ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಫ್ರೋ–ಯುರಾಲಜಿ ಸಂಸ್ಥೆಗಿಲ್ಲ ಪೂರ್ಣಾವಧಿ ನಿರ್ದೇಶಕ

10 ವರ್ಷಗಳಿಂದ ಪ್ರಭಾರದಲ್ಲಿಯೇ ನಡೆಯುತ್ತಿರುವ ಸಂಸ್ಥೆ
Last Updated 20 ಜನವರಿ 2023, 22:59 IST
ಅಕ್ಷರ ಗಾತ್ರ

ಬೆಂಗಳೂರು: ಮೂತ್ರಪಿಂಡ ಮತ್ತು ಮೂತ್ರಕೋಶ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿರುವ ನೆಫ್ರೋ–ಯುರಾಲಜಿ ಸಂಸ್ಥೆಗೆ 10 ವರ್ಷಗಳಿಂದ ಪೂರ್ಣಾವಧಿ ನಿರ್ದೇಶಕರಿಲ್ಲ. ಇದರಿಂದ ಸಂಸ್ಥೆಯ ವಾರ್ಷಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

2013ರಿಂದ ಸಂಸ್ಥೆಗೆ ಪೂರ್ಣಾವಧಿ ನಿರ್ದೇಶಕರನ್ನು ನೇಮಕ ಮಾಡಿಲ್ಲ. ಮುಖ್ಯಮಂತ್ರಿಯೇ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರು ಉಪಾಧ್ಯಕ್ಷರಾಗಿದ್ದಾರೆ. ಆಡಳಿತ ಮಂಡಳಿಯ ಸಭೆಗಳಲ್ಲಿ ಸಂಸ್ಥೆಯ ನಿರ್ದೇಶಕ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಸರ್ಕಾರ ಈವರೆಗೂ ನೇಮಕಾತಿ ನಡೆಸಿಲ್ಲ. ಇದರಿಂದ ನಿರ್ದೇಶಕ ಹುದ್ದೆಯು ಪ್ರಭಾರದಲ್ಲಿಯೇ ಇದ್ದು, 150 ಹಾಸಿಗೆಗಳ ಕಟ್ಟಡ ನಿರ್ಮಾಣ ಸೇರಿ ವಿವಿಧ ಯೋಜನೆಗಳು ಕುಂಟುತ್ತಾ ಸಾಗುತ್ತಿವೆ. ಸರ್ಕಾರದ ಈ ನಡೆ ಸಂಸ್ಥೆಯಲ್ಲಿನ ವೈದ್ಯರ ಅಸಮಾಧಾನಕ್ಕೂ ಕಾರಣವಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಸಂಸ್ಥೆ, 2007ರಿಂದ ಸೇವೆ ಒದಗಿಸುತ್ತಿದೆ. ಡಾ.ವೆಂಕಟೇಶ್ ಅವರು ಪ್ರಥಮ ನಿರ್ದೇಶಕರಾಗಿದ್ದರು. ಅವರನ್ನೇ ಎರಡು ಬಾರಿ ನಿರ್ದೇಶಕ ಸ್ಥಾನದಲ್ಲಿ ಮುಂದುವರಿಸಲಾಗಿತ್ತು. ಬಳಿಕ ಡಾ.ಎಂ. ಶಿವಲಿಂಗಯ್ಯ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ತದನಂತರ ಡಾ.ಆರ್.ಕೇಶವ ಮೂರ್ತಿ ಅವರನ್ನು ಪ್ರಭಾರ ಸ್ಥಾನದಲ್ಲಿ ಇರಿಸಲಾಗಿದೆ.

ನೇಮಕಾತಿಗೆ ತಡೆಯಾಜ್ಞೆ: ಪೂರ್ಣಾವಧಿ ನಿರ್ದೇಶಕರ ನೇಮಕಾತಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದಾಗಲೆಲ್ಲ ಸಂಸ್ಥೆಯ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರು ನ್ಯಾಯಮಂಡಳಿಯಲ್ಲಿ ತಡೆಯಾಜ್ಞೆ ತರುತ್ತಿದ್ದಾರೆ‌. ಈ ಬಗ್ಗೆ ವರದಿ ಸಲ್ಲಿಸುವಂತೆ 2022ರ ಡಿಸೆಂಬರ್‌ 14ರಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದರು. 2021ರಲ್ಲಿ ನಿರ್ದೇಶಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದಾಗ ಐವರು ಅರ್ಜಿ ಸಲ್ಲಿಸಿದ್ದರು. ನಿರ್ದೇಶಕ ಹುದ್ದೆಯ ಅವಧಿ 4 ವರ್ಷಗಳು ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಆದರೆ, ಈವರೆಗೂ ನೇಮಕಾತಿ ನಡೆದಿಲ್ಲ.

‘ಸಂಸ್ಥೆಗೆ ಪೂರ್ಣಾವಧಿ ನಿರ್ದೇಶಕರ ನೇಮಕಾತಿ ನಡೆಯದಿದ್ದರಿಂದ ಚಟುವಟಿಕೆ ಕುಂಟುತ್ತಾ ಸಾಗುತ್ತಿದೆ. ಕೇಶವಮೂರ್ತಿ ಅವರೇ ಐದಾರು ವರ್ಷಗಳಿಂದ ಪ್ರಭಾರದಲ್ಲಿ ಇದ್ದಾರೆ. ನೇಮಕಾತಿ ಪ್ರಕ್ರಿಯೆ ನಡೆದಲ್ಲಿ ನಿರ್ದೇಶಕ ಹುದ್ದೆ ಕೈತಪ್ಪುವ ಕಳವಳದಿಂದ ಅವರು, ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದಾಗಲೆಲ್ಲ ನ್ಯಾಯಮಂಡಳಿಯಲ್ಲಿ ತಡೆಯಾಜ್ಞೆ ತರುತ್ತಿದ್ದಾರೆ. ಅರ್ಹರಿಗೆ ಅವಕಾಶ ತಪ್ಪಿಸಲು ಹೀಗೆ ಮಾಡಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಂಸ್ಥೆಯ ವೈದ್ಯರೊಬ್ಬರು ಆರೋಪಿಸಿದರು.

ರೋಗಿಗಳ ಸಂಖ್ಯೆ ಹೆಚ್ಚಳ
ಡಯಾಲಿಸಿಸ್ ಹಾಗೂ ಮೂತ್ರಪಿಂಡಕ್ಕೆ ಸಂಬಂಧಿಸಿದ ವಿವಿಧ ಚಿಕಿತ್ಸೆಗಳಿಗೆ ಸಂಸ್ಥೆಗೆ ರಾಜ್ಯದ ವಿವಿಧೆಡೆಯಿಂದ ರೋಗಿಗಳು ಬರುತ್ತಾರೆ. ಸದ್ಯ ಸಂಸ್ಥೆಯಲ್ಲಿ 20 ಡಯಾಲಿಸಿಸ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿನಿತ್ಯ 80 ರಿಂದ 90 ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಸುಮಾರು 300 ರೋಗಿಗಳು ನಿತ್ಯ ಸಂಸ್ಥೆಗೆ ಭೇಟಿ ನೀಡುತ್ತಾರೆ. ಸದ್ಯ 160 ಹಾಸಿಗೆಗಳ ಸೌಲಭ್ಯ ಹೊಂದಿದೆ. ಮೂತ್ರಪಿಂಡ ಕಸಿ ಚಿಕಿತ್ಸೆ, ಡಯಾಲಿಸಿಸ್, ಶಸ್ತ್ರಚಿಕಿತ್ಸೆ ಸೇರಿ ವಿವಿಧ ಸೌಲಭ್ಯವನ್ನು ಸಂಸ್ಥೆ ಹೊಂದಿದೆ. ರೋಗಿಗಳ ಸಂಖ್ಯೆ ಹೆಚ್ಚಳದಿಂದ ಚಿಕಿತ್ಸೆಗೆ ಸಮಸ್ಯೆಯಾಗಿದ್ದು, 150 ಹಾಸಿಗೆಗಳ ಕಟ್ಟಡವನ್ನು 2018ರಿಂದ ನಿರ್ಮಿಸಲಾಗುತ್ತಿದೆ. ಅದು ಈವರೆಗೂ ಪೂರ್ಣಗೊಂಡಿಲ್ಲ.

**

ನಿರ್ದೇಶಕ ಸ್ಥಾನಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದ್ದು, ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಏನು ಬೇಕಾದರೂ ಆರೋಪಗಳನ್ನು ಮಾಡಬಹುದು.
–ಡಾ.ಆರ್.ಕೇಶವಮೂರ್ತಿ, ನೆಫ್ರೋ–ಯುರಾಲಜಿ ಸಂಸ್ಥೆ ಪ್ರಭಾರ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT