ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತಕ್ಕಿದ್ದ ದಂಪತಿ ರಕ್ಷಣೆ; ಮೇಸ್ತ್ರಿ ಬಂಧನ

Last Updated 2 ಜುಲೈ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ನೆಲಮಂಗಲದ ಹನುಮಂತಗೌಡ ಪಾಳ್ಯದಲ್ಲಿರುವ ಇಟ್ಟಿಗೆ ತಯಾರಿಕಾ ಘಟಕವೊಂದರ ಮೇಲೆ ದಾಳಿ ಮಾಡಿದ್ದ ಜಿಲ್ಲಾಡಳಿತ, ಘಟಕದಲ್ಲಿ ಜೀತ ಕಾರ್ಮಿಕರಾಗಿದ್ದ ದಂಪತಿಯನ್ನು ರಕ್ಷಿಸಿದೆ.

ತಮಿಳುನಾಡಿನ ಧರ್ಮಪುರಿಯ ನೈನಾರ್ ಮತ್ತು ಪತ್ನಿ ರಾಜತಿ ಅವರನ್ನು ಕಳ್ಳ ಸಾಗಣೆ ಮೂಲಕ ನಗರಕ್ಕೆ ಕರೆತಂದಿದ್ದ ಮೇಸ್ತ್ರಿ ಹಾಲಿಮುತ್ತು ಎಂಬಾತ, ಸರಿಯಾದ ಸಂಬಳ ಕೊಡದೇ ದುಡಿಸಿಕೊಳ್ಳುತ್ತಿದ್ದ. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ನೆಲಮಂಗಲ ತಹಶೀಲ್ದಾರ್ ರಾಜಶೇಖರ್ ಹಾಗೂ ಸಬ್‌ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ನೇತೃತ್ವದ ತಂಡ, ಇದೇ 27ರಂದು ದಾಳಿ ಮಾಡಿ ಮೇಸ್ತ್ರಿಯನ್ನು ಬಂಧಿಸಿದೆ.

‘ಇರುಳರ್ ಬುಡಕಟ್ಟಿನ ದಂಪತಿಗೆ10 ತಿಂಗಳ ಕೂಸು ಹಾಗೂ 4 ವರ್ಷದ ಮಕ್ಕಳಿದ್ದಾರೆ. ಒಂದೂವರೆ ವರ್ಷದಿಂದ ದಂಪತಿಯನ್ನು ಜೀತ ಕಾರ್ಮಿಕರಾಗಿ ದುಡಿಸಿಕೊಳ್ಳಲಾಗುತ್ತಿತ್ತು. ವಾರಕ್ಕೆ ಇಬ್ಬರಿಗೆ ತಲಾ ₹ 500 ವೇತನ ನೀಡಲಾಗುತ್ತಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಉತ್ತಮ ವೇತನ ಹಾಗೂ ವಸತಿ ಸೌಲಭ್ಯ ನೀಡುವುದಾಗಿ ಹೇಳಿದ್ದ ಮೇಸ್ತ್ರೀ, ದಂಪತಿಯನ್ನು ಬೆಂಗಳೂರಿಗೆ ಕರೆತಂದಿದ್ದ. ಗಲೀಜಾದ ಸ್ಥಳವನ್ನು ದಂಪತಿಯ ವಾಸಕ್ಕೆ ನೀಡಲಾಗಿತ್ತು. ಅವರಿಗೆ ಯಾವುದೇ ಮೂಲ ಸೌಕರ್ಯಗಳನ್ನೂ ಕಲ್ಪಿಸಿರಲಿಲ್ಲ’ ಎಂದರು.

‘ನಿತ್ಯವೂ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ದಂಪತಿ ಇಟ್ಟಿಗೆ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಅದಾದ ನಂತರ, ಟ್ರಕ್‌ಗಳಿಗೆ ಇಟ್ಟಿಗೆ ತುಂಬಿಸುವ ಕೆಲಸ ನಿರ್ವಹಿಸುತ್ತಿದ್ದರು. ದಂಪತಿ ಎಲ್ಲಿಯಾದರೂ ಹೊರಟರೆ, ಮಾಲೀಕನ ಕಡೆಯವರು ಹಿಂಬಾಲಿಸುತ್ತಿದ್ದರು. ಓಡಾಡಲು ಸಹ ಅವರಿಗೆ ಸ್ವಾತಂತ್ರ್ಯವಿರಲಿಲ್ಲ’ ಎಂದು ಅಧಿಕಾರಿ ಹೇಳಿದರು.

‘ದಂಪತಿಯನ್ನು ಕೆಲಸಕ್ಕೆ ಕರೆದುಕೊಂಡು ಬರುವ ವೇಳೆಯಲ್ಲಿ ₹ 28,000 ನೀಡಲಾಗಿತ್ತು. ಕಾರ್ಮಿಕರು ಮನೆಗೆ ವಾಪಸ್ ತೆರಳಲು ಅನುಮತಿ ಕೇಳಿದಾಗಲೆಲ್ಲ ಹಣವನ್ನು ವಾಪಸ್ ಕೊಡುವಂತೆ ಮೇಸ್ತ್ರೀ ಪೀಡಿಸುತ್ತಿದ್ದ’ ಎಂದರು.

‘ಜೀತಕ್ಕಾಗಿ ಮಕ್ಕಳು ಅಥವಾ ವ್ಯಕ್ತಿಗಳನ್ನು ಖರೀದಿಸುವುದು (ಐಪಿಸಿ 370) ಹಾಗೂ ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನ) ಕಾಯ್ದೆ ಅಡಿ ಮೇಸ್ತ್ರೀ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಂಪತಿ ಹಾಗೂ ಅವರ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ಇಟ್ಟಿಗೆ ತಯಾರಿಕಾ ಘಟಕವನ್ನು ಮೇಸ್ತ್ರೀಯೇ ಲೀಸ್‌ಗೆ ಪಡೆದಿದ್ದ.ಜೀತಕ್ಕೆ ಕಾರ್ಮಿಕರನ್ನು ನಿಯೋಜಿಸಿಕೊಂಡಿದ್ದ ವಿಷಯ ಘಟಕದ ಮೂಲ ಮಾಲೀಕರಿಗೆ ಗೊತ್ತಿರಲಿಲ್ಲ. ಆ ಸಂಬಂಧ ಅವರ ಹೇಳಿಕೆಯನ್ನೂ ಪಡೆಯಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT