ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಲ್‌ ಅಧಿಕಾರಿ ಅಧ್ಯಕ್ಷತೆಯಲ್ಲಿ ವಾರ್ಡ್‌ಗೊಂದು ಸಮಿತಿ

ಪಾಲಿಕೆ ಸದಸ್ಯರಿಲ್ಲದೇ ನಿರ್ವಾತ ಸೃಷ್ಟಿಯಾಗುವುದನ್ನು ತಡೆಯಲು ಕ್ರಮ ಕೈಗೊಂಡ ಬಿಬಿಎಂಪಿ ಆಯುಕ್ತರು
Last Updated 13 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಾಲಿಕೆ ಸದಸ್ಯರ ಅವಧಿ ಮುಕ್ತಾಯವಾದ ಬಳಿಕ ವಾರ್ಡ್‌ಗಳಲ್ಲಿ ಸಾರ್ವಜನಿಕ ಸೇವೆ ನಿರ್ವಹಣೆಯಲ್ಲಿ ನಿರ್ವಾತ ಸೃಷ್ಟಿಯಾಗುವುದನ್ನು ತಡೆಯಲುಬಿಬಿಎಂಪಿಯು ವಾರ್ಡ್‌ಗೊಬ್ಬರು ನೋಡಲ್‌ ಅಧಿಕಾರಿಯನ್ನು ನೇಮಿಸಲಿದೆ. ಜನರ ಕುಂದುಕೊರತೆ ನಿವಾರಣೆಗಾಗಿ ನೋಡಲ್‌ ಅಧಿಕಾರಿ ನೇತೃತ್ವದಲ್ಲಿ ವಾರ್ಡ್‌ ಮಟ್ಟದಲ್ಲಿ ಸಮಿತಿ ರಚನೆಯಾಗಲಿದೆ.

ಈ ಕುರಿತು ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಇದುವರೆಗೆ ಪಾಲಿಕೆ ಸದಸ್ಯರೇ ಜನರ ಆಗುಹೋಗುಗಳಿಗೆ ಸ್ಪಂದಿಸುತ್ತಿದ್ದರು. ಅವರು ಇಲ್ಲ ಎಂಬ ಕೊರತೆ ಜನರನ್ನು ಕಾಡಬಾರದು. ಆಯಾ ವಾರ್ಡ್‌ನಲ್ಲಿ ನೆಲೆಸಿರುವ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ವಲಯಗಳ ಮುಖ್ಯ ಎಂಜಿನಿಯರ್‌ಗಳು, ಇತರ ಮುಖ್ಯ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಹಾಗೂ ಉಪ ಆಯುಕ್ತರನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಬಹುದು. ಒಂದಕ್ಕಿಂತ ಹೆಚ್ಚು ಅಧಿಕಾರಿಗಳು ಒಂದೇ ವಾರ್ಡ್‌ನಲ್ಲಿ ನೆಲೆಸಿದ್ದರೆ, ಹಿರಿತನದ ಆಧಾರದಲ್ಲಿ ನೋಡಲ್‌ ಅಧಿಕಾರಿಯನ್ನು ಆಯ್ಕೆ ಮಾಡಬಹುದು.ಸೋಮವಾರ ಸಂಜೆ ಒಳಗೆ ನೋಡಲ್‌ ಅಧಿಕಾರಿಗಳ ಪಟ್ಟಿ ಕೈಸೇರಬೇಕು’ ಎಂದು ಆಯುಕ್ತರು ಸೂಚಿಸಿದ್ದಾರೆ.

ವಾರ್ಡ್‌ ಮಟ್ಟದಲ್ಲಿ ಸಮಿತಿ: ‘ವಾರ್ಡ್‌ನಲ್ಲಿ ಸಕ್ರಿಯವಾಗಿರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ (ಆರ್‌ಡಬ್ಲ್ಯುಎ) ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು. ನೋಡಲ್‌ ಅಧಿಕಾರಿ ಅದರ ಅಧ್ಯಕ್ಷರಾಗಿರುತ್ತಾರೆ. ಸಹಾಯಕ ಎಂಜಿನಿಯರ್‌, ಹಿರಿಯ ಆರೋಗ್ಯ ಪರಿವೀಕ್ಷಕರು, ಕಿರಿಯ ಎಂಜಿನಿಯರ್‌ಗಳಲ್ಲಿ ಒಬ್ಬರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ’ ಎಂದು ಆಯುಕ್ತರು ತಿಳಿಸಿದರು.

‘ಸಮಿತಿಯು ರಸ್ತೆಗಳು, ಉದ್ಯಾನಗಳು, ಮೈದಾನಗಳು ಮತ್ತು ರಾಜಕಾಲುವೆಗಳ ನಿರ್ವಹಣೆಯ ಉಸ್ತುವಾರಿ ವಹಿಸಿಕೊಳ್ಳಲಿದೆ. ಕಸ ವಿಲೇವಾರಿ ಹಾಗೂ ತೆರಿಗೆ ಸಂಗ್ರಹಣೆಯ ಮೇಲ್ವಿಚಾರಣೆ ನಡೆಸಲಿದೆ. ತಿಂಗಳ ಮೊದಲ ಅಥವಾ ಮೂರನೇ ಶನಿವಾರ ಸಭೆ ಸೇರಿ ಜನರ ಅಹವಾಲು ಆಲಿಸಲಿದೆ. ಈ ಕುರಿತು ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರ ಜೊತೆ ಸಮಾಲೋಚನೆ ನಡೆಸಿ ವಿಸ್ತೃತ ಸುತ್ತೋಲೆಯನ್ನುಶೀಘ್ರದಲ್ಲೇ ಹೊರಡಿಸಲಿದ್ದೇವೆ’ ಎಂದು ಆಯುಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT