ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್‌ ಬೆಂಗಳೂರು: ನವ ಸಾರಿಗೆಯ ಹೊಸ ರಂಗ – ಮೆಟ್ರೊ ಸುರಂಗ

ದೇಶದ ಅತಿ ಉದ್ದದ ನೆಲದಡಿಯ ಮಾರ್ಗದೊಳಗೆ ನುಸುಳಲು ಹೊರಟಿದೆ ‘ನಮ್ಮ ಮೆಟ್ರೊ’ l ಎತ್ತರಿಸಿದ ನಿಲ್ದಾಣಕಿಂತ ನೆಲದಡಿಯ ನಿಲ್ದಾಣಗಳ ಸಂಖ್ಯೆ ದುಪ್ಪಟ್ಟು
Last Updated 14 ಸೆಪ್ಟೆಂಬರ್ 2020, 1:37 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಮೇಲ್ಸೇತುವೆಗಳು, ಎತ್ತರಿಸಿದ ಮಾರ್ಗಗಳು ನಗರದ ಸೌಂದರ್ಯವನ್ನು ಹಾನಿ ಮಾಡುತ್ತಿರುವುದರ ನಡುವೆಯೇ, ‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ದೇಶದಲ್ಲೇ ಅತಿ ಉದ್ದವಾದ ಸುರಂಗ ಮಾರ್ಗ ನಿರ್ಮಿಸುತ್ತಿದೆ.

ಹಾದುಹೋಗುವ ಮಾರ್ಗದಲ್ಲಿ ಮಾರ್ಪಾಡು, ಭೂಸ್ವಾಧೀನ ಸಮಸ್ಯೆ, ಹೂಡಿಕೆ ಸಮಸ್ಯೆ, ಗುತ್ತಿಗೆದಾರರು ಟೆಂಡರ್‌ ಮೊತ್ತಕ್ಕಿಂತ ಶೇ 50ಕ್ಕೂ ಅಧಿಕ ಮೊತ್ತ ನಮೂದಿಸಿದ್ದರಿಂದ ಮರು ಟೆಂಡರ್‌ ಕರೆಯಬೇಕಾಗಿದ್ದು... ಹೀಗೆ ಹತ್ತು ಹಲವು ಅಡೆತಡೆಗಳನ್ನೂ ಮೀರಿ ಈಗ ಸುರಂಗ ಕೊರೆಯುವ ಯಂತ್ರಗಳು ಕಾಮಗಾರಿ ಆರಂಭಿಸಿವೆ. ಮೆಟ್ರೊ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ದೇಶದ ಹಲವು ಮಹಾನಗರಗಳು ದುಬಾರಿ ವೆಚ್ಚದ ಕಾರಣಕ್ಕೆ ಸುರಂಗ ಮಾರ್ಗದ ಗೊಡವೆಯೇ ಬೇಡ ಎನ್ನುತ್ತಿರುವಾಗ ಬಿಎಂಆರ್‌ಸಿಎಲ್‌ ಇಂತಹ ಸಾಹಸಕ್ಕೆ ಕೈ ಹಾಕಿದೆ.

ಎತ್ತರಿಸಿದ (ಎಲಿವೇಟೆಡ್‌) ನಿಲ್ದಾಣ ಅಥವಾ ಮಾರ್ಗಗಳನ್ನು ನಿರ್ಮಿಸುವುದಕ್ಕೆ ತಗಲುವ ವೆಚ್ಚಕ್ಕೆ ಹೋಲಿಸಿದರೆ ಸುರಂಗ ಮಾರ್ಗ ನಿರ್ಮಾಣಕ್ಕೆ ನಾಲ್ಕು ಪಟ್ಟು ಹೆಚ್ಚು ಮೊತ್ತ ಬೇಕಾಗುತ್ತದೆ. ಆದರೆ, ದೀರ್ಘಾವಧಿಯ ಪ್ರಯೋಜನಗಳನ್ನು ಪರಿಗಣಿಸಿದರೆ ಎತ್ತರಿಸಿದ ಮಾರ್ಗಕ್ಕಿಂತ ಸುರಂಗ ಮಾರ್ಗಗಳಿಂದಲೇ ಅನುಕೂಲಗಳು ಹೆಚ್ಚು.

‘ವಿಶಾಲ ರಸ್ತೆಯ ಒಂದು ಪಥದಲ್ಲಿ ಎತ್ತರಿಸಿದ ಮಾರ್ಗ ನಿರ್ಮಾಣವಾಗುತ್ತಿದ್ದರೂ, ಅಕ್ಕ–ಪಕ್ಕದ ಪಥಗಳಲ್ಲಿ ಸಂಚಾರ ನಿರ್ಬಂಧಿಸಲಾಗುತ್ತದೆ. ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತದೆ. ಜನನಿಬಿಡ ಸ್ಥಳಗಳಲ್ಲಿ ನಡೆಯುವ ಈ ಕಾಮಗಾರಿ ನಾಲ್ಕೈದು ವರ್ಷಗಳ ಬಳಿಕವೂ ಪೂರ್ಣಗೊಳ್ಳುವುದಿಲ್ಲ. ಇದಕ್ಕೆ ಹೋಲಿಸಿದರೆ ಸುರಂಗ ಮಾರ್ಗದ ನಿರ್ಮಾಣ ಕಾರ್ಯ (ನೆಲದಡಿಯ ನಿಲ್ದಾಣಗಳನ್ನು ಹೊರತಾಗಿ) ಸದ್ದಿಲ್ಲದೇ ನಡೆಯುತ್ತದೆ. ಈ ಕಾರಣಕ್ಕಾಗಿಯೇ ‘ಮೆಟ್ರೊ ಜಾಲದ 250 ಮೀಟರ್‌ ವ್ಯಾಪ್ತಿಯಲ್ಲಿ ವಾಸಿಸುವ ಶೇ 90ರಷ್ಟು ಜನ ನೆಲದಡಿಯ ನಿಲ್ದಾಣಗಳೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ’ ಎಂದು ಬಾಂಬೆ ಐಐಟಿಯ ಪ್ರೊ. ಎಸ್.ಎಲ್. ಧಿಂಗ್ರಾ ನೇತೃತ್ವದ ತಂಡ ನಡೆಸಿದ ಅಧ್ಯಯನ ವರದಿ ಹೇಳುತ್ತದೆ.

ಉದಾಹರಣೆಗೆ, ಮೈಸೂರು ರಸ್ತೆ–ಕೆಂಗೇರಿ ವಿಸ್ತರಿತ ಮಾರ್ಗದಲ್ಲಿ (ರೀಚ್‌ 2) ಐದು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಇದರಿಂದ ಉಂಟಾದ ಸಂಚಾರ ದಟ್ಟಣೆಯ ಸಮಸ್ಯೆ, ಜನರ ಆರೋಗ್ಯದ ಮೇಲಾದ ಪರಿಣಾಮಗಳ ಲೆಕ್ಕ ತೆಗೆದುಕೊಂಡರೆ, ಸುರಂಗ ಮಾರ್ಗ ನಿರ್ಮಾಣದ ಮಹತ್ವವೇನು ಎಂಬುದು ಅರಿವಾಗುತ್ತದೆ.

ಎತ್ತರಿಸಿದ ಮಾರ್ಗ ನಿರ್ಮಾಣಕ್ಕೆ ಬೇಕಾಗುವ ಭೂಸ್ವಾಧೀನಕ್ಕೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಹೆಚ್ಚು ಕಟ್ಟಡಗಳನ್ನು ಧ್ವಂಸ ಮಾಡಬೇಕಾಗುತ್ತದೆ. ಇದರಿಂದ ಸಂತ್ರಸ್ತರಾಗುವವರು ಎದುರಿಸುವ ಬವಣೆಗಳನ್ನು ಲೆಕ್ಕ ಇಡುವವರಿಲ್ಲ. ಇದು ನಗರದ ಮೂಲಸ್ವರೂಪವನ್ನೇ ಬದಲಾಯಿಸುತ್ತದೆ. ಗಾಂಧಿನಗರ, ಮೆಜೆಸ್ಟಿಕ್‌, ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆಯಂತಹ ಹೆಚ್ಚು ವಾಣಿಜ್ಯ ಚಟುವಟಿಕೆಗಳು ನಡೆಯುವ ಸ್ಥಳದಲ್ಲಿ ಕಟ್ಟಡಗಳನ್ನು ಧ್ವಂಸಗೊಳಿಸಿ, ವರ್ಷಾನುಗಟ್ಟಲೇ ಸಂಚಾರ ನಿರ್ಬಂಧಗೊಳಿಸಿದರೆ ಉಂಟಾಗುವ ಮೊತ್ತ, ಸುರಂಗ ಮಾರ್ಗಕ್ಕೆ ತಗುಲುವ ಹೆಚ್ಚುವರಿ ವೆಚ್ಚಕ್ಕಿಂತ ಹತ್ತಾರು ಪಟ್ಟು ಹೆಚ್ಚು.

ನಿರ್ವಹಣೆ ಸುಲಭ:ರಸ್ತೆ ಮಧ್ಯೆ ಬರುವ ದೊಡ್ಡ ಪಿಲ್ಲರ್‌ಗಳು, ವಯಡಕ್ಟ್‌ಗಳಿಂದ ಸಂಚಾರ ದಟ್ಟಣೆ ಹೆಚ್ಚುವುದಲ್ಲದೆ, ನಿರ್ವಹಣೆಯೂ ಕಷ್ಟ. ಮೆಟ್ರೊ ಪಿಲ್ಲರ್‌ಗಳಲ್ಲಿ ಬಿರುಕು, ಬೇರಿಂಗ್‌ನಲ್ಲಿ ಸಮಸ್ಯೆ, ನೀರು ಸೋರಿಕೆ ಮುಂತಾದ ಸಮಸ್ಯೆಗಳು ಎತ್ತರಿಸಿದ ಮಾರ್ಗದಲ್ಲಿ ಕಂಡು ಬರುತ್ತವೆ. ಇಂತಹ ಸಮಸ್ಯೆಗಳು ಸುರಂಗ ಮಾರ್ಗದಲ್ಲಿ ಕಡಿಮೆ. ಅಲ್ಲದೆ,ಪಿಲ್ಲರ್‌ಗಳ ಮೇಲೆ ಜಾಹೀರಾತು ಫಲಕಗಳು, ಭಿತ್ತಿಪತ್ರಗಳು, ಪಿಲ್ಲರ್‌ಗಳ ನಡುವಿನ ಖಾಲಿ ಜಾಗದಲ್ಲಿ ಬೀಳು ಕಸದ ರಾಶಿಗಳೆಲ್ಲವೂ ನಗರದ ಸೌಂದರ್ಯಕ್ಕೂ ಧಕ್ಕೆಯನ್ನುಂಟು ಮಾಡುತ್ತವೆ.

ನಗರದ ಸೌಂದರ್ಯವನ್ನು, ಮೂಲಸ್ವರೂಪವನ್ನು ಅಂತೆಯೇ ಉಳಿಸಿಕೊಂಡು ರಾಜಧಾನಿಯ ಕ್ಷಿಪ್ರ ಸಾರಿಗೆ ವ್ಯವಸ್ಥೆಗೆ ಹೊಸ ದಿಸೆ ತೋರಿಸಲಿದೆ ಈ ಮೆಟ್ರೊ ಸುರಂಗ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಸಂಕಲ್ಪದ ಜೊತೆಗೆ ಬೆಂಗಳೂರಿನ ಬ್ರ್ಯಾಂಡ್‌ ಮೌಲ್ಯ ದಕ್ಕಿಸುವತ್ತ ಸಾಗುತ್ತಿದೆ ಬಿಎಂಆರ್‌ಸಿಎಲ್.

ಟಿಬಿಎಂಗಳ ಸಾಮರ್ಥ್ಯ–ಕಾರ್ಯನಿರ್ವಹಣೆ ಸ್ವರೂಪ

ಈಗ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಟಿಬಿಎಂಗಳು ಮತ್ತು ಇನ್ನಷ್ಟೇ ಬರಲಿರುವ ಐದು ಟಿಬಿಎಂಗಳ ಸಾಮರ್ಥ್ಯ ಒಂದೇ ರೀತಿ ಇರುತ್ತದೆ ಎನ್ನುತ್ತಾರೆ ನಿಗಮದ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್.

ಗಟ್ಟಿಯಾದ ಬಂಡೆಗಳನ್ನೂ ಕೊರೆಯುವ ಸಾಮರ್ಥ್ಯವನ್ನು ಈ ಯಂತ್ರಗಳು ಹೊಂದಿವೆ. ಸಿಡಿಮದ್ದುಗಳನ್ನು ಅತಿ ಕಡಿಮೆ ಅಥವಾ ಅನಿವಾರ್ಯ ಇದ್ದಲ್ಲಿ ಮಾತ್ರ ಬಳಸಬಹುದಾಗಿದೆ. ದಿನಕ್ಕೆ 2 ಮೀಟರ್‌ನಿಂದ 2.5 ಮೀಟರ್‌ನಷ್ಟು ಉದ್ದದ ಸುರಂಗ ಕೊರೆಯುವ ಸಾಮರ್ಥ್ಯವನ್ನು ಇವು ಹೊಂದಿವೆ.

ಬೆಲೆ ಎಷ್ಟು?

ಒಂದು ಟಿಬಿಎಂನ ಬೆಲೆ ಅಂದಾಜು ₹75 ಕೋಟಿ. ಒಂದು ಟಿಬಿಎಂ ಕಾರ್ಯನಿರ್ವಹಿಸಲು 14 ಮೆಗಾವಾಟ್‌ ವಿದ್ಯುತ್‌ ಪೂರೈಸಬೇಕಾಗುತ್ತದೆ. ಕಾಮಗಾರಿ ವೇಳೆ ಭಾರಿ ಪ್ರಮಾಣದ ಮಣ್ಣನ್ನು ಹೊರತೆಗೆದು ಸಾಗಿಸಬೇಕಾಗುತ್ತದೆ. ಈ ಮಣ್ಣಿನ ವಿಲೇವಾರಿಯೂ ಸವಾಲಿನದ್ದು. ಹೆಚ್ಚೂ ಕಡಿಮೆ 13 ಕಿ.ಮೀ. ಉದ್ದದ ಸುರಂಗ ಕೊರೆದರೆ ಅಂದಾಜು 10.81 ಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು ಮಣ್ಣನ್ನು ವಿಲೇ ಮಾಡಬೇಕಾಗುತ್ತದೆ.

ಅನುಕೂಲ–ಅನನುಕೂಲ ಎರಡೂ ಇವೆ’

‘ಸುರಂಗ ಮಾರ್ಗದಿಂದ ಎಷ್ಟು ಅನುಕೂಲ ಇದೆಯೋ, ಅನನಕೂಲವೂ ಇದೆ. ಎತ್ತರಿಸಿದ ಮಾರ್ಗಕ್ಕೂ ಇದು ಅನ್ವಯಿಸುತ್ತದೆ’ ಎನ್ನುತ್ತಾರೆ ಬಿಎಂಆರ್‌ಸಿಎಲ್‌ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಚೆನ್ನಪ್ಪಗೌಡರ್.

‘ಸುರಂಗ ಮಾರ್ಗದಲ್ಲಿ ನಿರಂತರವಾಗಿ ಗಾಳಿ–ಬೆಳಕಿನ ವ್ಯವಸ್ಥೆ ಕಾಪಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಖರ್ಚಾಗುತ್ತದೆ. ಭೂಸ್ವಾಧೀನ ವೆಚ್ಚ ಕಡಿಮೆಯಾದರೂ, ನೆಲದಡಿಯ ನಿಲ್ದಾಣಗಳ ನಿರ್ಮಾಣಕ್ಕೆ ನಾಲ್ಕು ಪಟ್ಟು ಹೆಚ್ಚು ಹಣ ಬೇಕಾಗುತ್ತದೆ’ ಎಂದು ಅವರು ಹೇಳುತ್ತಾರೆ.

‘ಎತ್ತರಿಸಿದ ಮಾರ್ಗವನ್ನು ರಸ್ತೆ ಸಾರಿಗೆ ಮಾರ್ಗದಲ್ಲಿಯೇ ಹೆಚ್ಚಾಗಿ ನಿರ್ಮಿಸುವುದರಿಂದ ಹೆಚ್ಚು ಕಟ್ಟಡಗಳ ಸ್ವಾಧೀನದ ಪ್ರಶ್ನೆ ಬರುವುದಿಲ್ಲ. ಸುರಂಗಮಾರ್ಗ ನಿರ್ಮಾಣಕ್ಕೆ ಆಗುವ ವೆಚ್ಚ ಪರಿಗಣಿಸಿದರೆ, ನಮ್ಮಂತಹ ಅಭಿವೃದ್ಧಿಶೀಲ ದೇಶಗಳಿಗೆ ಇನ್ನೂ ಎತ್ತರಿಸಿದ ಮಾರ್ಗವೇ ಸೂಕ್ತ ಎನಿಸುತ್ತದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಸುರಂಗ ಮಾರ್ಗದ ಅನುಕೂಲಗಳು

lಭೂಸ್ವಾಧೀನ ವೆಚ್ಚ ಕಡಿಮೆ
lಕಟ್ಟಡಗಳನ್ನು ಕೆಡಹುವ ಅಗತ್ಯವಿಲ್ಲ
lನಗರದ ಮೂಲಸ್ವರೂಪಕ್ಕೆ ಹೆಚ್ಚು ಧಕ್ಕೆ ಇಲ್ಲ
lವೆಚ್ಚ ಹೆಚ್ಚಾದರೂ ದೀರ್ಘಾವಧಿಯಲ್ಲಿ ಪ್ರಯೋಜನಗಳು ಅನೇಕ
lನಿರ್ಮಾಣದ ವೇಳೆ ಹೆಚ್ಚು ಮಾಲಿನ್ಯವಿಲ್ಲ
lಕಾಮಗಾರಿಯಿಂದ ಕಿರಿಕಿರಿ ಕಡಿಮೆ

ಸುರಂಗ ಮಾರ್ಗದ 12 ನಿಲ್ದಾಣಗಳು

ಡೇರಿ ವೃತ್ತ,ಲಕ್ಕಸಂದ್ರ,ಲ್ಯಾಂಗ್‌ಫೋರ್ಡ್‌ ಟೌನ್,ರಾಷ್ಟ್ರೀಯ ಮಿಲಿಟರಿ ಶಾಲೆ,ಎಂ.ಜಿ. ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್, ಪಾಟರಿ ಟೌನ್, ಟ್ಯಾನರಿ ರಸ್ತೆ,ವೆಂಕಟೇಶಪುರ,ಕಾಡುಗೊಂಡನಹಳ್ಳಿ,ನಾಗವಾರ.

ನಾಲ್ಕು ಪ್ಯಾಕೇಜ್‌ಗಳಲ್ಲಿ ಸುರಂಗ ಮಾರ್ಗ ನಿರ್ಮಾಣ

ತ್ವರಿತವಾಗಿ ಮುಗಿಸಬೇಕು ಎಂಬ ಉದ್ದೇಶದಿಂದ ಸುರಂಗ ಮಾರ್ಗದ ಕಾಮಗಾರಿಯನ್ನು ನಾಲ್ಕು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಲಾಗಿದೆ. ಸುರಂಗ ಕೊರೆಯುವ 9 ಯಂತ್ರಗಳು (ಟಿಬಿಎಂ) ಇದಕ್ಕಾಗಿ ಕೆಲಸ ಮಾಡಲಿವೆ.

ಪ್ಯಾಕೇಜ್‌ 1

* ಜಯನಗರ ಅಗ್ನಿಶಾಮಕ ಕೇಂದ್ರದ ಬಳಿಯ ದಕ್ಷಿಣ ರ್‍ಯಾಂಪ್‌ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆ‌ವರೆಗೆ.
* ಉದ್ದ– 3.66 ಕಿ.ಮೀ.
* ನೆಲದಡಿ ನಿಲ್ದಾಣಗಳು– ಡೇರಿ ವೃತ್ತ, ಲಕ್ಕಸಂದ್ರ ಮತ್ತು ಲ್ಯಾಂಗ್‌ಫೋರ್ಡ್‌ ಟೌನ್‌ನಲ್ಲಿ.
* ಅಫ್ಕಾನ್ಸ್‌ ಲಿಮಿಟೆಡ್‌ ಕಂಪನಿಗೆ ಗುತ್ತಿಗೆ ನೀಡಲಾಗಿದೆ
* ಮೂರು ಟಿಬಿಎಂಗಳ ಅಗತ್ಯವಿದ್ದು, ಇವುಗಳನ್ನು ತಯಾರಿಸಲು ಹೆರೆನ್‌ನೆಚ್‌ ಕಂಪನಿಗೆ ವಹಿಸಲಾಗಿದೆ. ಸದ್ಯದಲ್ಲೇ ಬರಲಿದೆ.

ಪ್ಯಾಕೇಜ್‌ 2

* ರಾಷ್ಟ್ರೀಯ ಮಿಲಿಟರಿ ಶಾಲೆಯಿಂದ ಶಿವಾಜಿನಗರ ನಿಲ್ದಾಣದವರೆಗೆ
* ಉದ್ದ– 2.76 ಕಿ.ಮೀ.
* ನೆಲದಡಿ ನಿಲ್ದಾಣಗಳು– ರಾಷ್ಟ್ರೀಯ ಮಿಲಿಟರಿ ಸ್ಕೂಲ್‌, ಎಂ.ಜಿ. ರಸ್ತೆ ಮತ್ತು ಶಿವಾಜಿನಗರ
* ಎಲ್‌ ಆ್ಯಂಡ್‌ ಟಿ ಗುತ್ತಿಗೆ ಪಡೆದಿದೆ
* ಈ ಪ್ಯಾಕೇಜ್‌ಗೆ ಅಗತ್ಯವಿರುವ ಎರಡು ಟಿಬಿಎಂ ಅವನಿ ಮತ್ತು ಲಾವಿ ಶಿವಾಜಿನಗರ ನಿಲ್ದಾಣಕ್ಕೆ ಬಂದಿವೆ.

ಪ್ಯಾಕೇಜ್‌ 3

*ಶಿವಾಜಿನಗರ ನಿಲ್ದಾಣದಿಂದ ಟ್ಯಾನರಿ ರಸ್ತೆಯಲ್ಲಿರುವ ಶಾದಿ ಮಹಲ್‌ ಶಾಫ್ಟ್‌ವರೆಗೆ
* ಉದ್ದ– 2.88 ಕಿ.ಮೀ.
* ನೆಲದಡಿ ನಿಲ್ದಾಣಗಳು– ಕಂಟೋನ್ಮೆಂಟ್ ಮತ್ತು ಪಾಟರಿ ಟೌನ್
* ಎಲ್‌ ಆ್ಯಂಡ್ ಟಿ ಗುತ್ತಿಗೆ ಪಡೆದಿದೆ
* ಇಲ್ಲಿ ಊರ್ಜಾ ಟಿಬಿಎಂ ಈಗಾಗಲೇ ಕಾರ್ಯಾರಂಭ ಮಾಡಿದ್ದು, 90 ಮೀಟರ್ ಉದ್ದ ಸುರಂಗ ಕೊರೆದಿದೆ

ಪ್ಯಾಕೇಜ್‌ 4

* ಟ್ಯಾನರಿ ರಸ್ತೆಯಲ್ಲಿರುವ ಶಾದಿ ಮಹಲ್‌ನಿಂದ ನಾಗವಾರದಲ್ಲಿರುವ ಉತ್ತರ ರ‍್ಯಾಂಪ್‌ವರೆಗೆ
* 4.59 ಕಿ.ಮೀ.
* ನೆಲದಡಿ ನಿಲ್ದಾಣಗಳು– ಟ್ಯಾನರಿ ರಸ್ತೆ, ವೆಂಕಟೇಶಪುರ, ಕಾಡುಗೊಂಡನಹಳ್ಳಿ ಮತ್ತು ನಾಗವಾರ
* ಐಟಿಡಿ ಸಿಮೆಂಟ್‌ ಇಂಡಿಯಾ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿದೆ
* ಈ ಮಾರ್ಗದಲ್ಲಿ ಎರಡು ಟಿಬಿಎಂಗಳ ಅಗತ್ಯವಿದ್ದು, ಇವುಗಳನ್ನು ತಯಾರಿಸಲು ಹೆರೆನೆಚ್‌ ಕಂಪನಿಗೆ ವಹಿಸಲಾಗಿದೆ.

ಊರ್ಜಾ ಮತ್ತು ವಿಂಧ್ಯ

* ಗುತ್ತಿಗೆದಾರರು: ಎಲ್‌ ಆ್ಯಂಡ್ ಟಿ
* ಕಾರ್ಯನಿರ್ವಹಿಸುತ್ತಿರುವ ಮಾರ್ಗ: ಕಂಟೋನ್ಮೆಂಟ್‌ ಮತ್ತು ಶಿವಾಜಿನಗರ ಸುರಂಗ ಮಾರ್ಗ ನಿಲ್ದಾಣದವರೆಗೆ
* ಕಟ್ಟರ್ ಹೆಡ್‌ನ ಸುತ್ತಳತೆ: 6.74 ಮೀಟರ್
* ಪೂರ್ಣಗೊಂಡ ಸುರಂಗ ಮಾರ್ಗದ ಒಳ ಸುತ್ತಳತೆ– 5.80 ಮೀಟರ್
* ಪ್ಯಾಕೇಜ್‌–3ರ ಅಡಿ ಈ ಟಿಬಿಎಂಗಳು ಕೆಲಸಮಾಡಲಿವೆ. ಊರ್ಜಾ ಈಗಾಗಲೇ ಕೆಲಸ ಶುರುವಾಗಿದ್ದು ಈವರೆಗೆ (ಸೆ.11ರವರೆಗೆ) 60 ಮೀಟರ್‌ ಸುರಂಗ ಕೊರೆದಿದೆ. 100 ಮೀಟರ್‌ ಬಂದ ನಂತರ, ವಿಂಧ್ಯ ಕಾರ್ಯಾರಂಭ ಮಾಡಲಿದೆ. ಅಂದರೆ, ಈ ತಿಂಗಳ ಕೊನೆಗೆ ಪ್ರಾರಂಭ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT