ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಸಗಿ ಲೇಔಟ್‌ ಡೆವಲಪರ್‌ಗಳಿಗೆ ನೋಟಿಸ್‌: ಡಿಸಿಎಂ ಡಿ.ಕೆ. ಶಿವಕುಮಾರ್‌

ಮೂಲಸೌಕರ್ಯ ಕಲ್ಪಿಸದವರಿಂದ ಜನರಿಗೆ ತೊಂದರೆ: ಡಿಸಿಎಂ ಡಿ.ಕೆ. ಶಿವಕುಮಾರ್‌
Published 20 ಮೇ 2024, 16:12 IST
Last Updated 20 ಮೇ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ಮೂಲಸೌಕರ್ಯಗಳನ್ನು ಸರಿಯಾಗಿ ಕಲ್ಪಿಸದ ಖಾಸಗಿ ಲೇಔಟ್‌ ಡೆವಲಪರ್‌ಗಳಿಗೆ ನೋಟಿಸ್‌ ಜಾರಿ ಮಾಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಯಲಹಂಕ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್‌, ವಿಲ್ಲಾಗಳಿಗೆ ನೀರು ನುಗ್ಗಿರುವ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಅವ್ಯವಸ್ಥೆಗಳಿರುವ ಲೇಔಟ್‌ಗಳ ಡೆವಲಪರ್‌ಗಳಿಗೆ ನೋಟಿಸ್‌ ನೀಡಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

‘ಖಾಸಗಿ ಲೇಔಟ್‌ಗಳಲ್ಲಿ ನೀರು ಹರಿಯಲು ಸೂಕ್ತ ವ್ಯವಸ್ಥೆ ರೂಪಿಸದೆ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ಹಾಗೂ ಒಳಚರಂಡಿ ನೀರನ್ನು ಒಟ್ಟಿಗೆ ಬಿಟ್ಟಿರುವ ಕಾರಣಕ್ಕೆ ಸಮಸ್ಯೆಗಳಾಗುತ್ತಿವೆ. ಬಡಾವಣೆಗಳನ್ನು ನಿರ್ಮಿಸುವಾಗ ಸೂಕ್ತ ವ್ಯವಸ್ಥೆ ಮಾಡದಿರುವುದು ಡೆವಲಪರ್‌ಗಳ ತಪ್ಪು. ಜನರಿಂದ ಹಣ ಪಡೆದು ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದಿರುವುದು ಸರಿಯಲ್ಲ. ಡೆವಲಪರ್‌ಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲದ್ದರಿಂದ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಂದ ಆಗಿರುವ ತೊಂದರೆ ನಿವಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ಹೇಳಿದರು.

‘ಪರಿಹಾರ ನೀಡಬೇಕು ಎಂಬ ಉದ್ದೇಶದಿಂದಲೇ ತೊಂದರೆಯಾದ ಜಾಗಗಳಿಗೆ ಭೇಟಿ ನೀಡಿದ್ದೇನೆ. ಪ್ರತಿ ವರ್ಷ ಎಲ್ಲೆಲ್ಲಿ ಮಳೆಯಿಂದ ತೊಂದರೆ ಆಗುತ್ತದೆಯೋ ಆ ಪ್ರದೇಶಗಳನ್ನು ಗುರುತಿಸಿ ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು. ಎಲ್ಲೆಲ್ಲಿ ಖಾಸಗಿ ಲೇಔಟ್‌ನವರು ರಾಜಕಾಲುವೆ ಒತ್ತುವರಿ ಮಾಡಿದ್ದಾರೋ ಅಲ್ಲಿ ಕ್ರಮ ಕೈಗೊಳ್ಳಲಾಗುವುದು. ಒಳಚರಂಡಿ ವ್ಯವಸ್ಥೆ ಅಳವಡಿಸದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು’ ಎಂದು ತಿಳಿಸಿದರು.

‘ಎರಡು ವರ್ಷಗಳ ಹಿಂದೆ ಈ ಭಾಗದಲ್ಲಿ ಕಾಲುವೆ ಇರಲಿಲ್ಲ. ಪಾಲಿಕೆ ವತಿಯಿಂದ ಕಾಲುವೆ ನಿರ್ಮಿಸಿ ಅದನ್ನು ಮುಂದೆ ತೆಗೆದುಕೊಂಡು ಹೋಗದೆ ಇಲ್ಲಿಗೆ ನಿಲ್ಲಿಸಿದ್ದಾರೆ. ಇದರಿಂದಾಗಿ ಸಣ್ಣ ಮಳೆಗೆ ಮನೆಗಳಿಗೆ ನೀರು ನುಗ್ಗಿದೆ. ಈ ಕಾಲುವೆಯನ್ನು ವಿಸ್ತರಿಸಿ, ಮಳೆ ನೀರು ಕಾಲುವೆ ಹಾಗೂ ಚರಂಡಿಯನ್ನು ಪ್ರತ್ಯೇಕ ಮಾಡಬೇಕು. ಪುಟ್ಟೇನಹಳ್ಳಿ ಕೆರೆಗೆ ಕೊಳಚೆ ನೀರು ಬಿಡಬಾರದು’ ಎಂದು ಯಲಹಂಕದ ರಮಣಶ್ರೀ ಗಾರ್ಡೇನಿಯಾ ಲೇಔಟ್‌ ಸ್ಥಳೀಯ ನಿವಾಸಿಗಳು ಮನವಿ ಮಾಡಿದರು.

‘ಮುಂದೆ ಅರಣ್ಯ ಇಲಾಖೆ ಜಾಗ ಇರುವ ಕಾರಣ, ಅವರು ಕಾಲುವೆಯನ್ನು ಮುಂದೆ ವಿಸ್ತರಿಸಲು ಅನುಮತಿ ನೀಡಿರಲಿಲ್ಲ. ಪಾಲಿಕೆ ಅಧಿಕಾರಿಗಳು ಅರಣ್ಯ ಅಧಿಕಾರಿಗಳ ಜತೆ ಸಭೆ ಮಾಡಿದ್ದು, ಕಾಲುವೆಯನ್ನು ಮುಂದಕ್ಕೆ ವಿಸ್ತರಿಸಲು ಅನುಮತಿ ಪಡೆಯಲಾಗಿದೆ. ಮಳೆ ನೀರು ಹಾಗೂ ಚರಂಡಿ ನೀರು ಹರಿಯಲು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುವುದು. ಆದಷ್ಟು ಬೇಗ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದರು.

‘ಬೆಂಗಳೂರಿನ ಯಾವುದೇ ಕೆರೆಗಳಿಗೆ ಕೊಳಚೆ ನೀರು ಹರಿಸುವುದಿಲ್ಲ. ಸಂಸ್ಕರಿಸಿದ ನೀರನ್ನು ಮಾತ್ರ ಬಿಡಲಾಗುವುದು. ಈ ಬಾರಿ ಏಳು ಸಾವಿರ ಕೊಳವೆಬಾವಿ ಬತ್ತಿದ ಪರಿಣಾಮ ನೀರಿನ ಸಮಸ್ಯೆ ಎದುರಾಗಿದ್ದು, ಮುಂದೆ ಇಂತಹ ಸಮಸ್ಯೆ ಬಾರದಂತೆ ಎಚ್ಚರ ವಹಿಸಲಾಗುವುದು’ ಎಂದರು.

ರಾಚೇನಹಳ್ಳಿ ಕೆರೆ ಪಕ್ಕದಲ್ಲಿರುವ ಜವಾಹರಲಾಲ್ ನೆಹರೂ ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಹಾದುಹೋಗಿರುವ ರಾಜಕಾಲುವೆ ನಿರ್ಮಾಣ ಕಾಮಗಾರಿಯನ್ನು ಡಿ.ಕೆ. ಶಿವಕುಮಾರ್‌ ಪರಿಶೀಲನೆ ನಡೆಸಿದರು.  ‘ಒಂದು ತಿಂಗಳ ಒಳಗಾಗಿ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಷ್ಟರ ಒಳಗಾಗಿ ಮತ್ತೆ ಮಳೆ ಬಂದರೆ ಪ್ರವಾಹ ಪರಿಸ್ಥಿತಿ ತಡೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

ಗೆದ್ದಲಹಳ್ಳಿ ಬಳಿ ರಾಜಕಾಲುವೆ ಕಾಮಗಾರಿ ಪರಿಶೀಲನೆ ನಡೆಸಿದ ಶಿವಕುಮಾರ್, ‘ಖಾಸಗಿ ಬಡಾವಣೆ ನಿರ್ಮಿಸಿದವರು ಸರಿಯಾದ ರೀತಿಯಲ್ಲಿ ಮೂಲಸೌಕರ್ಯ ಒದಗಿಸದ ಕಾರಣ ನಿಮ್ಮ ಮನೆಗಳಿಗೆ ನೀರು ನುಗ್ಗಿದೆ. ಪರಿಹಾರ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.‌

ಯಲಹಂಕದಲ್ಲಿ ಮಳೆ ನೀರು ನುಗ್ಗಿದ ವಿಲ್ಲಾಗಳಿರುವ ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹಾಗೂ ವಲಯ ಅಧಿಕಾರಿಗಳು ಸೋಮವಾರ ಭೇಟಿ ನೀಡಿದರು.
ಯಲಹಂಕದಲ್ಲಿ ಮಳೆ ನೀರು ನುಗ್ಗಿದ ವಿಲ್ಲಾಗಳಿರುವ ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹಾಗೂ ವಲಯ ಅಧಿಕಾರಿಗಳು ಸೋಮವಾರ ಭೇಟಿ ನೀಡಿದರು.

‘ಬಿಬಿಎಂಪಿ ಚುನಾವಣೆ ನಡೆಸುವ ಆಸೆ ಇದೆ’

‘ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂಬ ಅಭಿಲಾಷೆ ನಮಗೂ ಇದೆ. ಆದರೆ ಈ ವಿಚಾರ  ನ್ಯಾಯಾಲಯದಲ್ಲಿ ಇರುವುದರಿಂದ ತಡವಾಗುತ್ತಿದೆ’ ಎಂದು ಉ‍ಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. ‘ಬೆಂಗಳೂರಿಗೆ ಒಂದು ಒಳ್ಳೆಯ ಪ್ರವಾಸಿ ಕೇಂದ್ರ ಬೇಕು ಎನ್ನುವ ಆಲೋಚನೆಯಿಂದ ಸ್ಕೈಡೆಕ್‌ ನಿರ್ಮಾಣ ಮಾಡಲು ಅಧಿಕಾರಿಗಳು ಯೋಜನಾ ವರದಿ ನೀಡಿದ್ದಾರೆ. ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದ್ದು ಪಾರ್ಕಿಂಗ್ ಜಾಗದ ಲಭ್ಯತೆ ಮತ್ತಿತರ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಆರಂಭಿಸಲಾಗುವುದು’ ಎಂದರು.

‘ವಿಲ್ಲಾಗಳಿಗೆ ಒಳಚರಂಡಿ ವ್ಯವಸ್ಥೆ ಇಲ್ಲ’

‘ಯಲಹಂಕದಲ್ಲಿರುವ ರಮಣಶ್ರೀ ಗಾರ್ಡೇನಿಯಾ ಲೇಔಟ್ ಹಾಗೂ ನಾರ್ತ್ ಹುಡ್ ವಿಲ್ಲಾ ಪ್ರದೇಶದಲ್ಲಿ ಒಳಚರಂಡಿ ಮಳೆ ನೀರು ಹರಿಯುವ ವ್ಯವಸ್ಥೆ ಇಲ್ಲದ್ದರಿಂದ ನೀರು ನುಗ್ಗಿದೆ. ಮಳೆ ನೀರು ನಿಲ್ಲದಂತೆ 520 ಮೀಟರ್ ಉದ್ದದ 1600 ಎಂ.ಎಂ ಪೈಪ್ ಅಳವಡಿಸಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ರಮಣಶ್ರೀ ಗಾರ್ಡೇನಿಯಾ ಲೇಔಟ್‌ನಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ಸುಮಾರು 22 ವಿಲ್ಲಾಗಳಿಗೆ ನೀರು ನುಗ್ಗಿ ಸಮಸ್ಯೆಯುಂಟಾಗಿದ್ದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಪುಟ್ಟೇನಹಳ್ಳಿ ಕೆರೆಯು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ. ಈ ಕೆರೆಯ ಪಕ್ಕದ ಪ್ರದೇಶದಲ್ಲಿ ವಿಲ್ಲಾ ಹಾಗೂ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿದ್ದು ಒಳಚರಂಡಿ ವ್ಯವಸ್ಥೆ ಇಲ್ಲ. ರಾಜಕಾಲುವೆ ನಿರ್ಮಾಣ ಮಾಡಿ ಕೆರೆಗೆ ಮಳೆನೀರನ್ನು ಬಿಡಲು ಅರಣ್ಯ ಇಲಾಖೆಯ ವನ್ಯಜೀವಿ ಮಂಡಳಿಯಿಂದ ಅನುಮತಿ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಕೆರೆಯ ವಾಯು ವಿಹಾರ ಮಾರ್ಗದ ಪಕ್ಕದಲ್ಲಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸಲಾಗುವುದು’ ಎಂದರು. ‘ರಮಣಶ್ರೀ ಲೇಔಟ್ ಪ್ರದೇಶದಲ್ಲಿ ಒಂದೂವರೆ ವರ್ಷದ ಹಿಂದೆ ಯಾವುದೇ ಮನೆಗಳು ಇಲ್ಲದ್ದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ಇದೀಗ ವಿಲ್ಲಾ ಹಾಗೂ ಅ‍ಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿದ್ದು ಮಳೆ ನೀರು ನಿಲ್ಲುವಂತಾಗಿದೆ. ಸ್ಥಳದಲ್ಲಿ ತಾತ್ಕಾಲಿಕವಾಗಿ ಪಂಪ್ ವ್ಯವಸ್ಥೆ ಮಾಡಿಕೊಂಡು ನೀರನ್ನು ಬೇರೆಡೆ ಬಿಡಲಾಗುತ್ತಿದೆ’ ಎಂದು ತುಷಾರ್‌ ಗಿರಿನಾಥ್‌ ಹೇಳಿದರು. ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮಾತನಾಡಿ ‘ಯಲಹಂಕದ ರಮಣಶ್ರೀ ಗಾರ್ಡೇನಿಯಾ ಲೇಔಟ್‌ನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ಪಾಲಿಕೆಗೆ ಅರಣ್ಯ ಇಲಾಖೆ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.

ನಗರದಲ್ಲಿ 5670 ರಸ್ತೆ ಗುಂಡಿಗಳು

‘ಬೆಂಗಳೂರು ನಗರದಲ್ಲಿ 5 ಸಾವಿರ ಗುಂಡಿಗಳು ವಾರ್ಡ್‌ ರಸ್ತೆಗಳಲ್ಲಿವೆ. 670 ಗುಂಡಿಗಳು ಮುಖ್ಯ ಉಪಮುಖ್ಯರಸ್ತೆಗಳಲ್ಲಿವೆ. ಇವಲ್ಲದೆ 66 ಸ್ಥಳಗಳಲ್ಲಿ ರಸ್ತೆ ಬಹುತೇಕ ಹದಗೆಟ್ಟಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ವಾರ್ಡ್‌ ರಸ್ತೆ ಗುಂಡಿಗಳನ್ನು ಮುಚ್ಚಲು ವಲಯಗಳ ಮುಖ್ಯ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಕೋಲ್ಡ್‌ ಮಿಕ್ಸ್‌ ಹಾಟ್‌ ಮಿಕ್ಸ್‌ಗಳೆಲ್ಲವೂ ನಮ್ಮಲ್ಲಿ ಲಭ್ಯ ಇವೆ. ಸದ್ಯ ಮಳೆಯಾಗುತ್ತಿರುವುದರಿಂದ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಇನ್ನೆರಡು ದಿನದ ನಂತರ ಮಳೆ ಇರುವುದಿಲ್ಲ. ಮಳೆ ಸುಮಾರು 10 ದಿನ ಬಿಡುವು ನೀಡಲಿದೆ ಎಂಬ ಮಾಹಿತಿ ಇದೆ. ಈ ಸಂದರ್ಭದಲ್ಲಿ ನಗರದ ಎಲ್ಲೆಡೆ ರಸ್ತೆ ಗುಂಡಿಗಳನ್ನು ದುರಸ್ತಿ ಮಾಡಲಾಗುತ್ತದೆ’ ಎಂದು ಹೇಳಿದರು. ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಅವರಿಗೆ ಸೂಚಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT