ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳು ಕಲ್ಯಾಣ ಮಂಟಪವನ್ನು ಮುಚ್ಚಲು ಮಾಲೀಕರಿಗೆ ಸೂಚನೆ: ಆರ್. ಅಶೋಕ

ಅಪಾರ್ಟ್‌ಮೆಂಟ್‌ಗಳಲ್ಲಿ ಲಸಿಕೆ ವಿತರಣೆಗೆ ಇಂದಿನಿಂದ ಚಾಲನೆ
Last Updated 10 ಏಪ್ರಿಲ್ 2021, 9:51 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಸೋಂಕಿತರು ಭಯಭೀತ ಆಗಬಾರದು. ಸೋಂಕಿತರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿ, ಉತ್ತಮ ಚಿಕಿತ್ಸೆ ನೀಡಲಾಗುವುದು. ಹೋಮ್‌ ಐಸೋಲೇಷನ್ ಆದವರಿಗೆ ಸೀಲ್ ಹಾಕಬೇಕೇ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಯಾವುದೇ ಸಮಸ್ಯೆ ಆಗದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

ದಕ್ಷಿಣ ವಲಯದಲ್ಲಿ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಲಯ ಉಸ್ತುವಾರಿಯೂ ಆಗಿರುವ ಅಶೋಕ ಅವರು ಸಂಸದ ತೇಜಸ್ವಿಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ, ಕೃಷ್ಣಪ್ಪ, ಬಿಬಿಎಂಪಿ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ಪ್ರಮುಖರ ಜೊತೆ ಶನಿವಾರ ಸಭೆ ನಡೆಸಿದರು.

ಬಳಿಕ ಮಾತನಾಡಿದ ಅವರು, ‘ಆರು ತಿಂಗಳು ಕಲ್ಯಾಣ ಮಂಟಪ ಮುಚ್ಚಲು ಮಾಲೀಕರಿಗೆ ಸೂಚನೆ ನೀಡಲಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಇಂದಿನಿಂದ ಲಸಿಕೆ ವಿತರಣೆಗೆ ಚಾಲನೆ ನೀಡಲಾಗುವುದು. ಲಾಕ್ ಡೌನ್ ಮಾಡುವ ಯಾವುದೇ ಪ್ರಸ್ತಾಪ ಇಲ್ಲ’ ಎಂದರು.

‘ಸೋಂಕಿನಿಂದ ಸಾವಿನ ಸಂಖ್ಯೆ ಕೂಡ ಏರಿಕೆ ಆಗುತ್ತಿದೆ. ಜನ ನಿರ್ಲಕ್ಷ್ಯ ವಹಿಸಬಾರದು. ಜೀವ ಉಳಿದರೆ ಹಬ್ಬ ಮಾಡಬಹುದು’ ಎಂದೂ ಸಲಹೆ ನೀಡಿದರು.

ರಾತ್ರಿ ಕರ್ಫ್ಯೂ ವಿಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಟೀಕಿಸಿದ ವಿರೋಧ ಪಕ್ಷ ಕಾಂಗ್ರೆಸ್‌ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಅಶೋಕ, ‘ಪ್ರತಿಯೊಂದರಲ್ಲೂ ವಿರೋಧ ಮಾಡಲು ವಿರೋಧ ಪಕ್ಷಗಳು ಹೊರಟಿವೆ. ಮಹಾರಾಷ್ಟ್ರದಲ್ಲಿ ಅವರದ್ದೇ ಸರ್ಕಾರ ಇದೆ. ಅಲ್ಲಿ ಲಾಕ್ ಡೌನ್ ಏಕೆ ಹೇರಿದ್ದಾರೆ. ಇದು ವಿರೋಧ ಪಕ್ಷಗಳ ಕಣ್ಣಿಗೆ ಕಾಣಿಸುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ‘ನಗರದಲ್ಲಿ ರಾತ್ರಿ ಕರ್ಫ್ಯೂ ಇಂದಿನಿಂದ ಆರಂಭವಾಗುತ್ತಿದೆ. ಇದನ್ನು ಯಾರೂ ಕೂಡ ನಿರ್ಲಕ್ಷ್ಯ ಮಾಡಬಾರದು. ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ನಗರದಲ್ಲಿ ದಿನಕ್ಕೆ ಐದಾರು ಸಾವಿರ ಪ್ರಕರಣಗಳು ವರದಿಯಾಗುತ್ತಿದೆ. ಹೀಗಾಗಿ, ಪರೀಕ್ಷೆ ಹಾಗೂ ವ್ಯಾಕ್ಸಿನ್ ಹಂಚಿಕೆ ಹೆಚ್ಚಿಸಲಾಗುತ್ತಿದೆ’ ಎಂದರು.

‘ಪಾಲಿಕೆ ವ್ಯಾಪ್ತಿಯ ಎಲ್ಲ ಎಂಟೂ ವಲಯಗಳಲ್ಲೂ ಕೇರ್ ಸೆಂಟರ್ ತೆರೆಯಲಾಗುವುದು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಜೊತೆಗೆ ನಿರಂತರ ಚರ್ಚೆ ನಡೆಸಲಾಗುತ್ತಿದೆ. ಕಳೆದ ಅವಧಿಯಂತೆ ಈ ಬಾರಿಯೂ ಅವರು ನಮ್ಮ ಜೊತೆ ಕೈ ಜೋಡಿಸಿದ್ದಾರೆ’ ಎಂದರು.

‘ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ಮನಸ್ಸು ಮಾಡಿದರೆ ಸೋಂಕು ನಿಯಂತ್ರಣ ಕಷ್ಟದ ಕೆಲಸವಲ್ಲ. ಈಗಾಗಲೇ ಖಾಸಗಿ ಆಸ್ಪತ್ರೆಗಳು ಬೆಡ್‌ಗಳನ್ನು ಸರ್ಕಾರಕ್ಕೆ ನೀಡಿವೆ. ಮುಂದಿನ ಬೆಳವಣಿಗೆಗೆ ತಕ್ಕಂತೆ ಬಿಬಿಎಂಪಿ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT