ಭಾನುವಾರ, ಜೂನ್ 26, 2022
29 °C

ಆನ್‌ಲೈನ್‌ ತರಗತಿ: ಶಾಲೆಗೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ನಂದಿನಿ ಲೇಔಟ್‌ನಲ್ಲಿರುವ ಪ್ರೆಸಿಡೆನ್ಸಿ ಶಾಲೆಯವರು ಶುಲ್ಕ ಪಾವತಿಸಲು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮಕ್ಕಳ ಪೋಷಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಹೀಗಾಗಿ, ಕಾರಣ ಕೇಳಿ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.

ಇಲಾಖೆಯ ಅನುಮತಿ ಇಲ್ಲದೇ ಆನ್‌ಲೈನ್‌ ತರಗತಿ ಆರಂಭಿಸಿ, ಹಿಂದಿನ ವರ್ಷದ ಶುಲ್ಕ ಪಾವತಿಸದ ಮಕ್ಕಳ ಆನ್‌ಲೈನ್‌ ತರಗತಿ ತಡೆಹಿಡಿದು ವಿದ್ಯಾರ್ಥಿಗಳಿಗೆ ತೊಂದರೆ, ತಾರತಮ್ಯ ಎಸಗುತ್ತಿರುವ ಕುರಿತು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರವೇಶ ಪಟ್ಟಿಯ ಮಾಹಿತಿ ಹಾಗೂ ತರಗತಿವಾರು ಪಾವತಿಸಬೇಕಾದ ಶುಲ್ಕದ ವಿವರವನ್ನು ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ದಾಖಲಾತಿ ಪ್ರಕ್ರಿಯೆ ಇದೇ 15ಕ್ಕೆ ಆರಂಭಿಸಿ ಆಗಸ್ಟ್ 31ರ ಒಳಗೆ ಮುಕ್ತಾಯಗೊಳಿಸಲು ತಿಳಿಸಲಾಗಿದೆ. ಆದರೆ, ಮಗುವಿನ ಶೈಕ್ಷಣಿಕ ಮೂಲಭೂತ ಹಕ್ಕು ಕಸಿದುಕೊಂಡು ಮಗುವಿಗೆ ದೈಹಿಕ ಹಾಗೂ ಮಾನಸಿಕ ತೊಂದರೆ ನೀಡಲಾಗುತ್ತಿದೆ. ಹೀಗಾಗಿ, ಮಗುವಿನ ದಾಖಲಾತಿಗೆ ಅವಕಾಶ ಮಾಡಿಕೊಡಬೇಕು ಮತ್ತು ಆರ್‌ಟಿಇ ನಿಯಮಗಳಿಗೆ ವಿರುದ್ಧವಾಗಿ ತೊಂದರೆ ನೀಡುತ್ತಿರುವ ಶಿಕ್ಷಣ ಸಂಸ್ಥೆಯ ವಿರುದ್ಧ ಶಿಕ್ಷಣ ಹಕ್ಕು ಕಾಯ್ದೆಯನ್ವಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸ್‌ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.

ಶುಲ್ಕ ವಸೂಲಾತಿಗೆ ಸಂಬಂಧಿಸಿ ದಂತೆ ಪ್ರಕರಣ ಬಾಕಿ ಇದೆ. ಹೀಗಿರು ವಾಗ, ಇಲಾಖೆಯ ಸುತ್ತೋಲೆಗಳಿಗೆ ವಿರುದ್ಧವಾಗಿ ಆನ್‌ಲೈನ್ ತರಗತಿ ಆರಂಭಿಸಲಾಗಿದೆ. ದೂರು ನೀಡಿರುವ ಪೋಷಕರ ಮಕ್ಕಳ ಆನ್‌ಲೈನ್ ತರಗತಿ ಸ್ಥಗಿತಗೊಳಿಸಲಾಗಿದೆ.‌ ಇದು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ. ಅಲ್ಲದೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನೀತಿಗೆ ವಿರುದ್ಧವಾಗಿದೆ. ಹೀಗಾಗಿ ಮೂರು ದಿನದೊಳಗೆ ನೋಟಿಸ್‌ಗೆ ಉತ್ತರಿಸಬೇಕು. ಉತ್ತರಿಸದೇ ಇದ್ದರೆ ಶಿಸ್ತುಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಮೇಶ್ ಎಚ್ಚರಿಕೆ ನೀಡಿದ್ದಾರೆ.

ಆಕ್ರೋಶ: ‘ಕಾರ್ಪೊರೇಟ್‌ ಖಾಸಗಿ ಶಾಲೆಗಳು ಮನಸೋ ಇಚ್ಛೆ  ಶುಲ್ಕ ಹೆಚ್ಚಿಸಿ, ಬೋಧನಾ ಶುಲ್ಕದೊಂದಿಗೆ ವಿಲೀನ ಮಾಡುತ್ತಿವೆ. ಪೋಷಕರ ಕಷ್ಟಕ್ಕೆ ಸ್ಪಂದಿಸಬೇಕಾಗಿದ್ದ ಶಿಕ್ಷಣ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಖಂಡನೀಯ’ ಎಂದು ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮಿತಿಯ ಬಿ.ಎನ್‌. ಯೋಗಾನಂದ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು