ಶನಿವಾರ, ಸೆಪ್ಟೆಂಬರ್ 18, 2021
27 °C
ಸಾರ್ವಜನಿಕ ಸ್ಥಳದಲ್ಲಿ 4 ಅಡಿ, ಮನೆಯಲ್ಲಿ 2 ಅಡಿ ಮೂರ್ತಿಗೆ ಅವಕಾಶ

ಬೆಂಗಳೂರು: ವಾರ್ಡಿಗೊಂದೇ ಗಣಪ, ಮೂರೇ ದಿನ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಾರ್ಡಿಗೆ ಒಂದೇ ಸಾರ್ವಜನಿಕ ಗಣೇಶ, ಮೂರೇ ದಿನ ಉತ್ಸವ, ನಾಲ್ಕೇ ಅಡಿ ಎತ್ತರದ ಮೂರ್ತಿ... ಇವು ಗಣಪತಿ ಹಬ್ಬ ಆಚರಣೆ ಸಂಬಂಧ ಬಿಬಿಎಂಪಿ ಹೊರಡಿಸಿರುವ ಹೊಸ ಆದೇಶದಲ್ಲಿರುವ ನಿರ್ಬಂಧಗಳು.

ಗಣೇಶ ಉತ್ಸವ ಆಚರಣೆ ಸಂಬಂಧ ಪೊಲೀಸ್ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳ ಜತೆ ಮಂಗಳವಾರ ಜಂಟಿ ಸಭೆ ನಡೆಸಿದ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತ ಈ ಆದೇಶ ಹೊರಡಿಸಿದ್ದಾರೆ.

‘ಗಣೇಶ ಮೂರ್ತಿಯನ್ನು ನಗರದಲ್ಲಿ ಎಲ್ಲೆಂದರಲ್ಲಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಪ್ರತಿಷ್ಠಾಪನೆಗೆ ಅನುಮತಿ ಕೋರಿ ಬರುವ ಅರ್ಜಿ ಆಧರಿಸಿ ಪೊಲೀಸ್ ಇನ್‌ಸ್ಪೆಕ್ಟರ್‌, ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರನ್ನು ಒಳಗೊಂಡ ಸಮಿತಿಯು ಸ್ಥಳ ನಿಗದಿಪಡಿಸಲಿದೆ. ಬಳಿಕ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅನುಮತಿ ನೀಡಬೇಕು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

‘ಸಾರ್ವಜನಿಕ ಪ್ರದೇಶದಲ್ಲಿ 4 ಅಡಿ ಮತ್ತು ಮನೆಯಲ್ಲಿ 2 ಅಡಿ ಎತ್ತರ ಮೀರದಂತೆ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಹುದು. ಸಾರ್ವಜನಿಕ ಗಣೇಶ ಮೂರ್ತಿಯಿಂದ ವಾಹನ ಮತ್ತು ಜನ ಸಂಚಾರಕ್ಕೆ ತೊಂದರೆ ಆಗದಂತೆ ಸಂಚಾರ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆದೇಶದಲ್ಲಿ ಸೂಚಿಸಿದ್ದಾರೆ.

‘3 ದಿನ ಮಾತ್ರ ಉತ್ಸವ ನಡೆಸಬಹುದು. ಈ ನಿಯಮ ಕಳೆದ ವರ್ಷವೂ ಜಾರಿಯಲ್ಲಿತ್ತು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ 20 ಜನರು ಮಾತ್ರ ಸೇರಲು ಅವಕಾಶವಿರುವಂತೆ ಸೀಮಿತ ಪೆಂಡಾಲ್‌ ಅಳವಡಿಸಬೇಕು. ಏಕಕಾಲದಲ್ಲಿ ಅದಕ್ಕಿಂತ ಹೆಚ್ಚು ಭಕ್ತರು ಸೇರದಂತೆ ನೋಡಿಕೊಳ್ಳಬೇಕು. ಅಲ್ಲಿ ಕೋವಿಡ್ ನಿಯಮ ಕಟ್ಟುನಿಟ್ಟಿನ ಪಾಲನೆಗೆ ಗೃಹ ರಕ್ಷಕ ಸಿಬ್ಬಂದಿ ಮತ್ತು ಮಾರ್ಷಲ್‌ಗಳನ್ನು ನಿಯೋಜಿಸಲಾಗುವುದು. ನಿಯಮ ಉಲ್ಲಂಘಿಸಿದರೆ ಅವರು ಸ್ಥಳದಲ್ಲೇ ದಂಡ ವಿಧಿಸಲಿದ್ದಾರೆ’ ಎಂದು ವಿವರಿಸಿದ್ದಾರೆ.

ಪ್ಲಾಸ್ಟರ್ ಆಫ್ ಪ್ಯಾರಿಸ್‌ ಬಳಸಿ ಗಣೇಶ ಮೂರ್ತಿ ತಯಾರಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ವಸ್ತುಗಳಲ್ಲಿ ಮೂರ್ತಿ ತಯಾರಿಸಿದರೆ ದಂಡ ವಿಧಿಸಲಾಗುವುದು
ಎಂದು ಅವರು ಆದೇಶದಲ್ಲಿ ಎಚ್ಚರಿಸಿದ್ದಾರೆ.

ಮನೆಯಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಮನೆಯಲ್ಲಿಯೇ ಅಥವಾ ಪಾಲಿಕೆಯ ಸಂಚಾರ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬಹುದು ಎಂದು ವಿವರಿಸಿದ್ದಾರೆ.

ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಸಂಗೀತ, ನೃತ್ಯ ಸೇರಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತಿಲ್ಲ. ಡಿ.ಜೆ ಸೆಟ್ ಅಥವಾ ಧ್ವನಿವರ್ಧಕ ಬಳಕೆಗೂ ನಿಷೇಧ ಹೇರಲಾಗಿದೆ.

‘ಬಿಬಿಎಂಪಿಯಿಂದ ಅನುಮತಿ ಪಡೆದರಷ್ಟೇ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬಹುದು. ಅನಧಿಕೃತ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ. ಪೂಜೆ ನಡೆಸಲು ಯಾವುದೇ ಸಮಯ ನಿಗದಿ ಮಾಡುವುದಿಲ್ಲ. ಆದರೆ, ರಾತ್ರಿ 9 ಗಂಟೆ ಬಳಿಕ ಕರ್ಫ್ಯೂ ಇಲ್ಲಿಯೂ ಜಾರಿಯಲ್ಲಿರುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.

‘ಮೂರ್ತಿ ಪ್ರತಿಷ್ಠಾಪನೆ ಅಥವಾ ವಿಸರ್ಜನೆ ಸೇರಿ ಯಾವುದೇ ಸಂದರ್ಭ
ದಲ್ಲೂ ಮೆರವಣಿಗೆ ನಡೆಸಲು ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ನಿರ್ಬಂಧ ಒಪ್ಪಲಾಗದು: ಗಣೇಶ ಉತ್ಸವ ಸಮಿತಿ

‘ವಾರ್ಡ್‌ಗೆ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ, ವಿಗ್ರಹದ ಎತ್ತರ 4 ಅಡಿ ಮೀರುವಂತಿಲ್ಲ, ಸಾರ್ವಜನಿಕ ಗಣೇಶೋತ್ಸವ ಆಚರಣೆ ಮೂರು ದಿನಗಳಿಗೆ ಸೀಮಿತ ಎಂಬ ನಿರ್ಬಂಧಗಳನ್ನು ಭಕ್ತರು ಒಪ್ಪಿಕೊಳ್ಳುವುದಿಲ್ಲ’ ಎಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ತಿಳಿಸಿದೆ.

‘ಕೋವಿಡ್ ನಿಯಮಗಳನ್ನು ಚಾಚು ತಪ್ಪದೆ ಮಾಲನೆ ಮಾಡಬೇಕು ಎಂಬುದನ್ನು ಒಪ್ಪುತ್ತೇವೆ. ಆದರೆ, ಅದನ್ನೇ ನೆಪ ಮಾಡಿಕೊಂಡು ಮೂರ್ತಿಯ ಎತ್ತರ, ಆಚರಣೆಗೆ ದಿನ, ಸ್ಥಳ ನಿಗದಿ ಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಸಮಿತಿಯ ಕಾರ್ಯದರ್ಶಿ ಪ್ರಕಾಶ್ ರಾಜು ತಿಳಿಸಿದರು.

‘ಗಣೇಶ ಉತ್ಸವಕ್ಕಾಗಿ ಮೊದಲೇ ಮೂರ್ತಿಗಳನ್ನು ಬುಕ್ ಮಾಡಿರುತ್ತೇವೆ. ಈಗ ಬದಲಾವಣೆ ಮಾಡುವುದು ಕಷ್ಟ. ಚೌತಿಯಿಂದ ಚತುರ್ದಶಿ ತನಕ ಗಣಪತಿ ಹಬ್ಬ ಆಚರಣೆ ಮಾಡುವುದು ಭಕ್ತರ ಹಕ್ಕು’ ಎಂದರು.

‘ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಈಗಾಗಲೇ ನಿಶ್ಚಯ ಮಾಡಿರುವವರು ಹಿಂದೆ ಸರಿಯಬಾರದು. ಗಣಪತಿ ಪ್ರತಿಷ್ಠಾಪನೆಯ ಕಾರಣಕ್ಕೆ ಪೊಲೀಸರು ಪ್ರಕರಣ ದಾಖಲಿಸುವುದಾದರೆ ದಾಖಲಿಸಲಿ’ ಎಂದು ಸವಾಲು ಹಾಕಿದರು.

‘ಮಾರ್ಗಸೂಚಿಗಳನ್ನು ಮಾರ್ಪಡಿಸಲು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಅದನ್ನು ಅವರು ಪರಿಗಣಿಸಬೇಕು’ ಎಂದು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು