ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋ ಪಾರ್ಕಿಂಗ್‌ನಲ್ಲಿ ‘ಕಿರಿಕ್’ ಕಾರು !

ಪೊಲೀಸರಿಂದ ಕರೆ ಬರುತ್ತಿದ್ದಂತೆಯೇ ವಾಹನ ತೆಗೆಸಿದ ರಿಷಬ್ ಶೆಟ್ಟಿ
Last Updated 9 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಿರಿಕ್ ಪಾರ್ಟಿ’ ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಆಡಿ ಕಾರನ್ನು ‘ನೋ ಪಾರ್ಕಿಂಗ್‌’ ಪ್ರದೇಶದಲ್ಲಿ ನಿಲ್ಲಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ’ ಎಂದು ಜೆ.ಪಿ.ನಗರ 6ನೇ ಹಂತದ ನಿವಾಸಿ ಧನಂಜಯ್ ಪದ್ಮನಾಭಾಚಾರ್ ಎಂಬುವರು ನಗರ ಪೊಲೀಸರಿಗೆ ಫೇಸ್‌ಬುಕ್ ಮೂಲಕ ಬುಧವಾರ ದೂರು ನೀಡಿದ್ದಾರೆ.

ಆದರೆ, ರಕ್ಷಿತ್ ಶೆಟ್ಟಿ ಅವರು ವರ್ಷದ ಹಿಂದೆಯೇ ಆ ಕಾರನ್ನು ಸ್ನೇಹಿತ ರಿಷಬ್‌ ಶೆಟ್ಟಿ ಅವರಿಗೆ ಮಾರಾಟ ಮಾಡಿದ್ದರು ಎಂದು ಗೊತ್ತಾಗಿದೆ.

ದೂರಿನನ್ವಯ ಸ್ಥಳಕ್ಕೆ ತೆರಳಿದ ಜಯನಗರ ಸಂಚಾರ ಪೊಲೀಸರು, ರಿಷಬ್‌ ಅವರಿಗೆ ಕರೆ ಮಾಡಿ ಅಲ್ಲಿಂದ ಕಾರು ತೆಗೆಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಿಷಬ್, ‘ನೋ ಪಾರ್ಕಿಂಗ್ ಏರಿಯಾ ಎಂದು ಗೊತ್ತಿರಲಿಲ್ಲ. ತಪ್ಪು ಗೊತ್ತಾದ ಕೂಡಲೇ ಚಾಲಕನಿಗೆ ಹೇಳಿ ಅಲ್ಲಿಂದ ಕಾರು ತೆಗೆಸಿದ್ದೇನೆ’ ಎಂದಿದ್ದಾರೆ.

‘ಜೆ.ಪಿ.ನಗರದ 6ನೇ ಹಂತದಲ್ಲಿರುವ ಬಾಬಿ ಸ್ಟುಡಿಯೊದಲ್ಲಿ ನನ್ನ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ’ ಸಿನಿಮಾದ ರೀ ರೆಕಾರ್ಡಿಂಗ್ ಕೆಲಸ ನಡೆಯುತ್ತಿದೆ. ಸ್ಟುಡಿಯೊ ಇರುವ ರಸ್ತೆಯಲ್ಲಿ ವಾಹನ ನಿಲ್ಲಿಸಲು ಜಾಗವಿರಲಿಲ್ಲ’ ಎಂದು ರಿಷಬ್ ಹೇಳಿದರು.

‘ನನ್ನ ಕಾರಿನಿಂದ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಹೀಗಿದ್ದರೂ, ಯಾರೋ ಕಾರಿನ ಫೋಟೊ ತೆಗೆದು ಫೇಸ್‌ಬುಕ್‌ಗೆ ಹಾಕಿದ್ದರು. ನನಗೂ ಸಾಮಾಜಿಕ ಜವಾಬ್ದಾರಿಯ ಅರಿವಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಅಜಿತಾಬ್‌ ನಾಪತ್ತೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಬೆಂಗಳೂರು: ಟೆಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಈ ಕುರಿತಂತೆ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಮುಕ್ತಾಯಗೊಳಿಸಿತು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ‘ಸಿಐಡಿ ಪೊಲೀಸರು ತನಿಖೆಯಲ್ಲಿ ಕಿಂಚಿತ್ತೂ ಲೋಪವಿಲ್ಲದೆ ತಮ್ಮ ಕರ್ತವ್ಯ ಪೂರೈಸಿದ್ದಾರೆ. ಅವರ ಮೇಲೆ ಭರವಸೆ ಇಟ್ಟು ಕಾಲಾವಕಾಶ ನೀಡಿದರೆ ತನಿಖೆಗೆ ತಾರ್ಕಿಕ ಅಂತ್ಯ ಕಾಣಿಸಲಾಗುವುದು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಇದೊಂದು ಅಂತರರಾಜ್ಯಗಳ ಪೊಲೀಸ್ ವ್ಯಾಪ್ತಿಗೆ ಒಳಪಟ್ಟ ಪ್ರಕರಣ. ಸಿಐಡಿ ಪೊಲೀಸರು ದೆಹಲಿ, ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ತೆರಳಿ ತನಿಖೆ ನಡೆಸಿರುವುದು ವರದಿ ನೋಡಿದರೆ ವೇದ್ಯವಾಗುತ್ತದೆ. ಅಂತೆಯೇ ಈ ಬಗ್ಗೆ ಕೋರ್ಟ್‌ಗೆ ತೃಪ್ತಿ ಇದೆ. ಆಗಲಿ ನೋಡೋಣ’ ಎಂದರು.

ಕುಮಾರ್ ಅಜಿತಾಬ್ 2017ರ ಡಿಸೆಂಬರ್ 18ರ‌ ಸಂಜೆ 6.30ಕ್ಕೆ ತಮ್ಮ ಮನೆಯಿಂದ ಹೊರ ಹೋದವರು ಈವರೆಗೂ ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT