ಬೆಂಗಳೂರು: 6 ತಿಂಗಳ ನಂತರ ನೇಪಾಳ ಯುವತಿ ಮೃತದೇಹ ಪೊದೆಯಲ್ಲಿ ಪತ್ತೆ: ಕೊಲೆ?

ಬೆಂಗಳೂರು: ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪುಷ್ಪಾ ದಾಮಿ (22) ಎಂಬುವರ ಮೃತದೇಹ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.
‘ಅಕ್ಷಯನಗರದ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಹಿಂಭಾಗದಲ್ಲಿರುವ ನಿರ್ಜನ ಪ್ರದೇಶದ ಪೊದೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪುಷ್ಪಾ ಮೃತದೇಹ ಸಿಕ್ಕಿದೆ. ಆರು ತಿಂಗಳ ಹಿಂದೆಯೇ ಪುಷ್ಪಾ ಮೃತಪಟ್ಟಿರುವ ಅನುಮಾನವಿದ್ದು, ಸಾವಿಗೆ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಪೊಲೀಸರು ಹೇಳಿದರು.
‘ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಯಾರದ್ದು ಎಂಬುದು ಆರಂಭದಲ್ಲಿ ಗೊತ್ತಾಗಿರಲಿಲ್ಲ. ಬುರುಡೆ ಹಾಗೂ ಮೂಳೆಗಳು ಮಾತ್ರ ಇದ್ದವು. ಚಪ್ಪಲಿ, ಚಿನ್ನದ ಸರ ಹಾಗೂ ಇತರೆ ವಸ್ತುಗಳು ಸಿಕ್ಕಿದ್ದವು. ನಗರದ ಎಲ್ಲ
ಠಾಣೆಗಳಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣಗಳ ಮಾಹಿತಿ ಪಡೆಯಲಾಗಿತ್ತು. ಪರಿಶೀಲನೆ ನಡೆಸಿದಾಗ, ಪುಷ್ಪಾ ಅವರದ್ದೇ ಮೃತದೇಹ ಎಂಬುದು ಖಾತ್ರಿಯಾಯಿತು’ ಎಂದು ತಿಳಿಸಿದರು.
‘ನೇಪಾಳದ ಪುಷ್ಪಾ ಹಾಗೂ ಅವರ ಪತಿ ಅಮರ್, ಕೆಲ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದರು. ದಂಪತಿ ಅಕ್ಷಯನಗರದಲ್ಲಿ ವಾಸವಿದ್ದರು. ಮದ್ಯವ್ಯಸನಿಯಾಗಿದ್ದ ಅಮರ್, ನಿತ್ಯವೂ ಕುಡಿದು ಬಂದು ಪತ್ನಿ ಜೊತೆ ಜಗಳ ಮಾಡುತ್ತಿದ್ದ. ಇದರಿಂದ ಬೇಸತ್ತ ಪುಷ್ಪಾ, ನೇಪಾಳಕ್ಕೆ ವಾಪಸು ಹೋಗಲು ತೀರ್ಮಾನಿಸಿದ್ದರು. ಇದೇ ವಿಚಾರವಾಗಿ ದಂಪತಿ ನಡುವೆ ಗಲಾಟೆ ಶುರುವಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಆರು ತಿಂಗಳ ಹಿಂದೆ ಪುಷ್ಪಾ ಮನೆ ಬಿಟ್ಟು ಹೋಗಿದ್ದರು. ವಾಪಸು ಬಂದಿರಲಿಲ್ಲ. ಅವರು ನಾಪತ್ತೆಯಾದ ಬಗ್ಗೆ ಪತಿ ಠಾಣೆಗೆ ದೂರು ಸಹ ನೀಡಿದ್ದರು. ಇದೀಗ ಪುಷ್ಪಾ ಮೃತದೇಹ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಬೇರೆ ಏನಾದರೂ ಕಾರಣವಿದೆಯಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸರು ಹೇಳಿದರು.
ಐಬಿ ನಿರ್ದೇಶಕರ ಮನೆ ಕಾವಲಿಗಿದ್ದ CRPF ASI ಗುಂಡು ಹೊಡೆದುಕೊಂಡು ಆತ್ಮಹತ್ಯೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.