ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಕಾಮಗಾರಿಗೆ ನೈಸ್‌ ಅಡ್ಡಿ?

ಭೂಸ್ವಾಧೀನ ತಕರಾರು, ಪರಿಹಾರಕ್ಕೆ ಒತ್ತಾಯ
Last Updated 24 ಜೂನ್ 2018, 13:28 IST
ಅಕ್ಷರ ಗಾತ್ರ

ಬೆಂಗಳೂರು: ನಾಯಂಡಹಳ್ಳಿ– ಕೆಂಗೇರಿ ನಡುವಿನ ಮೆಟ್ರೊ ಕಾಮಗಾರಿ ಮುಂದುವರಿಸಲು ನೈಸ್‌ ರಸ್ತೆಯ ಭೂಮಿಯ ತಕರಾರು ಅಡ್ಡಿಯಾಗಿದೆ.

‘ಈ ಪ್ರದೇಶದಲ್ಲಿ ಸಿವಿಲ್‌ ಕಾಮಗಾರಿಗಳು ಬಹುತೇಕ ನಡೆದಿದ್ದು ಈ ವರ್ಷ ಡಿಸೆಂಬರ್‌ ಒಳಗೆ ಅಂತ್ಯವಾಗುವ ನಿರೀಕ್ಷೆ ಇದೆ. ಕೆಲವೆಡೆ ಭೂಸ್ವಾಧೀನ ಸಂಬಂಧಿಸಿದ ಸಮಸ್ಯೆ ಇದೆ. ಭೂಮಿ ರೈತರ ಹೆಸರಿನಲ್ಲಿದೆ. ಕೆಐಎಡಿಬಿಯವರು ಅದನ್ನು ನೈಸ್‌ ಕಂಪನಿಗೆ ಹಸ್ತಾಂತರಿಸಿದ್ದಾರೆ. ಇಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಭೂಮಿಗೆ ಪರಿಹಾರ ಮೊತ್ತವನ್ನು ನಿರ್ಣಯಿಸಬೇಕಿದೆ’ ಎಂದು ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ತಿಳಿಸಿದರು.

‘ನೈಸ್‌ ಸಂಸ್ಥೆ ಜತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಇದೊಂದೇ ಪ್ರದೇಶದಲ್ಲಿ ಅಲ್ಲ, ಎಲೆಕ್ಟ್ರಾನಿಕ್‌ ಸಿಟಿ, ತುಮಕೂರು ರಸ್ತೆ ಇಲ್ಲೆಲ್ಲಾ ಇದೇ ಸಮಸ್ಯೆ ಇದೆ. ಹಂತಹಂತವಾಗಿ ಅದನ್ನು ಬಗೆಹರಿಸಲಿದ್ದೇವೆ’ ಎಂದು ಅವರು ತಿಳಿಸಿದರು.

ಮೈಸೂರು ರಸ್ತೆಯಿಂದ ಮುಂದೆ (ನಾಯಂಡಹಳ್ಳಿಯಿಂದ – ಕೆಂಗೇರಿ) 7.9 ಕಿಲೋಮೀಟರ್‌ ಉದ್ದದ ಮಾರ್ಗದ ಕಾಮಗಾರಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ.

ಸಂಚಾರಕ್ಕೆ ತೊಡಕು

‘ಹಗಲು ವೇಳೆ ಕಾಮಗಾರಿ ತುಂಬಾ ನಿಧಾನಗತಿಯಲ್ಲಿ ಸಾಗುತ್ತದೆ. ಸಂಚಾರ ವ್ಯವಸ್ಥೆಗೆ ತೊಡಕಾಗುವುದರಿಂದ ನಾವು ದೊಡ್ಡಗಾತ್ರದ ಯಂತ್ರಗಳನ್ನು ಬಳಸಲು ಆಗುವುದಿಲ್ಲ. ಕ್ರೇನ್‌ ಬಳಕೆಯೂ ಕಷ್ಟವಾಗುತ್ತದೆ. ಆದ್ದರಿಂದ ರಾತ್ರಿ ಸಾಧ್ಯವಾದಷ್ಟು ವೇಗವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಕಾಮಗಾರಿ ಸ್ಥಳದಲ್ಲಿದ್ದ ಎಂಜಿನಿಯರ್‌ ಹೇಳಿದರು.

‘ಜಂಕ್ಷನ್‌ ಪ್ರದೇಶದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಸಂಚಾರಕ್ಕೆ ತೊಡಕಾಗದಂತೆ ಕಾಮಗಾರಿ ನಿರ್ವಹಿಸುತ್ತಿದ್ದೇವೆ. ಆದರೆ, ಒಮ್ಮೆಲೆ ನುಗ್ಗಿಬರುವ ವಾಹನ ಪ್ರವಾಹವನ್ನು ನಿಭಾಯಿಸುವುದು ಕಷ್ಟ. ಹಾಗಾಗಿ ನಿಧಾನಗತಿಯಲ್ಲಿ ಕೆಲಸ ಅನಿವಾರ್ಯ’ ಎಂದು ಕಾಮಗಾರಿ ಗುತ್ತಿಗೆ ಕಂಪನಿ ಎಂಜಿನಿಯರೊಬ್ಬರು ಪ್ರತಿಕ್ರಿಯಿಸಿದರು.

ನಾಯಂಡಹಳ್ಳಿ- ರಾಜರಾಜೇಶ್ವರಿ ನಗರ - ಜ್ಞಾನಭಾರತಿ - ಪಟ್ಟಣಗೆರೆ ನಿಲ್ದಾಣಗಳ ನಡುವಿನ ಕಂಬಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ.

ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ನಾಲ್ಕರಿಂದ 8 ಗಂಟೆವರೆಗಿನ ಅವಧಿಯಲ್ಲಿ ಇಲ್ಲಿ ವಿಪರೀತ ದಟ್ಟಣೆ ಇರುತ್ತದೆ. ಹೊರವಲಯವಾದ್ದರಿಂದ ದೊಡ್ಡಗಾತ್ರದ ಲಾರಿಗಳೂ ಪ್ರವೇಶಿಸುತ್ತವೆ. ಇಲ್ಲಿ ನಗರ ಪ್ರವೇಶಿಸುವುದೇ ಕಷ್ಟ ಎಂದು ಈ ಪ್ರದೇಶದ ಆಟೊ ರಿಕ್ಷಾ ಚಾಲಕರು ಹೇಳಿದರು.

ಒಟ್ಟಾರೆ ಕಾಮಗಾರಿಗೆ 1,200 ಕೋಟಿ ವೆಚ್ಚ ಅಂದಾಜಿಸಲಾಗಿದೆ. 2019ರ ಒಳಗೆ ಕಾಮಗಾರಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ಜೈನ್‌ ಹೇಳಿದರು.

ಕಾಮಗಾರಿ ಪ್ರದೇಶದಲ್ಲಿ ಛಾಯಾಗ್ರಹಣ ನಿಷೇಧ

‘ಮೆಟ್ರೊ ಪ್ರದೇಶ ನಮ್ಮದು. ಇಲ್ಲಿ ಛಾಯಾಗ್ರಹಣ ಮಾಡುವಂತಿಲ್ಲ’ ಎಂದು ನಾಯಂಡಹಳ್ಳಿ ಬಳಿ ಕಾಮಗಾರಿ ಮೇಲ್ವಿಚಾರಕರು ಆಕ್ಷೇಪಿಸಿದರು. ಇದೇ ಪ್ರದೇಶದಲ್ಲಿದ್ದ ಎಂಜಿನಿಯರ್ ಒಬ್ಬರು ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಛಾಯಾಗ್ರಹಣದ ಉದ್ದೇಶ ವಿವರಿಸಿದರೂ ಕೇಳದ ಅವರು, ‘ನೀವು ಇಲ್ಲಿ ದಲಿತರನ್ನು ಅವಮಾನಿಸುತ್ತಿದ್ದೀರಿ. ಈ ಬಗ್ಗೆ ದೂರು ಕೊಡುತ್ತೇನೆ’ ಎಂದು ಬೆದರಿಸಿದ ಸನ್ನಿವೇಶವೂ ನಡೆಯಿತು.

*ನೈಸ್‌ ಕಂಪೆನಿ ಪ್ರದೇಶದ ಭೂಸ್ವಾಧೀನ ಸಮಸ್ಯೆ ಬಗೆಹರಿಸಲು ಉನ್ನತಮಟ್ಟದ ಸಮಿತಿ ರಚಿಸಲಾಗಿದೆ.

–ಮಹೇಂದ್ರ ಜೈನ್‌, ವ್ಯವಸ್ಥಾಪಕ ನಿರ್ದೇಶಕ ಮೆಟ್ರೊ ನಿಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT