ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ಕ್ಯಾನ್ಸರ್ ಹೊಸ ಪ್ರಕರಣ ಏರಿಕೆ

4 ವರ್ಷಗಳಲ್ಲಿ 72,956 ಮಂದಿಯಲ್ಲಿ ಕ್ಯಾನ್ಸರ್ ರೋಗ ಪತ್ತೆ * ಕಿದ್ವಾಯಿ ಸಂಸ್ಥೆ ನೋಂದಣಿಯಿಂದ ದೃಢ
Published 11 ಮಾರ್ಚ್ 2024, 0:01 IST
Last Updated 11 ಮಾರ್ಚ್ 2024, 0:01 IST
ಅಕ್ಷರ ಗಾತ್ರ

ಬೆಂಗಳೂರು: ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ ಸೇರಿ ವಿವಿಧ ಕಾರಣಗಳಿಂದ ರಾಜ್ಯದಲ್ಲಿ ಕ್ಯಾನ್ಸರ್‌ನ ಹೊಸ ಪ್ರಕರಣಗಳು ಏರಿಕೆ ಕಂಡಿದ್ದು, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನೋಂದಣಿ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ 72,956 ಮಂದಿಯಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. 

ಕಿದ್ವಾಯಿ ಸಂಸ್ಥೆಯು ಕ್ಯಾನ್ಸರ್ ಚಿಕಿತ್ಸೆಯ ಜತೆಗೆ ಶಿಕ್ಷಣ, ಸಂಶೋಧನೆ ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಕೊಂಡಿದೆ. ಕ್ಯಾನ್ಸರ್ ಚಿಕಿತ್ಸೆಗೆ ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ಇಲ್ಲಿನ ಹೊಂಬೇಗೌಡ ನಗರದಲ್ಲಿರುವ ಸಂಸ್ಥೆಗೆ ಪ್ರತಿನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಮೊಬೈಲ್ ವ್ಯಾನ್‌ಗಳ ಮೂಲಕವೂ ಸಂಸ್ಥೆಯು ರಾಜ್ಯದ ವಿವಿಧೆಡೆ ತಪಾಸಣೆ ಶಿಬಿರಗಳನ್ನು ನಡೆಸುತ್ತಿದೆ. ಇದರಿಂದ ಹೊಸ ‍ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದು, ವಾರ್ಷಿಕ 20 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ದೃಢಪಡುತ್ತಿವೆ. 

ಈ ಸಂಸ್ಥೆಯಲ್ಲಿ ಪ್ರತಿವರ್ಷ 3 ಲಕ್ಷಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಂಸ್ಥೆಯು 863 ಹಾಸಿಗೆಗಳನ್ನು ಹೊಂದಿದ್ದು, ಇವುಗಳಲ್ಲಿ ತುರ್ತು ನಿಗಾ ಘಟಕದ (ಐಸಿಯು) 106 ಹಾಸಿಗೆಗಳೂ ಸೇರಿವೆ. ಕ್ಯಾನ್ಸರ್ ತಪಾಸಣೆ ಹಾಗೂ ಚಿಕಿತ್ಸೆ ಸಂಬಂಧ ನಿತ್ಯ ಸರಾಸರಿ 1,400 ಹೊರರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಶಿಫಾರಸು ಆಧಾರದಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ವಿವಿಧ ಜಿಲ್ಲೆಗಳಿಂದ ಬಂದು, ದಾಖಲಾಗುತ್ತಿದ್ದಾರೆ.  

ತಡವಾಗಿ ದಾಖಲು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನೋಂದಣಿ ಪ್ರಕಾರ ಶೇ 50ರಷ್ಟು ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗೆ ಮೂರು ಹಾಗೂ ನಾಲ್ಕನೇ ಹಂತದಲ್ಲಿ ಬರುತ್ತಿದ್ದಾರೆ. ಶೇ 14.3ರಷ್ಟು ಮಂದಿಗೆ ಮಾತ್ರ ಮೊದಲ ಹಾಗೂ ಎರಡನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಸಂಸ್ಥೆಗೆ ಚಿಕಿತ್ಸೆ ಸಂಬಂಧ ದಾಖಲಾಗಿದ್ದವರಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 3,294 ಮಂದಿ ಮೃತಪಟ್ಟಿದ್ದಾರೆ. ಪುರುಷರಲ್ಲಿ ಹೆಚ್ಚಾಗಿ ಪ್ರಾಸ್ಪೇಟ್, ಬಾಯಿ, ಜಠರ ಮತ್ತು ಅನ್ನನಾಳದ ಕ್ಯಾನ್ಸರ್ ಕಾಣಿಸಿಕೊಂಡರೆ, ಸ್ತನ, ಗರ್ಭಕಂಠ, ಗರ್ಭಾಶಯದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದೆ.

‘ಕ್ಯಾನ್ಸರ್ ಕಾಯಿಲೆ ಹಾಗೂ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಬೇಗ ಆಸ್ಪತ್ರೆಗಳಿಗೆ ತೆರಳಿ, ತಪಾಸಣೆ ಮಾಡಿಸಿಕೊಂಡಲ್ಲಿ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಲು ಸಾಧ್ಯ. ಬದಲಾದ ಜೀವನಶೈಲಿ ಹಾಗೂ ಪಾಶ್ಚಾತ್ಯ ಆಹಾರ ಪದ್ಧತಿ ಜತೆಗೆ ಧೂಮಪಾನದಂತಹ ವ್ಯಸನ, ಒತ್ತಡದ ಜೀವನ, ಕಲುಷಿತ ಪರಿಸರ ಸೇರಿ ವಿವಿಧ ಕಾರಣಗಳಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಸೈಯದ್ ಅಲ್ತಾಫ್ ತಿಳಿಸಿದರು.

ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದಲ್ಲಿ ಚಿಕಿತ್ಸೆ ಸುಲಭ. ಆದ್ದರಿಂದ ರಾಜ್ಯದ ವಿವಿಧೆಡೆ ತಪಾಸಣೆ ನಡೆಸಿ ಕ್ಯಾನ್ಸರ್ ಪೀಡಿತರನ್ನು ಪತ್ತೆ ಮಾಡಲಾಗುತ್ತಿದೆ
।ಡಾ. ಸೈಯದ್ ಅಲ್ತಾಫ್ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ
ಡಾ. ಸೈಯದ್ ಅಲ್ತಾಫ್

ಡಾ. ಸೈಯದ್ ಅಲ್ತಾಫ್

ಗುತ್ತಿಗೆ ಆಧಾರ ಹುದ್ದೆಗಳು ಭರ್ತಿ
ಸರ್ಕಾರಿ ವ್ಯವಸ್ಥೆಯಡಿ ಪೆಟ್‌ ಸ್ಕ್ಯಾನ್ ಹಾಗೂ ಬೋನ್ ಮ್ಯಾರೊ ಕಸಿ ಸೌಲಭ್ಯ ಹೊಂದಿರುವ ಏಕೈಕ ಸಂಸ್ಥೆ ಎಂಬ ಹಿರಿಮೆಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಭಾಜನವಾಗಿದೆ. ಈ ಸಂಸ್ಥೆಗೆ ಮಂಜೂರಾಗಿದ್ದ 1767 ಹುದ್ದೆಗಳಲ್ಲಿ 1106 ಹುದ್ದೆಗಳು ಖಾಲಿ ಉಳಿದಿದ್ದವು. 651 ಹುದ್ದೆಗಳಿಗೆ ಮಾತ್ರ ನೇಮಕಾತಿ ನಡೆದಿತ್ತು. ಹೀಗಾಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ 5 ಹಾಗೂ ಹೊರಗುತ್ತಿಗೆ ಆಧಾರದಲ್ಲಿ 1250 ಮಂದಿಯನ್ನು ಭರ್ತಿ ಮಾಡಿಕೊಳ್ಳಲಾಗಿದೆ.

ವರ್ಷವಾರು ಹೊಸ ಪ್ರಕರಣಗಳು

ವರ್ಷ; ಪ್ರಕರಣಗಳು

2020;13973

2021;16316

2022;21059

2023;21608 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT