ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಾ, ಉಬರ್‌ ಬದಲು ಸರ್ಕಾರವೇ ಆ್ಯಪ್ ನಿರ್ವಹಿಸಲಿ: ಚಾಲಕರ ಸಂಘಟನೆ

ಪರವಾನಗಿ ನವೀಕರಣ ಮಾಡದೆ ಸರ್ಕಾರದಿಂದಲೇ ಆ್ಯಪ್ ಅಭಿವೃದ್ಧಿಪಡಿಸಲು ಚಾಲಕರ ಒತ್ತಾಯ
Last Updated 3 ಮಾರ್ಚ್ 2022, 21:01 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಪ್ ಆಧಾರಿತ ಸೇವೆ ಒದಗಿಸುತ್ತಿರುವ ಒಲಾ ಮತ್ತು ಉಬರ್ ಸಂಸ್ಥೆಗಳ ಪರವಾನಗಿ ನವೀಕರಣ ಅರ್ಜಿ ಸಾರಿಗೆ ಇಲಾಖೆಯಲ್ಲಿ ಪರಿಶೀಲನೆಯಲ್ಲಿದೆ. ಇದೇ ವೇಳೆ ಪರವಾನಗಿ ನವೀಕರಣ ಮಾಡದೆ ಸರ್ಕಾರದಿಂದಲೇ ಆ್ಯಪ್ ಅಭಿವೃದ್ಧಿಪಡಿಸಿ ನಿರ್ವಹಿಸಲು ಚಾಲಕರ ಸಂಘಟನೆಗಳು ಒತ್ತಡ ಹೇರಿವೆ.

ಒಲಾ ಕಂಪನಿಗೆ ನೀಡಿದ್ದ ಪರವಾನಗಿ ಕಳೆದ 2021ರ ಫೆಬ್ರುವರಿಯಲ್ಲಿ ಮುಗಿದಿದ್ದು, ಉಬರ್ ಕಂಪನಿಯ ಪರವಾನಗಿ ಅವಧಿ ಡಿಸೆಂಬರ್‌ನಲ್ಲಿ ಮುಕ್ತಾಯಗೊಂಡಿದೆ. ಶುಲ್ಕ ಪಾವತಿಸಿ ನವೀಕರಣ ಮಾಡಿಕೊಳ್ಳದೆ ಎರಡೂ ಕಂಪನಿಗಳು ಸೇವೆ ಮುಂದುವರಿಸಿದ್ದವು.

ಕಂಪನಿಗಳ ಕಚೇರಿಗಳಿಗೆ ನೋಟಿಸ್ ಕಳಿಸಿದ್ದರೂ ಉತ್ತರಗಳು ಬಂದಿರಲಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳ ಕೈಗೆ ಎರಡೂ ಕಂಪನಿಗೆ ಸಂಬಂಧಿಸಿದವರು ಸಿಗದಂತಾಗಿದ್ದರು. ಆದ್ದರಿಂದ ಕಾರುಗಳನ್ನು ಅಡ್ಡಗಟ್ಟಿ ಆ್ಯಪ್ ಆಧಾರಿತ ಸೇವೆ ಒದಗಿಸುತ್ತಿದ್ದ ಚಾಲಕರಿಗೆ ದಂಡ ವಿಧಿಸುವ ಕಾರ್ಯವನ್ನು ಸಾರಿಗೆ ಇಲಾಖೆ ಆರಂಭಿಸಿತ್ತು.

ಬಳಿಕ ಪರವಾನಗಿ ನವೀಕರಣಕ್ಕೆ ಕಂಪನಿಗಳು ಅರ್ಜಿ ಸಲ್ಲಿಸಿವೆ. ಅವುಗಳನ್ನು ಪರಿಶೀಲನೆ ನಡೆಸುತ್ತಿರುವ ಸಾರಿಗೆ ಇಲಾಖೆ, ಕೆಲವು ಷರತ್ತುಗಳನ್ನು ವಿಧಿಸಿದೆ. ಆ್ಯಪ್ ನಿರ್ವಹಣೆ, ದರ ನಿಗದಿ, ಚಾಲಕರಿಗೆ ನೀಡುವ ಪಾಲು, ಪ್ರೋತ್ಸಾಹಧನ ವಿಷಯದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಬಾರದು ಎಂದು ತಿಳಿಸಿದೆ. ಅಲ್ಲದೇ, ಸಾರಿಗೆ ನಿಯಮಗಳನ್ನು ಪಾಲಿಸಲಾಗುತ್ತಿದೆಯೋ, ಇಲ್ಲವೋ ಎಂಬುದರ ಕುರಿತು ತಪಾಸಣೆ ನಡೆಸಿ ವರದಿ ನೀಡಲು ಅಧಿಕಾರಿಗಳ ತಂಡವನ್ನು ನಿಯೋಜಿಸಿದೆ.

ಈ ನಡುವೆ, ಈ ಸಂಸ್ಥೆಗಳ ಪರವಾನಗಿಯನ್ನೇ ನವೀಕರಣ ಮಾಡಬಾರದು ಎಂಬ ಒತ್ತಾಯವನ್ನು ಒಲಾ ಮತ್ತು ಉಬರ್ ಚಾಲಕರ ಸಂಘಟನೆಗಳು ಮಾಡುತ್ತಿವೆ. ‘ಈ ಸಂಸ್ಥೆಗಳು ಕಾರು ಮಾಲೀಕರು ಮತ್ತು ಚಾಲಕರನ್ನು ಶೋಷಣೆ ಮಾಡುತ್ತಿವೆ. ಮನ ಬಂದಂತೆ ದರ ನಿಗದಿ ಮಾಡಲಾಗುತ್ತದೆ. ಕಂಪನಿ ನಡೆಸುವವರು ಕುಳಿತಲ್ಲೇ ಹಣ ಮಾಡಿಕೊಳ್ಳುತ್ತಿದ್ದಾರೆ. ಹಗಲು– ರಾತ್ರಿ ಎನ್ನದೆ ಕಾರು ಚಾಲನೆ ಮಾಡುವ ಚಾಲಕರಿಗೆ ಅರೆಹೊಟ್ಟೆಯಾಗಿದೆ’ ಎಂಬುದು ಟ್ಯಾಕ್ಸಿ ಚಾಲಕರ ಅಳಲು.

‘ಆದ್ದರಿಂದ ಪರವಾನಗಿ ನವೀಕರಣ ಮಾಡುವ ಬದಲು ಸರ್ಕಾರವೇ ಆ್ಯಪ್ ಅಭಿವೃದ್ಧಿಪಡಿಸಿ ನಿರ್ವಹಿಸುವುದು ಸೂಕ್ತ. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್‌ಟಿಡಿಸಿ) ವಿಮಾನ ನಿಲ್ದಾಣದ ಟ್ಯಾಕ್ಸಿ ಸೇವೆ ನಿರ್ವಹಣೆ ಮಾಡುತ್ತಿದೆ. ಅದೇ ರೀತಿಯಲ್ಲಿ ನಗರದಲ್ಲಿನ ಟ್ಯಾಕ್ಸಿ ಸೇವೆಯನ್ನೂ ನಿರ್ವಹಣೆ ಮಾಡುವುದು ಸೂಕ್ತ. ಪ್ರಯಾಣಿಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಅನುಕೂಲ ಆಗಲಿದೆ. ಖಾಸಗಿ ಕಂಪನಿಗಳ ಶೋಷಣೆ ತಪ್ಪುತ್ತದೆ’ ಎಂದು ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಅಭಿಪ್ರಾಯಪಟ್ಟರು.

‘ಟ್ಯಾಕ್ಸಿ ಚಾಲಕರ ಅಭಿವೃದ್ಧಿ ನಿಗಮ ತೆರೆಯಬೇಕು ಎಂಬ ಮನವಿಯನ್ನೂ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ನಿಗಮ ರಚನೆಯಾದರೆ ಅದರ ಮೂಲಕವೇ ಕಾಲ್‌ ಸೆಂಟರ್ ತೆರೆದು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲು ಸಾಧ್ಯ. ಈ ಎಲ್ಲ ವಿಷಯಗಳ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನಮ್ಮ ಸಲಹೆಯನ್ನು ಅವರು ಪರಿಗಣಿಸಿದ್ದಾರೆ’ ಎಂದು ‍ಪಾಷಾ ಹೇಳಿದರು.

‘ಸಾರಿಗೆ ಇಲಾಖೆಯಿಂದ ಆ್ಯಪ್ ಅಭಿವೃದ್ಧಿಪಡಿಸಿ ನಿರ್ವಹಿಸುವ ಪ್ರಸ್ತಾಪ ಇಲ್ಲ. ಸರ್ಕಾರದ ಬೇರೆ ಸಂಸ್ಥೆಗಳು ಆ್ಯಪ್ ಆಧಾರಿತ ಸೇವೆ ಒದಗಿಸಲು ಮುಂದೆ ಬಂದರೆ ಪರವಾನಗಿ ನೀಡಲಾಗುವುದು’ ಎನ್ನುತ್ತಾರೆ ಸಾರಿಗೆ ಇಲಾಖೆ ಆಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT