ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5.9 ಕೆ.ಜಿ. ತೂಕದ ಶಿಶು ಜನನ: ವಾಣಿ ವಿಲಾಸ ಆಸ್ಪತ್ರೆಯಲ್ಲಿ ಅಚ್ಚರಿ

Last Updated 21 ಜನವರಿ 2020, 22:21 IST
ಅಕ್ಷರ ಗಾತ್ರ

ಬೆಂಗಳೂರು:‌ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ5.9 ಕೆ.ಜಿ. ತೂಕದ ಗಂಡು ಶಿಶು ಜನಿಸಿದ್ದು, ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ಹಾಗೂ ಜನತೆ ಕುತೂಹಲದಿಂದ ವೀಕ್ಷಿಸಿದರು.

ಸಾಮಾನ್ಯವಾಗಿ ನವಜಾತ ಶಿಶುಗಳ ತೂಕ2.5 ಕೆ.ಜಿ.ಯಿಂದ 3 ಕೆ.ಜಿ. ಇರುತ್ತದೆ. 3.5 ಕೆ.ಜಿ ಹಾಗೂ 4 ಕೆ.ಜಿ.ತೂಕದ ಮಕ್ಕಳು ಜನಿಸಿದ ಪ್ರಕರಣಗಳು ರಾಜ್ಯದ ವಿವಿಧೆಡೆ ವರದಿಯಾಗಿವೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಸರಾಸರಿ 50 ಹೆರಿಗೆಗಳು ಆದರೂ ಇದೇ ಮೊದಲ ಬಾರಿ ಇಷ್ಟು ತೂಕದ ಮಗು ಜನಿಸಿದೆ.

ಪಶ್ಚಿಮ ಬಂಗಾಳದ ಸರಸ್ವತಿ ಮಂಗೂರ್ ಮತ್ತು ಯೋಗೇಶ್ ಮಂಗೂರ್ ದಂಪತಿ ಮಗುವಿನ ಪಾಲಕರು. ಇವರುನಗರದ ಯಲಹಂಕದಲ್ಲಿ ವಾಸಿಸುತ್ತಿದ್ದು, ಸರಸ್ವತಿ ಅವರು ಯಲಹಂಕ ಹಳೆ ಪಟ್ಟಣದ ಬಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಗು ದಪ್ಪವಿರುವ ಕಾರಣ ಹೆರಿಗೆ ಕಷ್ಟ ಎಂದು ತಿಳಿಸಿದ್ದ ಅಲ್ಲಿನ ವೈದ್ಯರು, ಜ.17ರಂದು ವಾಣಿವಿಲಾಸ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ಇಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ಮಗು ಆರೋಗ್ಯವಾಗಿದೆ.

‘ತಾಯಿಗೆ ಮಧುಮೇಹ, ರಕ್ತದೊತ್ತಡ ಇತರೆ ಸಮಸ್ಯೆ ಇದ್ದಾಗ ಈ ರೀತಿಯ ಮಗು ಜನಿಸುವ ಸಾಧ್ಯತೆಗಳಿವೆ. ಈ ಪ್ರಕರಣದಲ್ಲಿ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಜ.18ರಂದು ಹುಟ್ಟಿದ ಕೂಡಲೇ ಮಗುವನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಈಗ ಸಾಮಾನ್ಯ ವಾರ್ಡ್‌ಗೆ ವರ್ಗಾಯಿಸಲಾಗಿದೆ. ಮಗುವಿನ ತೂಕ ಹೆಚ್ಚಿರುವುದರಿಂದ ಮುಂದೆ ಯಾವುದೇ ಸಮಸ್ಯೆ ಎದುರಾಗದಿರಲಿ ಎಂಬ ಕಾರಣಕ್ಕೆ ಕೆಲ ಪರೀಕ್ಷೆಗಳನ್ನು ಮಾಡಬೇಕಿದೆ’ ಎಂದು ಆಸ್ಪತ್ರೆಯವೈದ್ಯಕೀಯ ಅಧೀಕ್ಷಕಿ ಡಾ.ಗೀತಾ ಶಿವಮೂರ್ತಿ ತಿಳಿಸಿದರು.

ಮಗುವಿನ ತಂದೆ ಯೋಗೇಶ್ ಮಂಗೂರ್, ‘14 ವರ್ಷಗಳ ನಂತರ ನಮಗೆ 2ನೇ ಮಗು ಜನಿಸಿದೆ. ಮಗು ಅಧಿಕ ತೂಕವಿದ್ದರೂ ಆರೋಗ್ಯವಾಗಿದೆ.ಮೊದಲನೆಯ ಮಗು 3.5 ಕೆ.ಜಿ. ಇತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT