ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಒಂಟಿ ಮನೆ'ಗೆ ಆರು ವಿದ್ಯುತ್‌ ಮೀಟರ್‌!

ಬಿಬಿಎಂಪಿ ಐಎಫ್‌ಎಂಎಸ್‌ನಲ್ಲಿ ಫೋಟೊ ಅಪ್‌ಲೋಡ್‌
Last Updated 22 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯು ಕಲ್ಯಾಣ ಕಾರ್ಯಕ್ರಮದಡಿ ಮಂಜೂರಾದ ‘ಒಂಟಿ ಮನೆ’ ಯೋಜನೆಯ ಕೆಲವು ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಿರುವ ವಿವರಗಳನ್ನು ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆಯಲ್ಲಿ (ಐಎಫ್‌ಎಂಎಸ್‌) ಅಪ್‌ಲೋಡ್‌ ಮಾಡಿದೆ. ಇದರಲ್ಲಿರುವ ಕೆಲ ದಾಖಲೆಗಳು ಒಂದಕ್ಕಿಂತ ಹೆಚ್ಚು ವಾಸದ ಘಟಕಗಳನ್ನು ಹೊಂದಿರುವ ಮನೆಗಳಿಗೂ ಈ ಯೋಜನೆಯಡಿ ಹಣ ಪಾವತಿ ಮಾಡುತ್ತಿರುವುದಕ್ಕೆ ಪುಷ್ಟಿ ನೀಡುತ್ತಿವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆರ್ಥಿಕವಾಗಿ ಹಿಂದುಳಿದ ವಸತಿರಹಿತ ಕುಟುಂಬಗಳು, ಸ್ವಂತ ಜಮೀನು ಹೊಂದಿದ್ದರೆ, ಅಂಥವರು ವಸತಿ ನಿರ್ಮಿಸಿಕೊಳ್ಳಲು ಒಂಟಿ ಮನೆ ಯೋಜನೆ ಅಡಿ ಬಿಬಿಎಂಪಿ ₹ 4.5 ಲಕ್ಷ ಆರ್ಥಿಕ ನೆರವು ಒದಗಿಸುತ್ತದೆ. ಅರ್ಹ ಫಲಾನುಭವಿಗಳ ಪಟ್ಟಿಯನ್ನು ವಾರ್ಡ್‌ ಮಟ್ಟದಲ್ಲಿ ತಯಾರಿಸಬೇಕು. ವಲಯ ಮಟ್ಟದ ಸಮಿತಿಯಲ್ಲಿ ಚರ್ಚಿಸಿ ಅರ್ಹರನ್ನು ಆಯ್ಕೆ ಮಾಡಬೇಕು ಎಂಬುದು ನಿಯಮ. ಆದರೆ, ಫಲಾನುಭವಿಗಳ ಆಯ್ಕೆಯು ಜನಪ್ರತಿನಿಧಿಗಳು ಮಾಡುವ ಶಿಫಾರಸುಗಳನ್ನು ಆಧರಿಸಿಯೇ ನಡೆಯುತ್ತಿದೆ. ಆರ್ಥಿಕವಾಗಿ ದುರ್ಬಲರಲ್ಲದ ಅನರ್ಹರಿಗೂ ಈ ಯೋಜನೆಯ ಅಡಿ ಆರ್ಥಿಕ ನೆರವು ಒದಗಿಸಲಾಗುತ್ತಿದೆ ಎಂಬ ಟೀಕೆಗಳಿವೆ.

ಬಿಬಿಎಂಪಿಯ ಐಎಫ್‌ಎಂಎಸ್‌ನಲ್ಲಿರುವ ಡಿ.ಸಿ.ಬಿಲ್‌ ಸಂಖ್ಯೆ 000104ರ ಪ್ರಕಾರ ಆಸ್ಟಿನ್‌ಟೌನ್‌ನ ನಿವಾಸಿ ರಾಣಿ ಕಲಾ ಎಂಬವರಿಗೆ ಏ. 4ರಂದು (ಪಿ–ಕೋಡ್‌: ಪಿ–2021) ₹ 4.5 ಲಕ್ಷವನ್ನು ಪಾವತಿಸಲಾಗಿದೆ. ಈ ಬಿಲ್‌ಗೆ ಸಂಬಂಧಿಸಿ ಮನೆಯ ಒಂದು ಪಾರ್ಶ್ವದ ಫೊಟೋವನ್ನು ಅಪ್‌ಲೋಡ್‌ ಮಾಡಲಾಗಿದೆ. ಆ ಮನೆಯು ಒಟ್ಟು 6 ವಿದ್ಯುತ್‌ ಮೀಟರ್‌ಗಳನ್ನು ಹೊಂದಿರುವುದು ಫೋಟೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಪೂರ್ವ ವಲಯದ ಸಹಾಯಕ ಕಲ್ಯಾಣ ಅಧಿಕಾರಿಯವರು ಈ ಬಿಲ್‌ ಪಾವತಿಗೆ ಕ್ರಮ ಕೈಗೊಂಡ ವಿವರಗಳು ಐಎಫ್‌ಎಂಎಸ್‌ನಲ್ಲಿವೆ.

ಬಿಬಿಎಂಪಿ ಸುತ್ತೋಲೆ ಪ್ರಕಾರ, ಒಂಟಿ ಮನೆ ಯೋಜನೆಯ ಫಲಾನುಭವಿಯು ಬಿಬಿಎಂಪಿ ವ್ಯಾಪ್ತಿಯ ನಿವಾಸಿ ಆಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಡುಬಡವರ ವೈಯಕ್ತಿಕ ಅಭಿವೃದ್ಧಿ ಕಾಮಗಾರಿಯಡಿ ಒಂಟಿ ಮನೆ ಕಾಮಗಾರಿ ಕೈಗೊಳ್ಳುವುದರಿಂದ ಫಲಾನುಭವಿ ಕುಟುಂಬದ ವಾರ್ಷಿಕ ಆದಾಯ ಸರ್ಕಾರ ನಿಗದಿಪಡಿಸಿದ ಮಿತಿಯಲ್ಲಿರಬೇಕು. ಪೌರಕಾರ್ಮಿಕರಿಗೆ ಈ ಸವಲತ್ತು ನೀಡುವಾಗಲೂ ಅವರ ಕುಟುಂಬದ ವಾರ್ಷಿಕ ಆದಾಯ ನಿಗದಿತ ಮಿತಿಯನ್ನು ಮೀರುವಂತಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ ಆಯುಕ್ತ (ಕಲ್ಯಾಣ) ಶರತ್‌ ಬಿ., ‘ಕಡು ಬಡವರಿಗಷ್ಟೇ ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮಗಳಡಿ ಒಂಟಿ ಮನೆ ಮಂಜೂರು ಮಾಡಬಹುದು. ಅರ್ಹರಲ್ಲದವರಿಗೆ ಸವಲತ್ತು ನೀಡಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT