ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಬೆಟ್ಟಿಂಗ್‌ ಗೀಳು: ಅಣ್ಣನ ಮನೆಯಲ್ಲಿ ಕಳ್ಳತನ

Published 8 ಜುಲೈ 2023, 23:31 IST
Last Updated 8 ಜುಲೈ 2023, 23:31 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್‌ ಬೆಟ್ಟಿಂಗ್ ಗೀಳಿಗೆ ಬಿದ್ದು ಹಣ ಹೊಂದಿಸುವುದಕ್ಕಾಗಿ ಅಣ್ಣನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಮೊಹಮ್ಮದ್ ಅರ್ಜಾನ್‌ನನ್ನು (21) ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಜಯನಗರ 1ನೇ ಹಂತದ ಸೋಮೇಶ್ವರನಗರ ನಿವಾಸಿ ಮೊಹಮ್ಮದ್ ಅರ್ಜಾನ್, ಔಷಧ ಮಾರಾಟ ಕಂಪನಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ಬೆರಳಚ್ಚು ಹಾಗೂ ಇತರೆ ಪುರಾವೆಗಳನ್ನು ಆಧರಿಸಿ ಅರ್ಜಾನ್‌ನನ್ನು ಬಂಧಿಸಲಾಗಿದೆ. ₹ 4.60 ಲಕ್ಷ ಮೌಲ್ಯದ 78 ಗ್ರಾಂ ಚಿನ್ನಾಭರಣ, 288 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ ಕೈ ಗಡಿಯಾರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ನಕಲಿ ಕೀ ಮಾಡಿಸಿ ಕೃತ್ಯ: ‘ಆರೋ‍ಪಿ, ಅಣ್ಣ ಹಾಗೂ ಅತ್ತಿಗೆ ಜೊತೆ ವಾಸವಿದ್ದ. ನಿತ್ಯವೂ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ. ಆನ್‌ಲೈನ್ ಬೆಟ್ಟಿಂಗ್‌ಗಾಗಿ ಆರೋಪಿ ಹೆಚ್ಚು ಹಣ ವ್ಯಯಿಸುತ್ತಿದ್ದ. ಕೆಲಸದಿಂದ ಬಂದ ಹಣ ಸಾಲದಿದ್ದಾಗ, ಕಳ್ಳತನ ಮಾಡಲು ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

ಪೊಲೀಸರ ಜೊತೆಗೆ ಓಡಾಡಿದ್ದ: ‘ಆರೋಪಿಯು ನಿತ್ಯವೂ ಕೆಲಸಕ್ಕೆ ಹೋಗುವ ರೀತಿಯಲ್ಲಿ ಮನೆಯಿಂದ ಹೊರಗೆ ಹೋಗಿದ್ದ. ನಂತರ, ಅಣ್ಣ–ಅತ್ತಿಗೆ ಹೊರಗಡೆ ತೆರಳಿದ್ದರು. ಅದೇ ಸಂದರ್ಭದಲ್ಲಿ ಮನೆಗೆ ವಾಪಸು ಬಂದಿದ್ದ ಆರೋಪಿ, ನಕಲಿ ಕೀ ಬಳಸಿ ಮನೆಯೊಳಗೆ ನುಗ್ಗಿದ್ದ. ಕಬೋರ್ಡ್‌ನಲ್ಲಿಟ್ಟಿದ್ದ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಹಾಗೂ ವಾಚ್ ಕದ್ದುಕೊಂಡು ಹೊರಟು ಹೋಗಿದ್ದ’ ಎಂದು ಪೊಲೀಸರು ಹೇಳಿದರು.

‘ಅಣ್ಣ–ಅತ್ತಿಗೆ ಮನೆಗೆ ವಾಪಸು ಬಂದಾಗ, ಕಬೋರ್ಡ್‌ ಗಮನಿಸಿದ್ದರು. ಕಳ್ಳತನವಾಗಿದ್ದು ಗೊತ್ತಾಗಿತ್ತು. ಅರ್ಜಾನ್‌ ಎಂದಿನಂತೆ ಸಂಜೆ ಮನೆಗೆ ಬಂದಿದ್ದ. ಏನೂ ಅರಿಯದಂತೆ ವರ್ತಿಸಿದ್ದ. ಅಣ್ಣನೇ ಠಾಣೆಗೆ ಮಾಹಿತಿ ನೀಡಿದ್ದರು. ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದರು. ಅರ್ಜಾನ್‌ ಸಹ ಸ್ಥಳದಲ್ಲಿದ್ದು, ಸಿಬ್ಬಂದಿ ಜೊತೆ ಓಡಾಡಿದ್ದ’ ಎಂದು ತಿಳಿಸಿದರು.

‘ಮನೆ ಹಾಗೂ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಹಾಗೂ ಶ್ವಾನ ದಳದ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಹೊರಗಿನಿಂದ ಬಂದವರು ಕಳ್ಳತನ ಮಾಡಿಲ್ಲವೆಂಬುದು ಗೊತ್ತಾಗಿತ್ತು.’

‘ಅರ್ಜಾನ್‌ ಮೇಲೆ ಅನುಮಾನ ಬಂದಿತ್ತು. ಕೃತ್ಯದ ಸ್ಥಳದಲ್ಲಿ ಸಂಗ್ರಹಿಸಿದ್ದ ಬೆರಳಚ್ಚು ಸಹ ಹೊಂದಾಣಿಕೆ ಆಗಿತ್ತು. ಈತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಆನ್‌ಲೈನ್ ಬೆಟ್ಟಿಂಗ್‌ಗೆ ಹಣ ಹೊಂದಿಸಲು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT