ಸೋಮವಾರ, ಜನವರಿ 25, 2021
28 °C
ಲಾಕ್‌ಡೌನ್‌ನಿಂದ ಬಂದ್‌ ಆಗಿದ್ದ ಕೆಲಸ ಮತ್ತೆ ಆರಂಭ l 2022ಕ್ಕೆ ಕಾರ್ಯಾಚರಣೆ ಸಾಧ್ಯತೆ

ವಿಮಾನ ಹಾರಾಟಕ್ಕೆ‘2ನೇ ಟರ್ಮಿನಲ್’ ಬಲ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದ ವೇಗಕ್ಕೆ ಅನುಗುಣವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಅಭಿವೃದ್ಧಿ ಆಗುತ್ತಿದೆ. ಭಾರತ ಹಾಗೂ ಕೇಂದ್ರ ಏಷ್ಯಾ ಪ್ರದೇಶದಲ್ಲಿನ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎನಿಸಿಕೊಂಡಿರುವ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್ ನಿರ್ಮಾಣ ಕೆಲಸ ಭರದಿಂದ ಸಾಗಿದ್ದು, ಇದು ಕಾರ್ಯಾಚರಣೆಗೆ ಮುಕ್ತವಾದರೆ ಬೆಂಗಳೂರಿನ ಸಂಚಾರ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ.

2008ರ ಮೇ ತಿಂಗಳಿನಿಂದ ಕಾರ್ಯಾಚರಣೆಯನ್ನು ಆರಂಭಿಸಿರುವ ನಿಲ್ದಾಣ ಬಳಸುತ್ತಿರುವ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸದ್ಯ ಒಂದೇ ಟರ್ಮಿನಲ್ ಇದ್ದು, ಅದರ ಮೇಲೆ ಒತ್ತಡ ಜಾಸ್ತಿ ಇದೆ. ಅದೇ ಕಾರಣಕ್ಕೆ, ಎರಡನೇ ಟರ್ಮಿನಲ್ ನಿರ್ಮಾಣಕ್ಕೆ ನಿಲ್ದಾಣದ ಆಡಳಿತ ಮಂಡಳಿ ಕೈ ಹಾಕಿದೆ.

ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ಪ್ರಯಾಣಿಸುವ ಸಾರ್ವಜನಿಕರು ಹೆಚ್ಚಾಗಿ ವಿಮಾನಗಳನ್ನು ಬಳಸುತ್ತಿದ್ದಾರೆ. ಅದರ ಜೊತೆಗೆ, ಸರಕು ಸಾಗಣೆಗೂ ಕಾರ್ಗೊ ವ್ಯವಸ್ಥೆ ಉತ್ತಮವಾಗಿದೆ. ಸದ್ಯದ ಅಂಕಿ–ಅಂಶ ಪ್ರಕಾರ, ಬೆಂಗಳೂರಿನ ನಿಲ್ದಾಣವು ಅತೀ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ನಿಲ್ದಾಣವಾಗುವ ನಿಟ್ಟಿನಲ್ಲಿ ಮುನ್ನುಗುತ್ತಿದೆ. ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ಸಿಗುವಂತೆ ಮಾಡಲು ಎರಡನೇ ಟರ್ಮಿನಲ್ ಅಗತ್ಯವೂ ಇತ್ತು.

‘ಎರಡನೇ ಟರ್ಮಿನಲ್‌ನ ಕಾಮಗಾರಿ ಎರಡು ಹಂತಗಳಲ್ಲಿ ನಡೆಯುತ್ತಿದೆ. ಮೊದಲ ಹಂತದಲ್ಲಿ 2.54 ಲಕ್ಷ ಚದರ ಮೀ. ನಿರ್ಮಾಣ ಪ್ರದೇಶವುಳ್ಳ ಕಟ್ಟಡ ನಿರ್ಮಿಸಲಾಗಿದೆ. ಈಗ ಎರಡನೇ ಹಂತದಲ್ಲಿ 4.41 ಲಕ್ಷ ಚದರ ಮೀ. ನಿರ್ಮಾಣ ಪ್ರದೇಶವಿರುವ ಕಟ್ಟಡದ ನಿರ್ಮಾಣ ನಡೆದಿದೆ. ಲಾಕ್‌ಡೌನ್‌ನಿಂದಾಗಿ ಕೆಲಸ ಸ್ಥಗಿತಗೊಂಡಿತ್ತು. ಈಗ ಪುನಃ ಕೆಲಸ ಆರಂಭವಾಗಿದೆ. ₹ 3,035 ಕೋಟಿ ವೆಚ್ಚದಲ್ಲಿ ಎರಡನೇ ಟರ್ಮಿನಲ್ ನಿರ್ಮಾಣ ನಡೆಯುತ್ತಿದೆ’ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್‌) ಸಿಇಒ ಹರಿ ಮರಾರ್‌ ತಿಳಿಸಿದರು.

‘2018ರಲ್ಲಿ 3.2 ಕೋಟಿ ಹಾಗೂ 2019ರಲ್ಲಿ 3.65 ಕೋಟಿ ಪ್ರಯಾಣಿಕರು ನಿಲ್ದಾಣದ ಮೂಲಕ ವಿಮಾನಗಳಲ್ಲಿ ಸಂಚರಿಸಿದ್ದಾರೆ. ಎರಡನೇ ಟರ್ಮಿನಲ್‌ ಕಾರ್ಯಾಚರಣೆ ಶುರುವಾದ ನಂತರ, ನಿಲ್ದಾಣ ಬಳಸುವವರ ಸಂಖ್ಯೆ 6.5 ಕೋಟಿಗೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದೂ ಹೇಳಿದರು.

ಮಾದರಿ ಟರ್ಮಿನಲ್: ಉದ್ಯಾನ ನಗರಿ ಖ್ಯಾತಿ ಹೊಂದಿರುವ ಬೆಂಗಳೂರಿನ ಹೆಸರಿಗೆ ತಕ್ಕಂತೆ ಎರಡನೇ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ನಿಲ್ದಾಣದ ಹಸಿರೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆಮ್ಲಜನಕ ಹೆಚ್ಚಾಗಿ ಬಿಡುಗಡೆ ಮಾಡುವ ಹಾಗೂ ಅಲಂಕಾರಿಕ ಗಿಡಗಳನ್ನು ನೆಡಲಾಗುತ್ತಿದೆ. ಚಿಕ್ಕ ಅರಣ್ಯವೇ ನಿಲ್ದಾಣದಲ್ಲಿ ಸೃಷ್ಟಿಯಾಗಲಿದೆ. ಅದರ ಜೊತೆಗೆ, ಚಿಕ್ಕ ಕೆರೆಗಳನ್ನೂ ಟರ್ಮಿನಲ್‌ ಒಳಗೆ ನಿರ್ಮಿಸಲಾಗುತ್ತಿದೆ. ಅದರ ಮೂಲಕ ನೀರು ಸಂಗ್ರಹಿಸುವ ಯೋಚನೆ ಆಡಳಿತ ಮಂಡಳಿಯದ್ದಾಗಿದೆ.

ಒಂದನೇ ಟರ್ಮಿನಲ್‌ಗಿಂತಲೂ ಎರಡನೇ ಟರ್ಮಿನಲ್‌ನಲ್ಲಿ ಪ್ರವೇಶ (ಚೆಕ್‌–ಇನ್‌) ಕೌಂಟರ್‌ಗಳು ವಿಶಾಲವಾಗಿರಲಿವೆ. ನಿರ್ಗಮನ ಪ್ರದೇಶದಲ್ಲಿ 213 ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. 97 ವಲಸೆ ಕೌಂಟರ್‌ಗಳು ಹಾಗೂ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲಲು 62 ಸಾಲುಗಳು ಇರಲಿವೆ.

ಅಂತರರಾಷ್ಟ್ರೀಯ ಹಾಗೂ ದೇಶಿ ಪ್ರಯಾಣಿಕರನ್ನು ನಿರ್ವಹಿಸುವ ಉದ್ದೇಶದಿಂದ ಎರಡನೇ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ಅಮೆರಿಕದ ಸ್ಕಿಡ್‌ಮೋರ್‌, ಓವಿಂಗ್‌ ಆ್ಯಂಡ್‌ ಮೆರಿಲ್‌ (ಎಸ್‌ಒಎಂ) ವಾಸ್ತುಶಿಲ್ಪ ಸಂಸ್ಥೆ ಸಹಾಯದಿಂದ ಎರಡನೇ ಟರ್ಮಿನಲ್‌ ವಿನ್ಯಾಸ ಸಿದ್ಧಪಡಿಸಲಾಗಿದೆ.

ಬಹುರಾಷ್ಟ್ರೀಯ ಕಂಪನಿಗಳು, ಉದ್ಯಮ, ಕಾರ್ಖಾನೆಗಳು ನಗರದಲ್ಲಿವೆ. ಇದರಿಂದ ನಗರಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಾರಿಗೆ ಸಂಪರ್ಕ ಅತ್ಯಗತ್ಯ. ಈ ನಿಟ್ಟಿನಲ್ಲಿ ಎರಡನೇ ಟರ್ಮಿನಲ್ ಉಪಯೋಗ ಹೆಚ್ಚಿದೆ.   

‘ಮಳೆ ನೀರು ಬಳಕೆ ಮಾಡುವ ಉದ್ದೇಶದಿಂದ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಲಾಗಿದೆ. ಎರಡನೇ ಟರ್ಮಿನಲ್‌ ಶುರುವಾದರೆ ನಿಲ್ದಾಣಕ್ಕೆ ಶೇ 100ರಷ್ಟು ನೀರು ಮಳೆಯಿಂದಲೇ ಸಿಗಲಿದೆ. ಜೊತೆಗೆ, 70 ಎಕರೆ ಜಾಗದಲ್ಲಿ ಕೆರೆ ನಿರ್ಮಿಸಲಾಗುತ್ತಿದ್ದು, ಇದು ಸಹ ನಿಲ್ದಾಣಕ್ಕೆ ಮೆರಗು ತರಲಿದೆ. ಸೋಲಾರ್ ವ್ಯವಸ್ಥೆ ಸಹ ಅಳವಡಿಸಲಾಗುತ್ತಿತ್ತು. ವಿದ್ಯುತ್ ಬಳಕೆಯಲ್ಲಿ ನಿಲ್ದಾಣವು ಸ್ವಾವಲಂಬಿಯಾಗಲಿದೆ’ ಎಂದು ಹರಿ ಮರಾರ್ ಹೇಳಿದರು.

‘ನಗರದಿಂದ ಬರುವ ಟ್ಯಾಕ್ಸಿ ಹಾಗೂ ಖಾಸಗಿ ವಾಹನಗಳಿಗೆ ಎರಡನೇ ಟರ್ಮಿನಲ್‌ನಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಬಿಎಂಟಿಸಿ ಬಸ್‌ಗಳಿಗೂ ಪ್ರತ್ಯೇಕ ತಂಗುದಾಣ ನಿರ್ಮಿಸಲಾಗುತ್ತಿದೆ. ಟರ್ಮಿನಲ್ ಎದುರಿನ ರಸ್ತೆಗಳನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದರು.

20 ಸಾವಿರ ಉದ್ಯೋಗ ಸೃಷ್ಟಿ: ‘ಒಂದನೇ ಟರ್ಮಿನಲ್‌ನಲ್ಲಿ 25 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಎರಡನೇ ಟರ್ಮಿನಲ್ ಆರಂಭವಾದರೆ, ಹೊಸದಾಗಿ 20 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ’ ಎಂದೂ ತಿಳಿಸಿದರು.

ಮೆಟ್ರೊ ಆರಂಭವಾದರೆ ಅನುಕೂಲ: ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಸದ್ಯ ಹೆಚ್ಚಿನ ಸಮಯ ಹಿಡಿಯುತ್ತಿದೆ. ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಮೆಟ್ರೊ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದು ಪೂರ್ಣಗೊಂಡರೆ ನಗರದಿಂದ 30 ನಿಮಿಷಗಳಲ್ಲಿ ನಿಲ್ದಾಣಕ್ಕೆ ತಲುಪಬಹುದಾಗಿದ್ದು, ಅದರಿಂದ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಎರಡನೇ ರನ್‌ವೇ ಪ್ರಾಯೋಗಿಕ ಬಳಕೆ

ಒಂದನೇ ಟರ್ಮಿನಲ್‌ನಲ್ಲಿ ಎರಡನೇ ರನ್‌ವೇ ನಿರ್ಮಾಣ ಮಾಡಲಾಗಿದ್ದು, ಅವುಗಳ ಬಳಕೆಯೂ ಪ್ರಾಯೋಗಿಕವಾಗಿ ಆರಂಭವಾಗಿದೆ. ಆಯ್ದ ವಿಮಾನಗಳು ಪ್ರಾಯೋಗಿಕವಾಗಿ ಎರಡನೇ ರನ್‌ವೇ ಬಳಕೆ ಮಾಡುತ್ತಿವೆ.

ನಿಲ್ದಾಣದಲ್ಲಿರುವ ಒಂದನೇ ರನ್‌ವೇನಲ್ಲಿ ಸದ್ಯ ವಿಮಾನಗಳ ಹಾರಾಟದ ದಟ್ಟಣೆ ಹೆಚ್ಚಿದೆ. ಅದನ್ನು ತಗ್ಗಿಸುವ ಉದ್ದೇಶದಿಂದ ಎರಡನೇ ರನ್‌ವೇ ನಿರ್ಮಿಸಲಾಗಿದೆ. ರನ್‌ವೇ ಸಾಮರ್ಥ್ಯ ಪರೀಕ್ಷಿಸಲೆಂದು ಇತ್ತೀಚೆಗಷ್ಟೇ ಇಂಡಿಗೊ, ಸ್ಪೈಸ್‌ ಜೆಟ್ ಹಾಗೂ ಏರ್‌ ಏಷ್ಯಾ ಕಂಪನಿಯ ವಿಮಾನಗಳು ಹಾರಾಟ ನಡೆಸಿದವು. ಅವುಗಳ ಟೇಕಾಫ್ ಹಾಗೂ ಲ್ಯಾಂಡಿಂಗ್ ಯಶಸ್ವಿಯಾಗಿ ಆಯಿತು.

‘ರನ್‌ವೇ ನಿರ್ಮಾಣಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಡಿಸೆಂಬರ್ ಅಥವಾ 2021ರ ಜನವರಿಯಲ್ಲಿ ರನ್‌ವೇ ಸಂಪೂರ್ಣವಾಗಿ ವಿಮಾನಗಳ ಹಾರಾಟಕ್ಕೆ ಮುಕ್ತವಾಗಲಿದೆ’ ಎಂದು ನಿಲ್ದಾಣದ ಪ್ರತಿನಿಧಿಯೊಬ್ಬರು ಹೇಳಿದರು.

’ಎರಡನೇ ರನ್‌ವೇ 4 ಕಿ.ಮೀ ಉದ್ದ ಹಾಗೂ 45 ಮೀಟರ್ ಅಗಲವಿದೆ. ಒಂದನೇ ಹಾಗೂ ಎರಡನೇ ಟರ್ಮಿನಲ್‌ಗೆ ಈ ರನ್‌ವೇ ಸಂಪರ್ಕ ಕಲ್ಪಿಸಲಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು