ಶನಿವಾರ, ಮೇ 28, 2022
31 °C
ಬಿಡಿಎ: 296 ನಿವೇಶನಗಳ ಹರಾಜು l ₹348 ಕೋಟಿ ವರಮಾನ

ಬಿಡಿಎ: 76 ನಿವೇಶನಗಳಿಗೆ ಬೇಡಿಕೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಾಡಪ್ರಭು ಕೆಂಪೇಗೌಡ ಬಡಾವಣೆ ಹಾಗೂ ಅರ್ಕಾವತಿ ಬಡಾವಣೆಗಳಲ್ಲಿ ನಡೆಸಿದ ನಿವೇಶನಗಳ ಇ-ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, 296 ನಿವೇಶನಗಳು ಬಿಕರಿಯಾಗಿವೆ. ಹರಾಜಿಗೆ ಇಟ್ಟಿದ್ದ 76 ನಿವೇಶನಗಳ ಖರೀದಿಗೆ ಯಾರೂ ಒಲವು ತೋರಿಲ್ಲ.

ಈ ಎರಡು ಬಡಾವಣೆಗಳ 372 ನಿವೇಶನಗಳನ್ನು ಬಿಡಿಎ ಹರಾಜಿಗೆ ಇಟ್ಟಿತ್ತು. ಈ ಪೈಕಿ ಕೆಂಪೇಗೌಡ ಬಡಾವಣೆ ನಿವೇಶನಗಳಿಗೆ ಬೇಡಿಕೆ ಕಡಿಮೆಯಿತ್ತು. ಕೆಂಪೇಗೌಡ, ಅರ್ಕಾವತಿ ಬಡಾವಣೆಗಳಲ್ಲಿ ತಲಾ 38 ನಿವೇಶನಗಳು ಮಾರಾಟವಾಗದೇ ಉಳಿದಿವೆ. ನಿಗದಿಪಡಿಸಿದ ಪ್ರಾರಂಭಿಕ ಮೊತ್ತದಿಂದ, ಕನಿಷ್ಠ ₹ 215 ಕೋಟಿ ವರಮಾನಗಳಿಸುವ ಉದ್ದೇಶವನ್ನು ಬಿಡಿಎ ಹೊಂದಿತ್ತು. ಆದರೆ, ಮಾರಾಟವಾಗಿರುವ 296 ನಿವೇಶನಗಳಿಂದ ಬಿಡಿಎಗೆ ₹ 348 ಕೋಟಿ ವರಮಾನ ಬರಲಿದೆ. 

‘ಇ ಹರಾಜು ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ನಿರೀಕ್ಷೆ ಇಟ್ಟಿದ್ದಕ್ಕಿಂತ ₹ 133 ಕೋಟಿಗಳಷ್ಟು ಅಧಿಕ ವರಮಾನ ಸಂಗ್ರಹವಾಗಿದೆ’ ಎಂದು ಬಿಡಿಎ ಆರ್ಥಿಕ ಸದಸ್ಯ ಎಸ್‌.ಎಂ.ರಾಮಪ್ರಸಾದ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 118 ಮೂಲೆ ನಿವೇಶನಗಳನ್ನು ಹರಾಜಿಗೆ ಇಡಲಾಗಿದ್ದು, ಇವುಗಳಲ್ಲಿ 80 ನಿವೇಶಗಳು ಮಾತ್ರ ಮಾರಾಟವಾಗಿವೆ. ಇವುಗಳ ಮಾರಾಟದಿಂದ ಕನಿಷ್ಠ ₹ 44.28 ಕೋಟಿ ಗಳಿಸುವ ಉದ್ದೇಶವನ್ನು ಬಿಡಿಎ ಹೊಂದಿತ್ತು. ಹರಾಜಿನಿಂದ ₹ 63.59 ಕೋಟಿ ವರಮಾನ ಬರಲಿದೆ. ನಿರೀಕ್ಷೆಗಿಂತ ₹ 19.31 ಕೋಟಿಗಳಷ್ಟು ಮೊತ್ತ ಹೆಚ್ಚುವರಿಯಾಗಿ ಸಂಗ್ರಹವಾಗಿದೆ. ನಿವೇಶನ ಖರೀದಿ ಸಾಧ್ಯವಾಗದ ಬಿಡ್‌ದಾರರಿಗೆ ಪ್ರಾರಂಭಿಕ ಠೇವಣಿಯ ಮೊತ್ತವನ್ನು ಹಿಂದಿರುಗಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಪ್ರಾಧಿಕಾರವು ತಿಳಿಸಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಪ್ರತಿ ಚದರ ಅಡಿಗೆ ₹ 6,608ರಂತೆ ನಿವೇಶನ ಮಾರಾಟವಾಗಿದ್ದು ಗರಿಷ್ಠ ಮೊತ್ತ. ಅರ್ಕಾವತಿ ಬಡಾವಣೆಯಲ್ಲಿ ಪ್ರತಿ ಚದರ ಅಡಿಗೆ ₹ 14,368 ರಂತೆ ನಿವೇಶನ ಮಾರಾಟವಾಗಿದ್ದು ಗರಿಷ್ಠ ಮೊತ್ತ. 

2022ರ ಜನವರಿ ತಿಂಗಳಲ್ಲಿ ಮತ್ತೆ ಸುಮಾರು 500 ಮೂಲೆ ನಿವೇಶನಗಳ ಹಾಗೂ 500 ಮಧ್ಯಂತರ ನಿವೇಶನಗಳ ಇ-ಹರಾಜು ನಡೆಸಲಾಗುವುದು ಎಂದು ಪ್ರಾ‌ಧಿಕಾರದ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು