ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ: ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ: ಇಂದು ಬಿಬಿಎಂಪಿ ಸಭೆ

ರೀತಿ– ರಿವಾಜು ಚರ್ಚಿಸಲು ಇಂದು ಸಭೆ l ಶೀಘ್ರವೇ ವಿಸ್ತೃತ ಮಾರ್ಗಸೂಚಿ ಹೊರಡಿಸಲಿದೆ ಬಿಬಿಎಂಪಿ
Last Updated 5 ಸೆಪ್ಟೆಂಬರ್ 2021, 20:56 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಈ ಬಾರಿಯೂ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುವುದಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಗಣೇಶೋತ್ಸವ ಸಮಾರಂಭಗಳಲ್ಲಿ ಕೋವಿಡ್‌ ಹರಡದಂತೆ ನಿಗಾ ವಹಿಸಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಸೋಮವಾರ ಅಧಿಕಾರಿಗಳ ವಿಶೇಷ ಸಭೆ ಕರೆದಿದ್ದಾರೆ.

ಈ ಸಲವೂ ಸಾರ್ವಜನಿಕ ಗಣೇಶೋತ್ಸವಗಳಿಗೆ ಬಿಬಿಎಂಪಿ, ಪೊಲೀಸ್‌ ಇಲಾಖೆ, ಅಗ್ನಿಶಾಮಕ ಇಲಾಖೆಗಳಿಂದ ಪರವಾನಗಿ ನೀಡುವುದಕ್ಕೆ ಏಕಗವಾಕ್ಷಿ ವ್ಯವಸ್ಥೆ ರೂಪಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

‘ಪೊಲೀಸರು ಹಾಗೂ ನಮ್ಮ ಅಧಿಕಾರಿಗಳು ಸ್ಥಳೀಯವಾಗಿ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಬೇಕಿದೆ. ಕೋವಿಡ್‌ ನಿಯಂತ್ರಣ ಕ್ರಮಗಳ ಪಾಲನೆ ಬಗ್ಗೆ ನಿಗಾ ಇಡುವಲ್ಲಿ ‍ಪೊಲೀಸ್‌ ಇಲಾಖೆಯ ಹೊಣೆ ಜಾಸ್ತಿ ಇದೆ. ಗಣೇಶೋತ್ಸವದ ಸಾರ್ವಜನಿಕ ಆಚರಣೆಗೆ ಅನುಮತಿ ನೀಡುವ ಕುರಿತು ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಏಕಗವಾಕ್ಷಿ ವ್ಯವಸ್ಥೆ ರೂಪಿಸಲಿದ್ದೇವೆ’ ಎಂದು ಗೌರವ್‌ ಗುಪ್ತ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಧರ್ಮದ ಆಚರಣೆ ನಮ್ಮ ಸಂಸ್ಕೃತಿ. ಅದನ್ನು ಮುಂದುವರಿಸಬೇಕು. ಜೊತೆಗೆ, ಕೋವಿಡ್‌ ನಿಯಂತ್ರಣವೂ ಅಷ್ಟೇ ಮುಖ್ಯ. ಯಾವುದೇ ಧರ್ಮದ ಅನುಯಾಯಿಗಳಿರಲಿ, ಧಾರ್ಮಿಕ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸುವ ಮೂಲಕ ಆಡಳಿತ ಯಂತ್ರದ ಜೊತೆ ಸಹಕರಿಸಬೇಕು’ ಎಂದು ಅವರು ಕೋರಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವಗಳನ್ನು ಶಿಸ್ತುಬದ್ಧವಾಗಿ ಆಚರಿಸಬೇಕು. ನಮ್ಮನ್ನು ನಾವು ನಿಯಂತ್ರಣದಲ್ಲಿ ಇಡದೇ ಕೊರೊನಾ ಸೋಂಕು ಮತ್ತೆ ಹರಡಲು ಅವಕಾಶ ಕಲ್ಪಿಸಬಾರದು. ಮಾರ್ಷಲ್‌ಗಳು ಹಾಗೂ ಪೊಲೀಸರು ಕೋವಿಡ್‌ ನಿಯಂತ್ರಣ ಕ್ರಮಗಳ ಪಾಲನೆ ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಮಹಾನಗರದ ಜನತೆಯೂ ಈ ವಿಚಾರದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು. ಜನರೂ ಸ್ವಯಂಪ್ರೇರಿತವಾಗಿ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳುವುದು, ಜನಜಂಗುಳಿ ಇರುವಲ್ಲಿಗೆ ಹೋಗದಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು ಮುಂತಾದ ಪರಿಪಾಠಗಳನ್ನು ಮುಂದುವರಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಸದ್ಯಕ್ಕೆ ನಗರದಲ್ಲಿ ಕೋವಿಡ್‌ ಹತೋಟಿಯಲ್ಲಿದೆ. ಆದರೂ, ಇದು ಯಾವಾಗ ಬೇಕಿದ್ದರೂ ಉಲ್ಬಣ ಆಗಬಹುದು. ನಗರದಲ್ಲಿ ಈಗಾಗಲೇ ಕೆಲ ನರ್ಸಿಂಗ್‌ ಕಾಲೇಜುಗಳಲ್ಲಿ ಕೋವಿಡ್‌ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದೆ. ಇದರ ನಿಯಂತ್ರಣಕ್ಕೆ ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ. ಕ್ರಿಶ್ಚಿಯನ್‌ ಕಾಲೇಜ್‌ ಆಫ್‌ ನರ್ಸಿಂಗ್‌ ಹಾಗೂ ದಾಸರಹಳ್ಳಿಯ ನರ್ಸಿಂಗ್‌ ಕಾಲೇಜಿನಲ್ಲಿ ಕಂಟೈನ್‌ಮೆಂಟ್‌ ವಲಯಗಳನ್ನೂ ಗುರುತಿಸಲಾಗಿದೆ. ಸೋಂಕು ಮತ್ತೆ ವ್ಯಾಪಿಸದಂತೆ ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಗಣೇಶ ವಿಸರ್ಜನೆಗೆ ತೊಟ್ಟಿ ವ್ಯವಸ್ಥೆ’

‘ಮನೆಗಳಲ್ಲಿ ಪೂಜಿಸುವ ಗಣೇಶ ವಿಗ್ರಹಗಳ ವಿಸರ್ಜನೆಗೆ ಬಿಬಿಎಂಪಿ ವತಿಯಿಂದ ಸಂಚಾರ ತೊಟ್ಟಿಗಳ ವ್ಯವಸ್ಥೆಯನ್ನು ಕಳೆದ ವರ್ಷ ಒದಗಿಸಲಾಗಿತ್ತು. ಈ ಸಲವೂ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ವಿಗ್ರಹಗಳ ವಿಸರ್ಜನೆಗೆ ಸಂಚಾರ ತೊಟ್ಟಿಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT