ಶನಿವಾರ, ಮಾರ್ಚ್ 6, 2021
25 °C
ಎರಡನೇ ಬಾರಿ ಪರಿಷ್ಕೃತ ಆದೇಶ

ಮಾಸ್ಕ್‌ ಧರಿಸದವರಿಗೆ ದಂಡದ ಮೊತ್ತವನ್ನು ₹ 200ಕ್ಕೆ ಇಳಿಸಿದ ಬಿಬಿಎಂಪಿ

ಪ್ರಜಾವಾಣಿ ವಾರ್ತೆ ಬೆಂಗಳೂರು Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖಗವಸು ಧರಿಸದೆಯೇ ಸಾರ್ವಜನಿಕ ಪ್ರದೇಶದಲ್ಲಿ ಅಡ್ಡಾಡುವವರಿಗೆ ವಿಧಿಸುವ ದಂಡದ ಮೊತ್ತವನ್ನು ಬಿಬಿಎಂಪಿ ₹ 200ಕ್ಕೆ ಇಳಿಸಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಐದಕ್ಕಿಂತ ಹೆಚ್ಚು ಸಿಬ್ಬಂದಿ ಕೆಲಸ ಮಾಡುವ ಕಚೇರಿಗಳಲ್ಲಿ ಕೋವಿಡ್‌ 19 ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಧರಿಸುವುದನ್ನು ಬಿಬಿಎಂಪಿ ಕಡ್ಡಾಯ ಮಾಡಿತ್ತು. ಇದನ್ನು ಪಾಲಿಸದವರಿಗೆ ದಂಡ ವಿಧಿಸುವ ಬಗ್ಗೆ ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್‌ ಏಪ್ರಿಲ್‌ 30ರಂದು ಮೊದಲ ಆದೇಶ ಹೊರಡಿಸಿದ್ದರು. ಅದರ ಪ್ರಕಾರ ಮೊದಲ ಬಾರಿ ಈ ತಪ್ಪೆಸಗಿದವರಿಗೆ ₹ 1000 ದಂಡ ಹಾಗೂ ಎರಡನೇ ಬಾರಿ ಈ ತಪ್ಪೆಸಗಿದವರಿಗೆ ₹ 2000 ದಂಡ ವಿಧಿಸಲು ಶಿಫಾರಸು ಮಾಡಿದ್ದರು.

ಈ ಆದೇಶಕ್ಕೆ ಸ್ಪಷ್ಟೀಕರಣ ನೀಡಿ ಮೇ 2ರಂದು ಮತ್ತೊಂದು ಹೊರಡಿಸಿದ ಆಯುಕ್ತರು, ‘ಸುರಕ್ಷತಾ ಕ್ರಮವಾಗಿ ಮೂಗು ಹಾಗೂ ಬಾಯಿಯನ್ನು ಮುಚ್ಚಲು ಬಟ್ಟೆಯನ್ನು ಸುತ್ತಿಕೊಂಡರೂ ಅದನ್ನೂ ಮಾಸ್ಕ್‌ ಎಂದೇ ಪರಿಗಣಿಸಲಾಗುತ್ತದೆ. ಮನೆಯಲ್ಲೇ ಬಟ್ಟೆಯಲ್ಲಿ ತಯಾರಿಸಿದ ಮುಖಗವಸನ್ನೂ ಸಾರ್ವಜನಿಕರು ಧರಿಸಬಹುದು. ಸ್ಕಾರ್ಫ್‌ ಅಥವಾ ಟವೆಲ್‌ ಅನ್ನು ಮೂಗು ಮತ್ತು ಬಾಯಿಗೆ ಅಡ್ಡಿಕಟ್ಟಿಕೊಳ್ಳಬಹುದು’ ಎಂದು ಸ‌್ಪಷ್ಟಪಡಿಸಿದ್ದರು.

ಹಿರಿಯು ಆರೋಗ್ಯ ಪರಿವೀಕ್ಷಕರಿಗೆ, ಕಿರಿಯ ಆರೋಗ್ಯ ಪರಿವೀಕ್ಷಕರಿಗೆ ಆರೋಗ್ಯ ಮೇಲ್ವಿಚಾರಕರಿಗೆ ಹಾಗೂ ಮಾರ್ಷಲ್‌ಗಳಿಗೆ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುವ ಅಧಿಕಾರವನ್ನು ನೀಡಲಾಗಿತ್ತು.

ಈ ಬಗ್ಗೆ ಮಂಗಳವಾರ ಮತ್ತೆ ಪರಿಷ್ಕೃತ ಆದೇಶ ಹೊರಡಿಸಿರುವ ಆಯುಕ್ತರು, ‘ರಾಜ್ಯ ಸರ್ಕಾರ ಮೇ 2ರಂದು ಹೊರಡಿಸಿದ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತ ಅಧಿಸೂಚನೆ ಪ್ರಕಾರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್‌ ಧರಿಸುವುದನ್ನು ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಜನರು ಪರಸ್ಪರ 1 ಮೀ ಅಂತರ ಕಾಪಾಡುವುದನ್ನು ಕಡ್ಡಾಯ ಮಾಡಲಾಗಿದೆ. ಆದೇಶ ಪಾಲಿಸದವರಿಂದ ಸ್ಥಳದಲ್ಲೇ ₹ 200 ದಂಡವನ್ನು ವಸೂಲಿ ಮಾಡಲು ಆರೋಗ್ಯ ಪರಿವೀಕ್ಷಕರಿಗೆ ಅಧಿಕಾರ ನೀಡಲಾಗಿದೆ. ಹಾಗಾಗಿ ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲೂ  ಈ ತಪ್ಪು ಎಸಗುವವರಿಗೆ ₹ 200 ದಂಡ ವಿಧಿಸಲಾಗುತ್ತದೆ. ಪ್ರತಿ ಬಾರಿ ತಪ್ಪೆಸಗಿದಾಗಲೂ ಇಷ್ಟೇ ಪ್ರಮಾಣದ ದಂಡ ವಸೂಲಿ ಮಾಡಲಾಗುವುದು’ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು