ಸೋಮವಾರ, ಮಾರ್ಚ್ 20, 2023
24 °C

‘ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನಲ್ಲಿ ಅವಕಾಶಗಳು- ಸವಾಲುಗಳು’ ವಿಚಾರ ಸಂಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದ ಚೌಕಟ್ಟು (ಎನ್‌ಸಿಎಫ್) ಅಂತಿಮವಾಗಿದ್ದು ಶೀಘ್ರವೇ ಬಿಡುಗಡೆ ಆಗಲಿದೆ’ ಎಂದು ಎನ್‌ಸಿಎಫ್‌ನ ರಾಷ್ಟ್ರೀಯ ಪರಿಶೀಲನಾ ಸಮಿತಿ ಸದಸ್ಯ ಪ್ರೊ.ಎಂ.ಕೆ. ಶ್ರೀಧರ್ ಮಾಹಿತಿ ನೀಡಿದರು.

ನಗರದಲ್ಲಿ ಮಂಗಳವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಡಿಎಚ್‌ ಮಾಸ್ಟರ್‌ಮೈಂಡ್‌’ ಮುದ್ರಣ ಪ್ರತಿ ಬಿಡುಗಡೆ ಹಾಗೂ ಕ್ರಿಯಾತ್ಮಕ ಶಿಕ್ಷಣ 2022–23ನೇ ಸಾಲಿನ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನಲ್ಲಿ ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಒಟ್ಟು ನಾಲ್ಕು ಹಂತದಲ್ಲಿ ಪಠ್ಯಕ್ರಮದ ಚೌಕಟ್ಟು ರೂಪಿಸಲಾಗುತ್ತಿದೆ. ಎನ್‌ಸಿಎಫ್‌ನಂತೆ ರಾಜ್ಯದಲ್ಲೂ ಮೊದಲ ಹಂತದ (3ರಿಂದ 6 ವರ್ಷ) ಪಠ್ಯಕ್ರಮದ ಚೌಕಟ್ಟು ಸಿದ್ಧವಾಗಿದ್ದು ಜ.28ರ ಒಳಗಾಗಿ ಬಿಡುಗಡೆ ಆಗಲಿದೆ. ಈ ಹಿಂದೆ ಕರಡು ಪ್ರತಿ ಲಭ್ಯವಿತ್ತು. ಶಾಲಾ ಹಂತದ ಪಠ್ಯಕ್ರಮದ ಚೌಕಟ್ಟು ಗಮನಿಸಿಯೇ ಉಳಿದ ಚೌಕಟ್ಟು ರೂಪಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಹೇಳಿದರು.

‘3ರಿಂದ 8, 8ರಿಂದ 11, 11ರಿಂದ 14, 14ರಿಂದ 18 ವರ್ಷ... ಹೀಗೆ ನಾಲ್ಕು ಹಂತಗಳಾಗಿ ವಿಂಗಡಿಸಿ ಎನ್‌ಇಪಿ ರೂಪಿಸಲಾಗಿದೆ. ಆಯಾ ವಯಸ್ಸಿನ ಹಂತದ ಮಗುವಿಗೆ ಅಗತ್ಯತೆ ಗಮನಿಸಿಯೇ ಹೊಸ ನೀತಿ ರೂಪಿಸಲಾಗಿದೆ’ ಎಂದರು.

‘ಮಗು 6ನೇ ವರ್ಷದಲ್ಲಿದ್ದಾಗ ಮಿದುಳು ಶೇ 80ರಷ್ಟು ಚುರುಕುತನದಿಂದ ಕೂಡಿರುತ್ತದೆ. ಒಂದೇ ಮಾಧ್ಯಮದ ಬದಲಿಗೆ ಬಹುಭಾಷೆ ಕಲಿತ ವಿದ್ಯಾರ್ಥಿಯ ಆಲೋಚನಾ ಶಕ್ತಿಯೂ ಹೆಚ್ಚಿರುತ್ತದೆ. ಈ ಎಲ್ಲ ಅಂಶಗಳನ್ನೂ ಗಮನಿಸಲಾಗಿದೆ. ಉನ್ನತ ಶಿಕ್ಷಣಕ್ಕೆ ತೆರಳುವುದಕ್ಕೂ ಮೊದಲು ಒಬ್ಬ ವಿದ್ಯಾರ್ಥಿಯ ಜ್ಞಾನದ ಎಲ್ಲ ಶಾಖೆಯೂ ಪರಿಚಯವಾಗಲಿದೆ’ ಎಂದು ಪ್ರತಿಪಾದಿಸಿದರು.

‘ಪದವಿ ಕಲಿತವರಲ್ಲಿ ಶೇ 80ರಷ್ಟು ಮಂದಿ ಉನ್ನತ ಶಿಕ್ಷಣಕ್ಕೆ ತೆರಳುತ್ತಿಲ್ಲ. ಅವರೆಲ್ಲರೂ ನೇರವಾಗಿ ಸಮಾಜಕ್ಕೆ ತೆರಳುತ್ತಿದ್ದಾರೆ. ಶಾಲಾ ಹಂತದಲ್ಲೇ ಮಕ್ಕಳಿಗೆ ಕೌಶಲಯುತ ಶಿಕ್ಷಣ ಅಗತ್ಯ’ ಎಂದು ಹೇಳಿದರು.

‘ಸಮಸ್ಯೆಗಳ ಕುರಿತು ಚರ್ಚಿಸದೇ ಅವಕಾಶಗಳ ಬಗ್ಗೆಯೇ ಅವಲೋಕನ ಅಗತ್ಯ. ಹೊಸ ಪದ್ಧತಿ ತಲೆನೋವು ಅಂದುಕೊಳ್ಳದೇ ಬದಲಾವಣೆಗೆ ಲಭಿಸಿದ ಅವಕಾಶವೆಂದು ಶಿಕ್ಷಕರು ಭಾವಿಸಿಕೊಳ್ಳಬೇಕು. ಹೊಸ ಶಿಕ್ಷಣ ನೀತಿ ಆಧರಿಸಿ ಮಕ್ಕಳನ್ನು ರೂಪಿಸಬೇಕಾದ ಹೊಣೆ ಶಿಕ್ಷಕರು ಹಾಗೂ ಸಮಾಜದ ಮೇಲಿದೆ’ ಎಂದು ಪ್ರತಿಪಾದಿಸಿದರು.

ದಿ. ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೀತಾರಾಮನ್ ಶಂಕರ್ ಹಾಗೂ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್ ಲೆಸ್ಲಿ ಮಾತನಾಡಿದರು.

ವಿವಿಧೆಡೆಯಿಂದ ಬಂದಿದ್ದ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಗೂ ವಿಭಾಗಗಳ ಮುಖ್ಯಸ್ಥರು ಎನ್‌ಇಪಿ ಕುರಿತು ಸಂದೇಹಗಳನ್ನು ಪ್ರಶ್ನೋತ್ತರ ಅವಧಿಯಲ್ಲಿ ಪರಿಹರಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು