಾದರೂ ಈತನ ಜತೆಗೆ ಸಂಪರ್ಕಕ್ಕೆ ಬಂದಿದ್ದಾರೆಯೆ ಎಂಬುದರ ಕುರಿತೂ ತನಿಖೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನಗರದಲ್ಲಿ ಆರೋಪಿ ನಡೆಸಿದ್ದ ಕಾರ್ಯ ಚಟುವಟಿಕೆಗಳ ಬಗ್ಗೆ ತನಿಖೆ ಮುಂದುವರಿದಿದೆ
ಬಿ.ದಯಾನಂದ ನಗರ ಪೊಲೀಸ್‌ ಕಮಿಷನರ್‌

ಗೆಳತಿ ಭೇಟಿ ಮಾಡಿದ್ದ ಆರೋಪಿ?

‘ನಗರದಲ್ಲಿ ನೆಲೆಸಿರುವ ಗೆಳತಿಯ ಭೇಟಿಗೆಂದು ಆರೋಪಿ ಚೆನ್ನೈನಿಂದ ಬಂದಿದ್ದ ಎನ್ನಲಾಗಿದೆ. ಆ ಬಗ್ಗೆಯೂ ಕೆಲವು ಮಾಹಿತಿಗಳು ಸಿಕ್ಕಿವೆ. ಅದನ್ನೂ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT