ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಹೊಸ ವರ್ಷಾಚರಣೆ: ಹೆಚ್ಚಿನ ಭದ್ರತೆ–ದಾಂದಲೆ ನಡೆಸುವವರ ವಶಕ್ಕೆ ಸೂಚನೆ

Published 29 ಡಿಸೆಂಬರ್ 2023, 16:47 IST
Last Updated 29 ಡಿಸೆಂಬರ್ 2023, 16:47 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವರ್ಷಾಚರಣೆಗೆ ನಗರ ಸಜ್ಜಾಗುತ್ತಿದೆ. ಸೂಕ್ಷ್ಮ ಪ್ರದೇಶ ಹಾಗೂ ಸಂಭ್ರಮಾಚರಣೆ ನಡೆಯುವ ರಸ್ತೆಗಳಲ್ಲಿ ಈ ಬಾರಿ ಹೆಚ್ಚಿನ ಭದ್ರತೆಗೆ ಪೊಲೀಸರು ಮುಂದಾಗಿದ್ದಾರೆ.

ಸಂಭ್ರಮಾಚರಣೆ ವೇಳೆ ಮದ್ಯ ಸೇವಿಸಿ ರಸ್ತೆಗಳ ಮೇಲೆ ಬಾಟಲಿ ಒಡೆಯುವುದು ಹಾಗೂ ಖಾಲಿ ಬಾಟಲಿ ಎಸೆದು ದಾಂದಲೆ ಮಾಡುವವರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳುವಂತೆ ಆಯಾ ಠಾಣೆಗಳು ಇನ್‌ಸ್ಪೆಕ್ಟರ್‌ಗಳಿಗೆ ಸೂಚನೆ ನೀಡಲಾಗಿದೆ.

ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲು ನಗರ ಪೊಲೀಸ್‌ ಆಯುಕ್ತರು, ನಗರದ ಎಲ್ಲ ವಿಭಾಗದ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.

ಹೆಚ್ಚು ಜನರು ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ ಹಾಗೂ ಇತರೆ ಸ್ಥಳಗಳ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.

ಪರಿಸ್ಥಿತಿ ಎದುರಿಸಲು ಇಲಾಖೆ ಅಧಿಕಾರಿಗಳು ಸನ್ನದ್ಧರಾಗಿರಬೇಕು. ಹೊಸ ವರ್ಷಾಚರಣೆಗೆ ಬರುವ ಯುವತಿಯರಿಗೆ ಯಾವುದೇ ತೊಂದರೆ ಆಗಬಾರದು. ಮದ್ಯ ಸೇವಿಸಿ ಕಿಡಿಗೇಡಿತನ ತೋರುವ ಯುವಕರ ಮೇಲೆ ಹದ್ದಿನ ಕಣ್ಣಿಡಬೇಕು. ಯಾವುದಾದರೂ ಅಹಿತಕರ ಘಟನೆ ನಡೆದರೆ ಆರೋಪಿಗಳನ್ನು ತಕ್ಷಣವೇ ವಶಕ್ಕೆ ಪಡೆದುಕೊಳ್ಳಬೇಕು ಎಂದು ಪೊಲೀಸ್‌ ಕಮಿಷನರ್‌ ಸೂಚನೆ ನೀಡಿದ್ದಾರೆ.

ಗಸ್ತು ವಾಹನಗಳು ಸನ್ನದ್ಧವಾಗಿ ಇರಬೇಕು. ಸಂಭ್ರಮಾಚರಣೆ ಮುಕ್ತಾಯವಾಗುವ ತನಕ ವಾಹನಗಳ ಗಸ್ತು ತಿರುಗುತ್ತಿರಬೇಕು ಎಂದು ಸೂಚನೆ ನೀಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಡಿ.31ರಂದು ರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ಕಲ್ಪಿಸಲಾಗಿದೆ.

ಮದ್ಯದ ಅಂಗಡಿಗಳ ವಹಿವಾಟಿಗೆ ರಾತ್ರಿ 11 ಗಂಟೆಯವರೆಗೂ ಅವಕಾಶ ಇದೆ. ಬಾರ್‌ ಆ್ಯಂಡ್ ರೆಸ್ಟೊರೆಂಟ್, ಪಬ್, ಹೋಟೆಲ್ ಹಾಗೂ ಇತರೆ ವ್ಯಾಪಾರ ಸ್ಥಳಗಳನ್ನು ರಾತ್ರಿ 1 ಗಂಟೆಯೊಳಗೆ ಬಂದ್ ಮಾಡಬೇಕು. ನಿಯಮ ಮೀರಿದರೆ ಕಾನೂನು ಕ್ರಮ ಜರು ಗಿಸಲಾಗುವುದು ಎಂದು ನಗರ ಪೊಲೀಸ್‌ ಕಮಿಷನರ್‌ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT